Site icon Vistara News

Kannada Rajyotsava: ಕನ್ನಡ ನಾಡು ʻಕರ್ನಾಟಕʼ ಆಗಿದ್ದು ಹೇಗೆ?

Kannada Rajyotsava

ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ, ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಆಗುವಾಗ ʻಮೈಸೂರುʼ ಎಂಬ ಹೆಸರನ್ನೇ ಕನ್ನಡನಾಡಿಗೆ (Kannada Rajyotsava) ಉಳಿಸಿಕೊಳ್ಳಲಾಗಿತ್ತು ಎಂಬುದು ಗೊತ್ತಿರುವ ಸಂಗತಿ. ಹೀಗೆ ʻವಿಶಾಲ ಮೈಸೂರುʼ ಎಂಬ ನಾಮಧೇಯ ಹೊತ್ತ ರಾಜ್ಯವೊಂದು ʻಕರ್ನಾಟಕʼ ಎನಿಸಿಕೊಂಡಿದ್ದು 1973ರ ನವೆಂಬರ್‌ 1ರಂದು. ನಾವೆಲ್ಲ ಕರ್ನಾಟಕದವರಾಗಿ 50 ವರ್ಷಗಳ ಸಂದ ಈ ಹೊತ್ತಿನಲ್ಲಿ, ನಮ್ಮ ರಾಜ್ಯಕ್ಕೆ ಈ ಹೆಸರೇಕೆ ಬಂತು ಎಂಬ ಕುತೂಹಲವಿರಬಹುದು. ಮೈಸೂರು ಸಂಸ್ಥಾನ ದೀರ್ಘಕಾಲದಿಂದ ಅಸ್ತಿತ್ವದಲ್ಲಿ ಇದ್ದುದರಿಂದ ರಾಜ್ಯಕ್ಕೆ ಆ ಹೆಸರು ಬಂದಿದ್ದು ಸಹಜ. ಆದರೆ ಕರ್ನಾಟಕವೆಂಬ ಯಾವುದೇ ಒಂದು ಸಂಸ್ಥಾನ, ಊರು ಇಲ್ಲದಿದ್ದಾಗಲೂ ಆ ಹೆಸರು ಬಂದಿದ್ದು ಹೇಗೆ ಮತ್ತು ಎಂದಿನಿಂದ? ನಮ್ಮ ರಾಜ್ಯದ ಹೆಸರಿನ ಬಗೆಗೊಂದಿಷ್ಟು ಜಿಜ್ಞಾಸೆಯಿದು.

ಸಾವಿರಾರು ವರ್ಷಗಳ ಇತಿಹಾಸ

ಈ ಬಗ್ಗೆ ಭಾಷಾ ವಿದ್ವಾಂಸರಲ್ಲಿ ಬಹಳಷ್ಟು ಅಭಿಪ್ರಾಯಗಳು ಪ್ರಕಟವಾಗಿವೆ. ಆದರೆ ʻಇದಮಿತ್ಥಂʼ ಎನ್ನುವಂಥ ಒಂದು ವ್ಯುತ್ಪತ್ತಿ ಸೂತ್ರವನ್ನು ಎಲ್ಲಿಯೂ ನೀಡಲಾಗಿಲ್ಲ. ಆದರೆ ಕರ್ನಾಟಕ ಎಂಬ ಶಬ್ದಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವುದನ್ನು ಖಚಿತವಾಗಿ ಭಾಷಾ ತಜ್ಞರು ಮತ್ತು ಇತಿಹಾಸಕಾರರು ಹೇಳಿದ್ದಾರೆ. ನಮ್ಮ ದೇಶದ ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ ಕರ್ಣಾಟ(ಕ), ಕರ್ನಾಟ(ಕ) ಮುಂತಾದ ಶಬ್ದಗಳು ಉಲ್ಲೇಖಗೊಂಡಿವೆ. ಶೂದ್ರಕ ಕವಿಯ ʻಮೃಚ್ಛಕಟಿಕʼ, ವರಾಹಮಿಹಿರನ ʻಬೃಹತ್‌ ಸಂಹಿತʼ, ಭಾಗವತ ಪುರಾಣ, ಮಾರ್ಕಂಡೇಯ ಪುರಾಣಗಳಲ್ಲೂ ಇಂಥ ಶಬ್ದಗಳು ಕಾಣಿಸಿಕೊಂಡಿವೆ. ಕನ್ನಡ ಭಾಷೆಯಲ್ಲಿ ಲಭ್ಯವಿರುವ ಪ್ರಾಚೀನ ಗದ್ಯಕೃತಿಯಾದ ವಡ್ಡಾರಾಧನೆ, ಪಂಪನ ಕೃತಿಗಳು, ನಾಗವರ್ಮನ ʻಕರ್ಣಾಟಕ ಕಾದಂಬರಿʼಯಂಥ ಗ್ರಂಥಗಳಲ್ಲಿ ಈ ಶಬ್ದದ ಬಳಕೆಯನ್ನು ಕಾಣಬಹುದು. ಆದರೆ ಇವೆಲ್ಲ ಈಗ ಪ್ರಚಲಿತವಿರುವ ಸ್ವರೂಪದಲ್ಲಿ ಮತ್ತು ಅರ್ಥದಲ್ಲಿ ಬಳಕೆಯಾಗಿದ್ದಲ್ಲ. ಇವೆಲ್ಲ ದೇಶ, ಭಾಷೆ, ಜನ, ಕುಲಗಳನ್ನು ಸೂಚಿಸುವಂತೆ ತೋರುತ್ತವೆ.

ಪ್ರಾಚೀನ ಶಾಸನಗಳಲ್ಲೂ ಉಲ್ಲೇಖ

ಸಾಹಿತ್ಯ ಗ್ರಂಥಗಳು ಮಾತ್ರವಲ್ಲ, ಪ್ರಾಚೀನ ಶಾಸನಗಳೂ ಈ ಬಗ್ಗೆ ಬೆಳಕು ಚೆಲ್ಲುತ್ತವೆ. ಕದಂಬರದ ದೊರೆ ಶಾಂತಿವರ್ಮನ ಶಾಸನ, ತಲಕಾಡಿನ ಗಂಗರಸರದ್ದು ಎನ್ನಲಾದ ಒಂದು ತಾಮ್ರ ಶಾಸನ, ರಾಷ್ಟ್ರಕೂಟರ ದಂತಿದುರ್ಗ ದೊರೆಯ ತಾಮ್ರ ಶಾಸನಗಳು ಸೇರಿದಂತೆ ನೂರಾರು ಶಾಸನಗಳಲ್ಲಿ ಕರ್ಣಾಟ(ಕ), ಕರ್ನಾಟ(ಕ) ಶಬ್ದಗಳು ಅಥವಾ ಅವುಗಳ ಬೇರೆ ಸ್ವರೂಪಗಳು ಕಾಣಸಿಗುತ್ತವೆ. ಕನ್ನಡದ್ದು ಮಾತ್ರವಲ್ಲ, ತಮಿಳುಭಾಷೆಯ ಶಾಸನಗಳಲ್ಲೂ ಇವುಗಳನ್ನು ಕಾಣಬಹುದು. ಪಾಂಡ್ಯರಾಜನಾದ ಶೆಡೈಯನ್‌ ಪರಾಂತಕನ ವೇಳ್ವೆಕುಡಿ ತಾಮ್ರ ಶಾಸನದಲ್ಲಿ ʻಕರುನಾಡಗನ್‌ʼ ಎಂಬಂತೆ ಬಳಕೆಯಾಗಿದೆ. ಇತರ ತಮಿಳು ಶಾಸನಗಳಲ್ಲಿ ʻಕನ್ನಾಟ, ಕನ್ನಾಟಕ, ಕನ್ನಾಡಗರುಂʼ ಎಂದೆಲ್ಲಾ ಉಲ್ಲೇಖಗಳಿವೆ. ಈ ಎಲ್ಲಾ ಆಧಾರಗಳ ಮೇಲೆ, ಕರುನಾಡು, ಕರ್ನಾಟ, ಕರ್ಣಾಟ ಎಂಬ ಬಳಕೆಗಳು ಸಾವಿರಾರು ವರ್ಷಗಳ ಹಿಂದಿನಿಂದಲೂ ಇತ್ತು ಎನ್ನಬಹುದು.

ಇದಲ್ಲದೆ, ವಿದ್ವಾಂಸರಿಂದ ವ್ಯಕ್ತವಾದ ಕೆಲವು ಆಸಕ್ತಿಕರ ಅಭಿಪ್ರಾಯಗಳು ಹೀಗಿವೆ

ಇಂಥದ್ದು ಒಂದೆರಡಲ್ಲ, ಬಹಳಷ್ಟು ವಾದ, ಚರ್ಚೆ, ಜಿಜ್ಞಾಸೆಗಳು ತಜ್ಞರ ನಡುವೆ ನಡೆದಿದೆ. ದೇಶ್ಯ ಶಬ್ದವಾದ ʻಕನ್ನಡʼ ಎಂಬುದು ಸಂಸ್ಕೃತದಲ್ಲಿ ʻಕರ್ಣಾಟʼವಾಯಿತು ಎಂಬ ಅಭಿಮತವೂ ಇದೆ.

ವ್ಯಾಪ್ತಿ ಏನು?

ʻಕರ್ನಾಟಕʼ ಎಂಬ ಶಬ್ದದ ಜೊತೆಗೆ ʻಕುಂತಲʼ ಎಂಬ ಪದವೂ ಶಾಸನಗಳಲ್ಲಿ ಕಂಡುಬರುತ್ತದೆ. ಈ ಕರ್ನಾಟಕ-ಕುಂತಲಗಳು ಕೆಲವೊಮ್ಮೆ ಒಂದಕ್ಕೊಂದು ಪರ್ಯಾಯವಾಗಿ, ಕೆಲವೊಮ್ಮೆ ಪ್ರತ್ಯೇಕವಾಗಿ ಶಾಸನಗಳಲ್ಲಿ ಬಳಕೆಯಾಗಿವೆ. ಸ್ಥೂಲವಾಗಿ ಹೇಳುವುದಾದರೆ, ಈ ಕುಂತಲ ಪ್ರಾಂತ್ಯವು ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕದ ಕರಾವಳಿಗಳನ್ನು ಬಿಟ್ಟು, ಉಳಿದಂತೆ ಕನ್ನಡ ಮಾತಾಡುವವರು ವಾಸಿಸುತ್ತಿದ್ದ ಜಾಗಗಳನ್ನು ಉದ್ದೇಶಿಸಿದಂತೆ ಕಾಣುತ್ತದೆ. ಬಾದಾಮಿ ಚಾಲುಕ್ಯರು, ಗಂಗರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಮೈಸೂರು ಅರಸರು- ಎಲ್ಲ ದೊರೆಗಳು ತಮ್ಮನ್ನು ಕರ್ನಾಟಕ ರಾಜ್ಯದ ಅರಸರೆಂದು ಹೇಳಿಕೊಂಡಿದ್ದಾರೆ. ಹಾಗಾಗಿ ಕನ್ನಡ ಮಾತಾಡುವವರು ವ್ಯಾಪ್ತಿ ಬಹುದೊಡ್ಡದಿತ್ತು ಮತ್ತು ಆ ಪ್ರದೇಶಗಳನ್ನೆಲ್ಲಾ ಕರ್ನಾಟಕ ಎಂದೇ ಕರೆಯಲಾಗುತ್ತಿತ್ತು ಎಂಬುದು ಸ್ಪಷ್ಟ. ಹಾಗಾಗಿ ಕನ್ನಡ ಸೀಮೆಗೆ ಕರ್ನಾಟಕ ಎಂಬ ಹೆಸರಿನ ಬಳಕೆ ಅಧಿಕೃತವಾಗಿ ಜಾರಿಗೆ ಬಂದಿದ್ದು 1973ರಲ್ಲೇ ಆದರೂ, ಜನಬಳಕೆಯ ಭಾಷೆಯಲ್ಲಿ ಈ ಹೆಸರು ಪ್ರಾಚೀನವಾದದ್ದು.

(ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರ ʻಕರ್ನಾಟಕದ ಪ್ರಾಚೀನತೆʼಯನ್ನು ಆಧರಿಸಿ ಸಿದ್ಧಪಡಿಸಿದ ಲೇಖನ)

ಇದನ್ನೂ ಓದಿ: Kannada Rajyotsava: ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ…

Exit mobile version