ಬೆಂಗಳೂರು: ಕರುನಾಡು ಕಂಡ ಮಹಾನ್ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮಾ (BKS Varma Death) ಅವರು ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲು ಬಡಿದಂತಾಗಿದೆ. ಅವರು ಕನ್ನಡ ಸಾಹಿತ್ಯ ಪರಿಷತ್‌ಗೆ ತಾಯಿ ಭುವನೇಶ್ವರಿಯ ಚಿತ್ರವನ್ನು ರಚಿಸಿಕೊಡುವ ಮೂಲಕ ಸಮಸ್ತ ಕನ್ನಡಿಗರ ಹೆಮ್ಮೆಯ ಕನ್ನಡಾಂಬೆಯ ಪರಿಕಲ್ಪನೆಯನ್ನು ನೀಡಿದ ಶ್ರೇಷ್ಠ ಬಣ್ಣದ ಗಾರುಡಿಗ ಎಂದು ಬಣ್ಣಿಸಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಕಂಬನಿ ಮಿಡಿದಿದ್ದಾರೆ.
೧೯೪೯ರ ಸೆಪ್ಟೆಂಬರ್ ೫ರಂದು ಬೆಂಗಳೂರಿನ ಅತ್ತಿಗುಪ್ಪೆ ಜನಿಸಿದ್ದ ಬಿ.ಕೆ.ಎಸ್. ವರ್ಮಾ ಅವರು ನಮ್ಮನ್ನಗಲಿದ್ದಾರೆ. ಇಂದು ಎಲ್ಲೆಲ್ಲಿಯೂ ಶೋಭಿಸುತ್ತಿರುವ ಕನ್ನಡ ಮಾತೆಯನ್ನು ಚಿತ್ರಿಸಿ ನೀಡಿದ ಇವರ ಪೂರ್ಣ ಹೆಸರು ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ. ಮೈಸೂರಿನ ಜಗನ್‌ಮೋಹನ ಅರಮನೆಯಲ್ಲಿ ರಾಜಾ ರವಿವರ್ಮರ ಕಲಾಕೃತಿಗಳನ್ನು ಆರಾಧ್ಯ ಭಾವದಿಂದ ಅನುಭಾವಿಸಿದ ಶ್ರೀನಿವಾಸ ಎಂಬ ಅಂದಿನ ಹುಡುಗನ ಹೃದಯದಲ್ಲಿ ನಾನೂ ಇಂಥ ಕಲಾವಿದನಾಗಬೇಕು ಎಂಬ ಸಂಕಲ್ಪ ಮಿಂಚಿನಂತೆ ಬಂದಿತ್ತು. ಅದರ ಪರಿಣಾಮವೇ ತನ್ನ ಹೆಸರಿಗೆ ವರ್ಮಾ ಎಂಬ ಹೆಸರನ್ನು ಸೇರಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದರು. ಅವರಲ್ಲಿ ಅಡಗಿದ್ದ ಕಲಾವಂತಿಕೆಯ ಮೂಲಕವೇ ತನ್ನ ಹೆಸರಿನೊಂದಿಗೆ ವರ್ಮಾ ಎನ್ನುವ ಹೆಸರು ಅರಸಿಕೊಂಡು ಬರುವಂತೆ ಮಾಡಿಕೊಂಡಿದ್ದರು ಎಂದು ನಾಡೋಜ ಡಾ. ಮಹೇಶ ಜೋಶಿ ನೆನೆಪಿಸಿಕೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಬಿ.ಕೆ.ಎಸ್. ವರ್ಮಾ ಅವರು “ಇದ್ದುದನ್ನು ಇರುವ ಹಾಗೇ ಬರೆಯುವುದು ಚಾರ್ಟ್, ಅದನ್ನು ಅನುಭವಿಸಿ ಬರೆಯುವುದು ಆರ್ಟ್” ಎಂದು ಮಾರ್ಮಿಕವಾಗಿ ನುಡಿಯುತ್ತಿದ್ದರು. ಕಲೆಯನ್ನು ಅಂತರಂಗದಲ್ಲಿ ತುಂಬಿಕೊಂಡ ಅವರು ಮೂರನೇಯ ತರಗತಿಗೆ ಓದು ನಿಲ್ಲಿಸಿ ಮನೆ ಬಿಟ್ಟು ಹೊರಟಾಗ ಅವರಿಗೆ ಕೇವಲ ಎಂಟು ವರ್ಷ ವಯಸ್ಸು. ಮಹಾನ್ ಕಲಾವಿದ ಎ.ಸಿ.ಎಚ್. ಆಚಾರ್ಯ ಮತ್ತು ಅ.ನ..ಸುಬ್ಬರಾಯರ ಪ್ರಭಾವವನ್ನು ಪಡೆದು ಚಿತ್ರ ಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು ೧೫ನೇ ವಯಸ್ಸಿನಲ್ಲಿ ಹಿಂದಿಯ ‘ಆದ್ಮಿ’ ಚಲನಚಿತ್ರಕ್ಕೆ ಸಹಾಯಕ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದರು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | BKS Varma Death News : ದೇವರನ್ನೇ ಧರೆಗಿಳಿಸಿದ ದೈವದತ್ತ ಪ್ರತಿಭೆ ಬಿ.ಕೆ.ಎಸ್ ವರ್ಮಾ; ವರ್ಮ ಸರ್‌ನೇಮ್ ಬಂದಿದ್ದು ಹೇಗೆ?
ʼದೀಪʼ ಚಿತ್ರಕ್ಕಾಗಿ ಇಡೀ ಹನುಮಂತ ನಗರದ ಗುಡ್ಡವನ್ನು ತಮ್ಮ ಚಿತ್ರಗಳಿಂದ ಸಿಂಗರಿಸಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದು ವಿಶಿಷ್ಟ ದಾಖಲೆ. ʼಬಂಗಾರದ ಜಿಂಕೆʼ ಚಿತ್ರಕ್ಕಾಗಿ ರೂಪಿಸಿದ್ದ ಬಂಗಾರದ ಜಿಂಕೆ ವಿಶಿಷ್ಟವಾಗಿತ್ತು. ಇಂತಹ ಹಲವು ಅಪರೂಪದ ಪ್ರಯೋಗಗಳನ್ನು ಅವರು ಮಾಡಿದ್ದರು ಎನ್ನುವುದನ್ನು ನೆನಪಿಸಿಕೊಂಡ ನಾಡೋಜ.ಡಾ.ಮಹೇಶ ಜೋಶಿ ಅವರು, ಹಲವು ಪತ್ರಿಕೆಗಳಲ್ಲಿ ಕೂಡ ಅವರು ಚಿತ್ರ ಕಲಾವಿದರಾಗಿ ಕೆಲಸ ಮಾಡಿದ್ದನ್ನು ಸ್ಮರಿಸಿದ್ದಾರೆ.
ಬಿ.ಕೆ.ಎಸ್. ವರ್ಮ ಅವರು ಸರ್ವೇಪಲ್ಲಿ ರಾಧಾಕೃಷ್ಣನ್, ವಿಜಯಲಕ್ಷ್ಮೀ ಪಂಡಿತ್, ಜಯಚಾಮರಾಜೇಂದ್ರ ಒಡೆಯರ್, ಶಿವರಾಮ ಕಾರಂತ, ಕುವೆಂಪು, ರೋರಿಚ್ ದೇವಿಕಾರಾಣಿ ದಂಪತಿ, ವರನಟ ಡಾ.ರಾಜಕುಮಾರ್, ಎಂ.ಜಿ.ಆರ್, ಅಮಿತಾಬ್ ಬಚ್ಚನ್, ರಜನೀಕಾಂತ್ ಮುಂತಾದ ಗಣ್ಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ದೇವತೆಗಳ ಚಿತ್ರದ ಜತೆಗೆ ಇವರು ರಚಿಸಿದ ಕನ್ನಡಾಂಬೆಯ ಚಿತ್ರ ನಿತ್ಯ ನೂತನವಾಗಿದೆ. ಪರಿಸರದ ಮಹತ್ವವನ್ನು ತಿಳಿಸಿಕೊಡಲು ತನ್ನ ಕುಂಚವನ್ನು ಬಳಸಿಕೊಂಡ ವರ್ಮಾ ಅವರು ಶತಾವಧಾನಿ ಆರ್. ಗಣೇಶ್ ಅವರ ಅವಧಾನ ಕಾರ್ಯಕ್ರಮಗಳು, ಹಾಸ್ಯೋತ್ಸವ ಕಾರ್ಯಕ್ರಮಗಳು, ಕಾವ್ಯಗೋಷ್ಠಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಸದಾ ಕನ್ನಡದ ಬಗ್ಗೆ ಕಾಳಜಿ ಹೊಂದಿದ್ದ ಅವರು ಕಳೆದ ಕೆಲವು ದಿನಗಳ ಹಿಂದೆ ಅವರು ರಚಿಸಿ ಕೊಡುಗೆಯಾಗಿ ನೀಡಿದ ಕನ್ನಡ ತಾಯಿ ಭುವನೇಶ್ವರಿ ಚಿತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧಿಕೃತವಾಗಿ ಬಳಸಿಕೊಳ್ಳಲು ಅಧಿಕೃತ ಒಪ್ಪಿಗೆ ನೀಡುವ ಮೂಲಕ ಕನ್ನಡಿಗರ ಅಸ್ಮಿತೆಗೆ ಕಾರಣರಾಗಿದ್ದರು. ಪರಿಷತ್‌ನೊಂದಿಗೆ ಸದಾ ಒಡನಾಟದಲ್ಲಿ ಇದ್ದ ಬಿ.ಕೆ.ಎಸ್.ವರ್ಮಾ ಅವರ ಸಾವಿನಿಂದ ಉಂಟಾದ ನಿರ್ವಾತವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹೇಳಿದ್ದಾರೆ.
ಇದನ್ನೂ ಓದಿ | BKS Varma Death | ಬಿ.ಕೆ.ಎಸ್. ವರ್ಮ ಅವರಿಗೆ ಕೊನೆಗೂ ಗೌರವ ನೀಡಿತ್ತು ಕನ್ನಡ ಸಾಹಿತ್ಯ ಪರಿಷತ್ತು
ಬಿ.ಕೆ.ಎಸ್.ವರ್ಮಾ ಅವರ ಕಲಾಸೇವೆಯನ್ನು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರದಾನಿಸಿತ್ತು. ಪರಿಸರ ಪ್ರೇಮಕ್ಕೆ ಉದಾಹರಣೆಯಾದ ಅತ್ಯಂತ ಪ್ರಭಾವಿ ವರ್ಣಚಿತ್ರ ‘ವೃಕ್ಷಮಾಲಿನಿ’ಗೆ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಸಂದಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜೀವ್ ಗಾಂಧಿ ಪ್ರಶಸ್ತಿ ಸೇರಿದಂತೆ ಇನ್ನೂ ಅನೇಕ ಪ್ರತಿಷ್ಠಿತ ಸಂಸ್ಥೆಗಳ ಗೌರವಗಳಿಗೆ ಭಾಜನರಾದ ಅವರನ್ನು ಇತ್ತೀಚೆಗೆ ಹಾವೇರಿಯಲ್ಲಿ ನಡೆದ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅವರನ್ನು ಸನ್ಮಾನಿಸುವುದಕ್ಕಾಗಿ ಆಹ್ವಾನಿಸಿದ್ದಾಗ ತಮ್ಮ ಅನಾರೋಗ್ಯದ ಕಾರಣ ಭಾಗವಹಿಸಲು ಸಾಧ್ಯವಾಗದ್ದಕ್ಕೆ ವಿಷಾದಿಸಿ ಸಮ್ಮೇಳನಕ್ಕೆ ಶುಭವನ್ನು ಕೋರಿದ್ದರು ಎಂದು ಸ್ಮರಿಸಿದ್ದಾರೆ.
ಅಪಾರ ಕನ್ನಡ ಕಲಾ ಅಭಿಮಾನಿಗಳನ್ನು, ಕಲಾಸಕ್ತರನ್ನು, ಅಕ್ಕರೆಯ ವಿದ್ಯಾರ್ಥಿ ಗಣವನ್ನು ವರ್ಮಾ ಅವರು ಬಿಟ್ಟು ಹೋಗಿದ್ದಾರೆ. ಮಹನೀಯರ ಆತ್ಮಕ್ಕೆ ಶಾಂತಿ ಸಿಗಲಿ, ಮೃತರ ಕುಟುಂಬಕ್ಕೆ ದು:ಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಕಂಬನಿ ಮಿಡಿಯುತ್ತಿದೆ ಡಾ. ಮಹೇಶ ಜೋಶಿ ಸಂತಾಪ ಸೂಚಿಸಿದ್ದಾರೆ.