Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಕಾಶಕರ ಕೊರತೆ

children literature

ಹಾವೇರಿ: ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಸಂಶೋಧನೆ, ಅಧ್ಯಯನ ಆಗಬೇಕು. ಚಿತ್ರಪುಸ್ತಕಗಳು ಪ್ರಕಟವಾಗಬೇಕು ಎಂದು ಮಕ್ಕಳ ಸಾಹಿತಿ ಆನಂದ್ ಪಾಟೀಲ್ ನುಡಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಪು- ಚಂಪಾ ವೇದಿಕೆಯಲ್ಲಿ ನಡೆದ ‘ಮಕ್ಕಳ ಸಾಹಿತ್ಯ- ಮನೋವಿಕಾಸ’ ಗೋಷ್ಠಿಯ ಆಶಯ ನುಡಿಗಳನ್ನು ಅವರು ಆಡಿದರು.

ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಕಾಶಕರ ಕೊರತೆ ಇದೆ. ರಾಜ್ಯದ ವಿಶ್ವ ವಿದ್ಯಾಲಯಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಯಾವುದೇ ವಿಭಾಗಗಳಿಲ್ಲ, ಸಂಶೋಧನೆಗಳು ಜರುಗುತ್ತಿಲ್ಲ. ಕನ್ನಡಕ್ಕಾಗಿಯೇ ಸ್ಥಾಪಿತವಾದ ಹಂಪಿ ವಿಶ್ವವಿದ್ಯಾಲಯವು ಮಕ್ಕಳ ಸಾಹಿತ್ಯವನ್ನು ನಿರ್ಲಕ್ಷಿಸಿದೆ. ಅಕಾಡೆಮಿಗಳು, ಸಾಹಿತ್ಯ ಪರಿಷತ್ತು ಕೂಡ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗುವ ಸಾಹಿತಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇಂಗ್ಲೀಷ್ ಹಾಗೂ ಬಂಗಾಲಿಯಲ್ಲಿ ವಿಫುಲವಾಗಿ ಮಕ್ಕಳ ಸಾಹಿತ್ಯ ರಚನೆಯಾಗಿದೆ. ನವೋದಯ ಸಾಹಿತ್ಯ ಕಾಲಘಟ್ಟದಲ್ಲಿ ಕುವೆಂಪು, ದಿನಕರ ದೇಸಾಯಿ ಸೇರಿದಂತೆ ಕೆಲವು ದಿಗ್ಗಜ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆ ಮಾಡಿದರು. ಇಂಗ್ಲೀಷ್‌ನಲ್ಲಿ ಮಾರ್ಕ್ ಟ್ವೇನ್, ಸಿ.ಎಸ್.ಲೆವಿಸ್, ಜಾಯ್ ಡೆವಿಡ್ ಮನ್ ಪ್ರಸ್ತುತ  ಜೆ.ಕೆ.ರೌಲಿಂಗ್ರಂಥವರು ಅದ್ಭುತ ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಇವು ಕೇವಲ ನೀತಿ ಕಥೆಗಳಾಗಿರದೆ, ಅದ್ಬುತ ಎನಿಸುವ ಕಲ್ಪನಾ ಲೋಕದ ಕಥೆಗಳಾಗಿವೆ ಎಂದರು.

ಮಕ್ಕಳ ಮನೋವಿಕಾಸಕ್ಕಷ್ಟೇ ಅಲ್ಲ, ಸಂಪೂರ್ಣ ವಿಕಾಸಕ್ಕೆ ಸಾಹಿತ್ಯ ಅತ್ಯವಶ್ಯಕ. ಬಾಲ್ಯದಲ್ಲಿ ದೊರೆತ ಗಟ್ಟಿ ಬಾಲ ಸಾಹಿತ್ಯದ ಓದು ನನ್ನನ್ನು ಒಬ್ಬ ಸಾಹಿತಿಯಾಗಿ ರೂಪಿಸಿತು. ಮಕ್ಕಳ ಮನೋಭೂಮಿಕೆ ಬೇರೆ, ಇದಕ್ಕೆ ತಕ್ಕ ಹಾಗೆ ಸಾಹಿತ್ಯ ರಚಿಸುವುದು ಒಂದು ಸವಾಲು. ಇದರ ಜೊತೆಗೆ ಮಕ್ಕಳ ಸಾಹಿತ್ಯವನ್ನು ಪ್ರಕಾಶನ ಮಾಡಲು ಯಾರೂ ಮುಂದೆ ಬರುವುದಿಲ್ಲ. ಇದರ ಮಧ್ಯೆಯೂ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ರಚಿಸುವ ವರ್ಗ ಇದೆ ಎನ್ನುವುದು ಆಶಾದಾಯಕ ಎಂದು ಎಂದು ಹಿರಿಯ ಸಾಹಿತಿ ಡುಂಡಿರಾಜ್ ಹೇಳಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶಿವಶರಣರು ಹೊಸ ಧರ್ಮ ಸ್ಥಾಪಿಸಿದರು ಎನ್ನುವುದು ತಲೆಬುಡವಿಲ್ಲದ ವಾದ: ಡಾ. ಸಂಗಮೇಶ ಸವದತ್ತಿಮಠ ಆಕ್ರೋಶ

ಚಿಕ್ಕಂದಿನಲ್ಲಿ ಮಕ್ಕಳ ಹಾಡು,ನೃತ್ಯ, ನಾಟಕಗಳನ್ನು ಪ್ರೋತ್ಸಾಹಿಸಿ ಆನಂದಿಸುವ ಪೋಷಕರು, 10ನೇ  ತರಗತಿ ವೇಳೆಗೆ ಮಕ್ಕಳನ್ನು ಈ ಚಟುವಟಿಕೆಗಳಿಂದ ದೂರ ಮಾಡುತ್ತಾರೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ಒಳ್ಳೆಯ ಕೆಲಸಗಳಿಗೆ ಮಕ್ಕಳು ತೆರಳಲಿ ಎನ್ನುವುದು ಪೋಷಕರ ಹಂಬಲ. ಆದರೆ ಹೀಗೆ ಓದಿದ ಮಕ್ಕಳು ಸಾಫ್ಟ್ವೇರ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಗುಲಾಮರಂತೆ ದುಡಿಯುವ ಪರಿಸ್ಥಿತಿ ಬಂದಿದೆ. ಮಕ್ಕಳು ಹಿರಿಯರನ್ನು ನೋಡಿ ಅನುಕರಿಸಿ ಬೆಳೆಯುತ್ತಾರೆ. ಹಿರಿಯರಂತೆಯೇ ಗ್ಯಾಜೆಟ್ ಗೀಳನ್ನು ಹಚ್ಚಿಕೊಳ್ಳುತ್ತಾರೆ.

ಸರ್ಕಾರ ಮಕ್ಕಳ ಸಂಪೂರ್ಣ ವಿಕಾಸಕ್ಕೆ ಮಕ್ಕಳ ಸಾಹಿತ್ಯ ಅವಶ್ಯಕ ಎಂದು ಮನಗಂಡಿದೆ. ಹಾಗಾಗಿ ಸರಕಾರಿ ಶಾಲೆಗಳಲ್ಲಿ ನಲಿ-ಕಲಿ ಯೋಜನೆ ಜಾರಿಗೊಳಿಸಿದೆ. ಚಿಕ್ಕಂದಿನಲ್ಲಿ ನಾನು ರಚನೆ ಮಾಡಿದ ಸಾಹಿತ್ಯ ಪತ್ರಿಕೆಯ ಮಕ್ಕಳ ಸಾಹಿತ್ಯ ಕಾಲಂಗಳಲ್ಲಿ ಪ್ರಕಟವಾಗುತ್ತಿತ್ತು. ಬೆಳೆದಂತೆ ಮಕ್ಕಳ ಸಾಹಿತ್ಯ ರಚನೆಯಿಂದ ದೂರವಾದೆ. ನಂತರ 2013ರಲ್ಲಿ ನಮ್ಮ ಮನೆಗೆ ಬಂದ ಇಂಚರ ಮತ್ತೆ ನನ್ನನ್ನು ಮಕ್ಕಳ ಸಾಹಿತ್ಯ ರಚನೆಗೆ ಪ್ರೇರೇಪಿಸಿದಳು ಎಂದು ನುಡಿದರು.

ಗೋಷ್ಠಿಯಲ್ಲಿ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತ್ಯ ಬಲವರ್ಧನೆ ಕುರಿತು, ಹಾಲಯ್ಯ ಹಿರೇಮಠ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ವಿಕಾಸದ ಕುರಿತು ಹಾಗೂ ಡಾ.ಕೆ.ಎಸ್.ಪವಿತ್ರಾ ಮಕ್ಕಳ ಸಾಹಿತ್ಯದಲ್ಲಿನ ಪ್ರಯೋಗಶೀಲತೆ ಕುರಿತು ವಿಷಯ ಮಂಡನೆ ಮಾಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಜ್ಞಾನ ಜನಸಾಮಾನ್ಯರ ಬದುಕಿನಲ್ಲಿ ಬೆಳಕು ತರಲಿ: ಡಾ.ಸಿ.ಎನ್.ಮಂಜುನಾಥ್

Exit mobile version