ನಾಡೊಂದು (Kannada Rajyotsava) ಸುಭಿಕ್ಷವಾಗಿರಬೇಕಾದರೆ ಅಲ್ಲಿನ ವಾಯುಗುಣ, ಮಳೆ ಮತ್ತು ನೀರಾವರಿ ಮುಖ್ಯ ಭೂಮಿಕೆಯನ್ನು ವಹಿಸುತ್ತವೆ. ಇವುಗಳನ್ನು ಆಧರಿಸಿಯೇ ಆ ಪ್ರಾಂತ್ಯದ ಸಸ್ಯ ಮತ್ತು ಪ್ರಾಣಿ ವರ್ಗ ರೂಪುಗೊಳ್ಳುವುದು, ಕೃಷಿ ಹಾಗೂ ನಾಗರಿಕತೆ ಬೆಳೆಯುವುದು.
ರಾಜ್ಯದ ವಿಸ್ತೀರ್ಣ
ಕರ್ನಾಟಕದ ಉದ್ದಗಲವನ್ನು ಹೇಳುವುದಾದರೆ, ಉತ್ತರದಿಂದ ದಕ್ಷಿಣಕ್ಕೆ ಅಂದಾಜು 675 ಕಿ.ಮೀ., ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 480 ಕಿ.ಮೀ. ವಿಸ್ತರಿಸಿಕೊಂಡಿದೆ. ಉತ್ತರದ ಗಡಿಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು, ಪೂರ್ವಕ್ಕೆ ತೆಲಂಗಾಣ, ಆಗ್ನೇಯಕ್ಕೆ ತಮಿಳುನಾಡು ಮತ್ತು ದಕ್ಷಿಣಕ್ಕೆ ಕೇರಳ ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಪಶ್ಚಿಮದ ಅಂಚಿನಲ್ಲಿ ಅರಬ್ಬಿ ಸಮುದ್ರವಿದ್ದು, ಸುಮಾರು 320 ಕಿ.ಮೀ. ಉದ್ದದ ತೀರಪ್ರದೇಶವಿದೆ.
ಕರ್ನಾಟಕದ ಹವೆಯನ್ನು ಉಪ-ಉಷ್ಣವಲಯದ್ದೆಂದು ಕರೆಯಲಾಗುತ್ತದೆ. ರಾಜ್ಯದ ಬೆರಳೆಣಿಕೆಯ ಭಾಗಗಳನ್ನು ಬಿಟ್ಟರೆ, ಉಳಿದೆಡೆಗಳಲ್ಲಿ ಹವಾಮಾನದಲ್ಲಿ ವಿಪರೀತ ಎನ್ನುವಷ್ಟು ಏರುಪೇರಾಗದು. ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಚಳಿಗಾಲವಿದ್ದರೆ, ಮಾರ್ಚ್‌ನಿಂದ ಮೇ ತುದಿಯವರೆಗೆ ಬೇಸಿಗೆ. ಜೂನ್‌ನಲ್ಲಿ ನೈಋತ್ಯ ಮುಂಗಾರು ಪ್ರಾರಂಭವಾದರೆ, ಸೆಪ್ಟೆಂಬರ್‌ನಲ್ಲಿ ಅಂತ್ಯ. ಆನಂತರ ಹಿಂಗಾರು ಮಳೆ ಅಲ್ಲಲ್ಲಿ ತಂಪೆರೆಯುತ್ತದೆ. ನೈಋತ್ಯ ಮಾರುತಗಳು ತರುವ ಮೋಡಗಳಿಂದ ರಾಜ್ಯದ ಪಶ್ಚಿಮ ಭಾಗಗಳಲ್ಲಿ ಮಳೆ ಹೆಚ್ಚು. ಅದರಲ್ಲೂ ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಅಧಿಕ. ಹಿಂಗಾರಿನಲ್ಲಿ ಈಶಾನ್ಯ ಮಾರುತಗಳಿಂದ ಸುರಿಯುವ ಮಳೆಯು ರಾಜ್ಯದ ಈಶಾನ್ಯ ಮತ್ತು ಪೂರ್ವ ಭಾಗಗಳಿಗೆ ಅಗತ್ಯ ನೀರನ್ನು ಉಣಿಸುತ್ತದೆ.
ಉಷ್ಣಾಂಶ
ರಾಜ್ಯದ ಹೆಚ್ಚಿನ ಭಾಗಗಳು ಸಮುದ್ರ ಮಟ್ಟಕ್ಕಿಂತ ಎತ್ತರದಲ್ಲಿವೆ. ಹಾಗಾಗಿ ವರ್ಷದುದ್ದಕ್ಕೂ ತಾಪಮಾನದಲ್ಲಿ ಅತಿರೇಕದ ವ್ಯತ್ಯಾಸ ಕಾಣದೆ, ಸಮಧಾತು ಎನಿಸುವಂಥ ವಾಯುಗುಣವಿರುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ 20-30 ಡಿಗ್ರಿ ಸೆ. ಇರುವುದು ಸಾಮಾನ್ಯ. ಕೆಲವು ಸ್ಥಳಗಳಲ್ಲಿ ಮಾತ್ರ ಇದಕ್ಕಿಂತ ಹೆಚ್ಚಿನ ಏರಿಳಿತ ಕಂಡು ಬರುತ್ತದೆ. ಬೇಸಿಗೆಯ ದಿನಗಳಲ್ಲಿ ಸಾಧಾರಣವಾಗಿ 30-40 ಡಿಗ್ರಿ ಸೆ. ತಾಪಮಾನ ಕಂಡುಬರುತ್ತದೆ. ಇದಕ್ಕೂ ಕೆಲವು ಸ್ಥಳಗಳು ಅಪವಾದ ಎನಿಸಬಹುದು.
ರಾಜ್ಯದ ಮಧ್ಯ ಪ್ರಸ್ಥಭೂಮಿಯ ಪ್ರದೇಶಗಳಾದ ಹಾಸನ, ಮೈಸೂರು, ಬೆಂಗಳೂರು, ಧಾರವಾಡ ಮುಂತಾದ ಜಿಲ್ಲೆಗಳಲ್ಲಿ ವರ್ಷವಿಡೀ ಒಳ್ಳೆಯ ಹವಾಮಾನವೇ ಇರುತ್ತದೆ. ಕರಾವಳಿಗೆ ಹೋದಂತೆ ಮಳೆ ಮತ್ತು ಸೆಕೆ ಎರಡೂ ಹೆಚ್ಚೆನಿಸುತ್ತದೆ. ಇಲ್ಲಿ ಚಳಿಗಾಲ ಹಿತಕರ. ಉತ್ತರ ಕರ್ನಾಟಕದಲ್ಲಿ ಬಿಸಿಲಿನ ಜೊತೆಗೆ ಒಣಹವೆ. ಚಳಿಗಾಲದಲ್ಲಿ ಕೆಲವೊಮ್ಮೆ ಚಳಿಯೂ ಹೆಚ್ಚೆನಿಸುತ್ತದೆ.
ಮಳೆಯ ಸ್ವರೂಪ
ಉತ್ತರ ಭಾರತದ ಪ್ರದೇಶಗಳಂತೆ ಉಷ್ಣಾಂಶದಲ್ಲಿ ಸಿಕ್ಕಾಪಟ್ಟೆ ಏರುಪೇರು ಕಾಣದಿದ್ದರೂ, ಮಳೆಯ ಪ್ರಮಾಣದಲ್ಲಿ ತೀವ್ರ ವ್ಯತ್ಯಾಸವನ್ನು ರಾಜ್ಯದಲ್ಲಿ ದಾಖಲಿಸಬಹುದು. ಇತ್ತೀಚಿನ ವರ್ಷಗಳಲ್ಲಿ ಭೂಮಿ ಬಿಸಿಯಾದ ಪರಿಣಾಮವಾಗಿ ಮಳೆಯ ನೈಸರ್ಗಿಕ ಸ್ವರೂಪದಲ್ಲಿ ಅಡೆತಡೆ ಆಗಿರುವುದು ಹೌದಾದರು, ಲಾಗಾಯ್ತಿನಿಂದ ಸುರಿಯುತ್ತಿರುವ ವಾಡಿಕೆಯ ಮಳೆಯನ್ನು ಗಮನಿಸಬೇಕಾಗುತ್ತದೆ.
ವರ್ಷದ ಸರಾಸರಿ ಮಳೆಯ ಪ್ರಮಾಣವು ರಾಜ್ಯದ ಪಶ್ಚಿಮದಿಂದ ಪೂರ್ವಕ್ಕೆ ಹೋದಂತೆ ಮಹತ್ವದ ವ್ಯತ್ಯಾಸವನ್ನು ದಾಖಲಿಸುತ್ತದೆ. ಪಶ್ಚಿಮದಲ್ಲಿ ಘನವಾಗಿ ನಿಂತಿರುವ ಘಟ್ಟ ಪ್ರದೇಶಗಳು ಇರುವಲ್ಲಿ, ಅಂದರೆ ಉತ್ತರಕನ್ನಡ, ಅವಿಭಜಿತ ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಮಳೆ ದಾಖಲಾಗುತ್ತದೆ. ಮಧ್ಯ ಮತ್ತು ಆಗ್ನೇಯ ಭಾಗಗಳಲ್ಲಿ, ಅಂದರೆ ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು, ಹಾಸನ ಪ್ರಾಂತ್ಯಗಳಲ್ಲಿ ಸಾಧಾರಣ ಮಳೆ ಕಂಡುಬರುತ್ತದೆ. ಉಳಿದ ಭಾಗಗಳು, ಅಂದರೆ ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ, ಕೊಪ್ಪಳ, ಗದಗ, ಬಳ್ಳಾರಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ಚಾಮರಾಜನಗರ ಭಾಗಗಳು ಕಡಿಮೆ ಮಳೆಯನ್ನು ದಾಖಲಿಸುವ ಪ್ರಾಂತ್ಯಗಳು. ಇವುಗಳಲ್ಲಿ ಹೆಚ್ಚಿನ ಭಾಗಗಳು ಮಳೆ ನೆರಳಿನ ಪ್ರದೇಶಗಳಾದ್ದರಿಂದ, ಶುಷ್ಕವಾಗಿವೆ.
ಭೂರಚನೆ
ರಾಜ್ಯದ ಭೂರಚನೆಯನ್ನು ಗಮನಿಸಿ ನಾಲ್ಕು ವಿಭಾಗಗಳನ್ನಾಗಿ ಮಾಡಲಾಗಿದೆ. ಕರಾವಳಿಯ ತೀರ, ಮೇಲಿನ ಘಟ್ಟ ಪ್ರದೇಶ, ವಾಯವ್ಯದ ಕಪ್ಪು ಮಣ್ಣಿನ ಭೂಮಿ ಮತ್ತು ಪೂರ್ವದ ಪ್ರಸ್ಥಭೂಮಿ. ಸಮುದ್ರದ ಭಾಗ ಅಥವಾ ಘಟ್ಟ ಪ್ರದೇಶದಿಂದ ಮಾತ್ರವೇ ಸಂಪರ್ಕ ಸಾಧಿಸಲಾಗುವ ಕರಾವಳಿಯಲ್ಲಿ ಸಮುದ್ರ ಸೇರುವ ನದಿಗಳು ಅಡಿಗಡಿಗೆ ಕಾಣುತ್ತವೆ. ಹಾಗಾಗಿ ಉಪ್ಪು ನೀರು ಮತ್ತು ಮರಳು ಮಣ್ಣಿನ ಭೂಮಿಯಿದು. ಇದರಿಂದ ಪೂರ್ವಕ್ಕೆ ಕಡಿದಾದ ಘಟ್ವವಿದ್ದು ಸರಾಸರಿ 3000 ಅಡಿಗಳಷ್ಟು ಭೂಮಿ ಮೇಲೇರುತ್ತದೆ. ಇದು ಮಲೆನಾಡು ಮತ್ತು ಮಳೆನಾಡೂ ಹೌದಾದ್ದರಿಂದ ಜಲಾನಯನ ಪ್ರದೇಶವಿದು. ನಡುವಿನ ಪ್ರಸ್ಥಭೂಮಿಯ ಹೆಚ್ಚಿನ ಭಾಗ ಬಯಲಿನಂತಿದ್ದು, ಕೃಷ್ಣಾ, ತುಂಗಭದ್ರಾ, ಕಾವೇರಿಯಂಥ ನದಿಯ ಬಯಲುಗಳು ಫಲವತ್ತಾಗಿವೆ. ಈಶಾನ್ಯ ಭಾಗದ ಕಪ್ಪು ಮಣ್ಣಿನ ಪ್ರದೇಶ ಸತ್ವಯುತವಾಗಿದೆ.
ಇದನ್ನೂ ಓದಿ: Kannada Rajyotsava: ಪ್ರಾಚೀನ ಕವಿಗಳ ಕಾವ್ಯಕುಂಚದಲ್ಲಿ ಮೂಡಿದ ಕನ್ನಡ, ಕರ್ನಾಟಕದ ಬಿಂಬಗಳು