ಬೆಂಗಳೂರು: ಬಾರ್ ಮತ್ತು ವೈನ್ ಸ್ಟೋರ್‌ಗಳಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಗಳನ್ನು ಅಬಕಾರಿ ಇಲಾಖೆ ಹಾಗೂ ಪರಿಷತ್ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಸುದ್ದಿ ಕನ್ನಡ ಸಾಹಿತ್ಯ ಪರಿಷತ್ ಗಮನಕ್ಕೆ ಬಂದಿದೆ. ಈ ಕೃತ್ಯ ಮಾಡುವವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿದ್ದಾರೆ.
ಖ್ಯಾತ ಚಿತ್ರ ಕಲಾವಿದ ಬಿ.ಕೆ.ಎಸ್. ಶರ್ಮಾ ಅವರು ಚಿತ್ರಿಸಿದ ತಾಯಿ ಭುವನೇಶ್ವರಿಯ ಭಾವಚಿತ್ರವು ಮಾರಾಟ ಮಳಿಗೆಯಲ್ಲಿ ಮಾರಾಟಕ್ಕಿದೆ. ಜತೆಗೆ ಅಂತರ್ಜಾಲ ತಾಣಗಳಲ್ಲಿಯೂ ಲಭ್ಯವಿದೆ. ಆದರೆ, ಇದನ್ನು ಕೆಲವರು ಡೌನ್‌ಲೋಡ್ ಮಾಡಿ ಕೆಲವು ಕಡೆಗಳಲ್ಲಿ ಹಂಚಿರುವುದು ಪರಿಷತ್ ಗಮನಕ್ಕೆ ಬಂದಿತ್ತು. ಇನ್ನು ಕೆಲವು ಸಮಾಜ ಘಾತುಕರು ಕನ್ನಡದ ಹೆಸರಿನಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಗಳನ್ನು ಬಾರ್‌ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವು ಕಡೆಗಳಲ್ಲಿ ಅಬಕಾರಿ ಇಲಾಖೆಯವರೇ ಮಾರಿದ್ದಾರೆ ಎನ್ನುವ ಮಾಹಿತಿಗಳು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಅಭಿಮಾನಿಗಳಿಗೆ ಶುಭಾಶಯ ಕೋರಿದ ಆರ್‌ಸಿಬಿಯ ಸ್ಟಾರ್ ಆಟಗಾರರು
ಕನ್ನಡ ಸಾಹಿತ್ಯ ಪರಿಷತ್‌ಗೆ ನಾಡಿನಲ್ಲಿ ಅಪಾರ ಗೌರವ ಮತ್ತು ಜವಾಬ್ದಾರಿ ಇದೆ. ಈ ಹಿನ್ನೆಲೆಯಲ್ಲಿ ವಿಷಯ ಅರಿತ ತಕ್ಷಣ ಬೆಂಗಳೂರು ಪೊಲೀಸ್ ಆಯುಕ್ತ ಹಾಗೂ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದು, ತಕ್ಷಣ ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಕನ್ನಡಿಗರ ಭಾವನೆಗಳ ಜತೆ ಆಟವಾಡುತ್ತಿರುವವರನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಸಾಪ ದೂರು ನೀಡಿದೆ ಎಂದು ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಹೆಸರನ್ನು ಅಥವಾ ಮಾತೆ ಭುವನೇಶ್ವರಿಯನ್ನು ಅವಮಾನ ಮಾಡುವುದನ್ನು ಯಾವೊಬ್ಬ ಕನ್ನಡಿಗನು ಸಹಿಸುವುದಿಲ್ಲ. ಅದೇ ರೀತಿ ಇಂತಹ ಅಸಂಬದ್ಧ ವ್ಯಕ್ತಿಗಳು ಯಾರೇ ಆದರೂ ಅವರ ವಿರುದ್ಧ ಕ್ರಮ ನಡೆಯಲೇಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ ಮುಖ್ಯ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ| ಈ ಬಣ್ಣದ ಮನೆಯ ಕಣ ಕಣದಲ್ಲೂ ಕನ್ನಡದ ಕಂಪು; ಇದು ಕನ್ನಡಾಂಬೆಯ ನಿತ್ಯಪೂಜೆಯ ಗುಡಿ!