ಬೆಂಗಳೂರು: ನ್ಯಾಯಮೂರ್ತಿ ಎಸ್.ಆರ್. ಬನ್ನೂರಮಠ ಅವರ ನೇತೃತ್ವದ ಕರ್ನಾಟಕ ಕಾನೂನು ಆಯೋಗ ಸಿದ್ಧಪಡಿಸಿದ ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ ಅನ್ನು ಪ್ರಸಕ್ತ ಅಧಿವೇಶನದಲ್ಲಿ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪಿಗೆ ಸೂಚಿಸಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ ಸ್ವಾಗತಿಸಿದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ರಾಜ್ಯದ ಬಹುತೇಕ ಸಚಿವರು ಹಾಗೂ ಶಾಸಕರು ಪಕ್ಷಭೇದ ಮರೆತು ʻಕನ್ನಡ ಸಮಗ್ರ ಅಭಿವೃದ್ಧಿ ವಿದೇಯಕ-೨೦೨೨ʼವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಆಳವಾಗಿ ಅಧ್ಯಯನ ನಡೆಸಿ, ಚರ್ಚಿಸಿ ಸಿದ್ಧಪಡಿಸಲಾದ ಈ ವಿಧೇಯಕದ ಕರಡನ್ನು ಜಾರಿ ಮಾಡುವ ಅನಿವಾರ್ಯತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಈಗಾಗಲೇ ಸರ್ಕಾರಕ್ಕೆ ಮನವರಿಕೆ ಮಾಡಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | B S Yediyurappa : ಚುನಾವಣೆಯಲ್ಲಿ ಯಾರ ಬಣ್ಣ ಏನೆಂದು ಗೊತ್ತಾಗುತ್ತೆ
ನಾಡಿನಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವುದರ ಜತೆಗೆ ಅನ್ಯ ಭಾಷೆಗಳ ದಬ್ಬಾಳಿಕೆ ತಗ್ಗಿಸಲು ಜಾರಿಗೆ ತರಲಾಗುತ್ತಿರುವ ʻಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨ʼ ರಾಜ್ಯದಲ್ಲಿ ಕನ್ನಡವನ್ನು ಬಲಪಡಿಸಲು ಅನುಕೂಲ ಮಾಡಿಕೊಡಲಿದೆ. ಈಗಾಗಲೇ ವಿಧೇಯಕದ ಕರಡು ಪ್ರತಿಯನ್ನು ಕಾನೂನು ಆಯೋಗವು, ಕಾನೂನು ಇಲಾಖೆ ತಜ್ಞರೊಂದಿಗೆ ಚರ್ಚೆ ಮಾಡಿ ಸಿದ್ಧಪಡಿಸಿದೆ. ಈ ಮಸೂದೆ ಜಾರಿಗೆ ಬರುವುದರಿಂದ ಕನ್ನಡ ಸಾಹಿತ್ಯ ಪರಿಷತ್‌ಗೆ ಆನೆ ಬಲ ಬಂದಂತಾಗುವುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ ೩೪೫ನೇ ವಿಧಿಯಲ್ಲಿ ಪ್ರತಿ ರಾಜ್ಯದಲ್ಲಿ ಒಂದು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಿಕೊಳ್ಳಲು ಅವಕಾಶವಿದೆ. ನಮ್ಮ ರಾಜ್ಯದಲ್ಲಿ ಕನ್ನಡ ಭಾಷೆ ಅಧಿಕೃತ ಭಾಷೆಯಾಗಿದೆ. ನಮ್ಮ ಆಡಳಿತ ಭಾಷೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ರಾಜ್ಯಭಾಷಾ ಅಧಿನಿಯಮ ೧೯೬೩ ಮತ್ತು ಸ್ಥಳೀಯ ಪ್ರಾಧಿಕಾರಗಳ ಅಧಿನಿಯಮ-೧೯೮೧ ಜಾರಿಗೆ ತಂದಿದೆ. ಇದರೊಂದಿಗೆ ಕನ್ನಡಕ್ಕೆ ಇನ್ನಷ್ಟು ಪುಷ್ಟಿ ನೀಡುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ-೧೯೯೪ನ್ನು ಸಹ ರೂಪಿಸಲಾಗಿದೆ. ಹೀಗೆ ಅನೇಕ ಕಾನೂನುಗಳಿದ್ದರೂ ಸೂಕ್ತವಾಗಿ ಕನ್ನಡ ಅನುಷ್ಠಾನ ಆಗದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಜಾರಿಯಾಗಲಿರುವ ಅಧಿನಿಯಮದಿಂದ ಕನ್ನಡ ಭಾಷೆಯ ಏಳಿಗೆಗೆ ಒತ್ತು ನೀಡಿದಂತಾಗಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಅನ್ನು ಕಾನೂನಾಗಿ ಜಾರಿಗೆ ತರಲು ಎಲ್ಲ ಸದಸ್ಯರು ಸದನದಲ್ಲಿ ಪಕ್ಷಭೇದ ಮರೆತು, “ನಾವೆಲ್ಲರೂ ಕನ್ನಡಿಗರು” ಎಂಬ ಭಾವದಲ್ಲಿ ಒಪ್ಪಿಗೆ ಸೂಚಿಸುವ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ತಮ್ಮ ಅವಧಿಯ ಲೆಕ್ಕ ತೆಗೆದ ಕೂಡಲೆ, ʼಅದೆಲ್ಲ ಈಗೇಕೆ?ʼ ಎಂದು ಎದ್ದುನಿಂತ ಸಿದ್ದರಾಮಯ್ಯ: ಅಶೋಕ್-ಸಿದ್ದು ಜಟಾಪಟಿ
ಕನ್ನಡಿಗರಿಗೆ ಮೊದಲ ಪ್ರಾಧಾನ್ಯತೆ
ಎಸ್.ಎಸ್.ಎಲ್.ಸಿ ತತ್ಸಮಾನ ಪರೀಕ್ಷೆಗಳವರೆಗೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯದ ಉನ್ನತ, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕನ್ನಡ ಭಾಷೆ ಬೋಧನೆ ಮಾಡುವಂತಾಗಬೇಕು. ಅಲ್ಲದೆ, ಉದ್ಯೋಗದಲ್ಲಿ, ನ್ಯಾಯಾಂಗದಲ್ಲಿ, ಸರ್ಕಾರಿ ಅನುದಾನ ಹಾಗೂ ಅನುದಾನರಹಿತ ಸಂಸ್ಥೆಗಳ ಕಾರ್ಯಕ್ರಮದ ಕರಪತ್ರ, ಬ್ಯಾನರ್‌ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಲು ಪ್ರಸಕ್ತ ವಿಧೇಯಕದ ಕರಡಿನಲ್ಲಿ ಪ್ರಸ್ತಾಪಿಸಲಾಗಿದೆ. ಅಂಗಡಿ ಮಳಿಗೆಗಳು, ಆಸ್ಪತ್ರೆಗಳು, ಕಚೇರಿಗಳು ಸೇರಿ ಎಲ್ಲ ಪ್ರಕಾರದ ನಾಮಫಲಕದಲ್ಲಿ ಕಡ್ಡಾಯವಾಗಿ ಅರ್ಧದಷ್ಟು ಬರಹ ಕನ್ನಡದಲ್ಲಿಯೇ ಇರಬೇಕು. ೧೦೦ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಕಾರ್ಯಾಗಾರ ನಡೆಸುವುದರೊಂದಿಗೆ ಕನ್ನಡಿಗರಿಗೆ ಮೊದಲ ಪ್ರಾಧಾನ್ಯತೆ ನೀಡುವುದು ಸೇರಿದಂತೆ ಮುಂತಾದ ವಿಷಯಗಳನ್ನು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ರಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರವಾನಗಿ ರದ್ದತಿಗೂ ಅವಕಾಶ
ವಿಧೇಯಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಬಗ್ಗೆ ಕೀಳರಿಮೆ ಮಾಡಿದರೆ ಅಥವಾ ವಿಧೇಯಕದ ಬಗ್ಗೆ ನಿರ್ಲಕ್ಷ್ಯ ತೋರಿದರೆ ತೆರಿಗೆ ವಿನಾಯಿತಿ, ಧನಸಹಾಯ ಸೇರಿ ಸರ್ಕಾರ ನೀಡುವ ಇತರ ಸೌಲಭ್ಯಗಳನ್ನು ತಡೆ ಹಿಡಿಯುವ ಮತ್ತು ನಿಯಮಗಳ ಉಲ್ಲಂಘಿಸಿದರೆ ಕಾರಣ ಕೇಳಿ ನೋಟಿಸ್ ನೀಡಲು ಅವಕಾಶ ಇರುತ್ತದೆ. ತಪ್ಪಿತಸ್ಥರ ವಿರುದ್ಧ ಮೊದಲನೇ ಅಪರಾಧಕ್ಕೆ ೫,೦೦೦ ರೂಪಾಯಿ, ಎರಡನೆಯ ಅಪರಾಧಕ್ಕೆ ೧೦,೦೦೦ ರೂಪಾಯಿ ನಂತರ ಪ್ರತಿ ಅಪರಾಧಕ್ಕೆ ೨೦,೦೦೦ ರೂಪಾಯಿ ದಂಡ ವಿಧಿಸುವದರ ಜತೆ ಪರವಾನಗಿ ರದ್ದುಪಡಿಸುವ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದು, ಇದು ಕನ್ನಡ ಭಾಷೆ ಉಳಿಸಿ ಬೆಳೆಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Amarinder Singh | ಬಿಜೆಪಿ ಜತೆ ಪಂಜಾಬ್ ಲೋಕ ಕಾಂಗ್ರೆಸ್ ವಿಲೀನಗೊಳಿಸಿದ ಕ್ಯಾಪ್ಟನ್ ಅಮರಿಂದರ್ ಸಿಂಗ್