Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ತಾಯಿ ತೇಪೆ ಉಟ್ಟುಕೊಂಡಿದ್ದಾಳೆ ಎಂದು ಎದುರು ಮನೆಯ ತುಂಡು ಲಂಗದ ಹೆಣ್ಣುಮಗಳನ್ನು ಪ್ರೀತಿಸಬೇಡಿ: ದೊರಂಗೌ

doddarangegowda

ಹಾವೇರಿ: ನಮ್ಮಲ್ಲಿ ಆಂಗ್ಲಾ ಭಾಷಾ ವ್ಯಾಮೋಹ ಇಷ್ಟೊಂದು ಯಾಕೆ ಮೇರೆ ಮೀರಿದೆಯೋ ತಿಳಿಯುತ್ತಿಲ್ಲ. ನಮ್ಮ ಕನ್ನಡ ತಾಯಿ ಹರುಕು ಸೀರೆಯಲ್ಲಿರಬಹುದು, ತೇಪೆ ಉಟ್ಟುಕೊಂಡಿರಬಹುದು, ಆದರೆ ಹಾಗೆಂದು ಎದುರು ಮನೆಯಲ್ಲಿರುವ ತುಂಡು ಲಂಗದ ಹೆಣ್ಣು ಮಗಳನ್ನು ಪ್ರೀತಿಸಲು ಹೋಗಬಾರದು ಎಂದು 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡ ನುಡಿದರು.

ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.

ನೀವು ಆಂಗ್ಲ ಭಾಷೆ ಕಲಿಯಬೇಡಿ ಎಂದು ನಾನು ಹೇಳುತ್ತಿಲ್ಲ. ಹಾಗೆ ಎಂದೂ ಹೇಳುವವನಲ್ಲ. ಆದರೆ ಆಂಗ್ಲವೇ ಪರಮೋಚ್ಛವಲ್ಲ. ಫ್ರಾನ್ಸ್‌ನಲ್ಲಿ ಇಂಗ್ಲಿಷ್‌ ಇಲ್ಲ. ಬದಲು ಫ್ರೆಂಚ್‌ನಲ್ಲೇ ಬರೆದ ಎಷ್ಟೋ ಶ್ರೇಷ್ಠ ಸಾಹಿತಿಗಳು ನೊಬೆಲ್‌ ಸರಣಿಗಳನ್ನೇ ಗಳಿಸಿದ್ದಾರೆ. ಹಾಗೆಯೇ ಜರ್ಮನ್‌ ಭಾಷೆ ಕೂಡ ಅಷ್ಟೇ ಸಂಪನ್ನವಾಗಿದೆ. ಅಲ್ಲಿಯೂ ಇಂಗ್ಲಿಷ್‌ನ ಅವಲಂಬನೆಯಿಲ್ಲ. ಕನ್ನಡವೂ ಹಾಗೆಯೇ ಬೆಳೆಯಬೇಕು ಎಂದು ದೊಡ್ಡರಂಗೇಗೌಡ ನುಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ

ನಮ್ಮ ಜನತೆ, ಬಹುಮುಖ್ಯವಾಗಿ ನಮ್ಮ ಯುವಪೀಳಿಗೆ ತಮ್ಮ ಜೀವನದಲ್ಲಿ ಒಂದಕ್ಷರವನ್ನೂ ಕೇಳಿರದ ಒಂದು ಭಾಷೆಯಲ್ಲಿ ಅದು ಜರ್ಮನ್, ಜಪಾನೀಸ್, ಸ್ಪ್ಯಾನಿಷ್, ರಷಿಯನ್, ಮ್ಯಾಂಡರೀನ್ ಮುಂತಾದ ಯಾವುದೇ ಆಗಿರಲಿ, ಆ ಭಾಷೆಗಳನ್ನಾಡುವ ದೇಶಗಳಿಗೆ ಶಿಕ್ಷಣಕ್ಕೆಂದು ತೆರಳಿದಾಗ ಅಲ್ಪ ಅವಧಿಯಲ್ಲಿಯೇ ಆ ಭಾಷೆಗಳನ್ನು ಅರೆಬರೆಯಾಗಿ ಕಲಿತು, ಆ ಭಾಷೆಗಳ ಶಿಕ್ಷಣ ಮಾಧ್ಯಮದಲ್ಲಿಯೇ ವೈದ್ಯಕೀಯ ಶಿಕ್ಷಣವನ್ನೂ, ಇಂಜಿನಿಯರಿಂಗ್ ಶಿಕ್ಷಣವನ್ನೋ ಅಥವಾ ಮತ್ತಾವುದೋ ಉನ್ನತ ಶಿಕ್ಷಣ, ಪದವಿಗಳನ್ನೋ ನಿರಾಯಾಸವಾಗಿ ಪಡೆಯುತ್ತಾರೆ. ಹೀಗೆ ಆ ಭಾಷೆಗಳನ್ನೇ ತಿಳಿಯದ ಇಲ್ಲಿಂದ ಹೋದವರು ವರ್ಷಗಟ್ಟಲೆ ವಿವಿಧ ವಿಷಯಗಳಲ್ಲಿ ಸಂಶೋಧನೆಗಳನ್ನು ನಡೆಸಿ ಆ ಭಾಷೆಗಳಲ್ಲಿ ಪ್ರಬಂಧಗಳನ್ನು ಮಂಡಿಸಿದವರಿದ್ದಾರೆ. ಹೀಗಿರುವಾಗ ಹುಟ್ಟಾರಭ್ಯ ತಾವು ಆಡಿರುವ, ನಲಿದಾಡಿರುವ ತಮ್ಮದೇ ಭಾಷೆಯಲ್ಲಿ ವೈದ್ಯಕೀಯ, ತಂತ್ರಜ್ಞಾನ ಮುಂತಾದ ವೃತ್ತಿಪರ ಶಿಕ್ಷಣಗಳನ್ನಾಗಲಿ, ವಿವಿಧ ಉನ್ನತ ಶಿಕ್ಷಣಗಳನ್ನಾಗಲಿ ತಮ್ಮದೇ ಭಾಷೆಯಲ್ಲಿ ಪಡೆಯುವ ಸಾಧ್ಯತೆ ಇದ್ದರೆ ಅವರು ಅದನ್ನು ನಿರಾಕರಿಸುವರೇ? ಈ ಹಿನ್ನೆಲೆಯಲ್ಲಿ ನಮ್ಮ ಮುಂದಿರುವ ಬೃಹತ್ ಪ್ರಶ್ನೆ ಎಂದರೆ ಕನ್ನಡದಲ್ಲಿಯೇ ಉನ್ನತ ಶಿಕ್ಷಣವನ್ನು ನೀಡಲು, ಪಡೆಯಲು ನಮಗೇಕೆ ಸಾಧ್ಯವಾಗಿಲ್ಲ ಎಂದು ಗೌಡರು ಪ್ರಶ್ನಿಸಿದರು.

ಈ ಹಿನ್ನೆಲೆಯಲ್ಲಿ ವೈದ್ಯಕೀಯ, ವೃತ್ತಿಪರ, ಉನ್ನತ ಶಿಕ್ಷಣಗಳನ್ನು ಕನ್ನಡದಲ್ಲಿಯೇ ನೀಡಲು ಕೆಲಸ ಮಾಡುವಂತೆ ಮುಖ್ಯಮಂತ್ರಿಗಳನ್ನು ಅವರು ಒತ್ತಾಯಿಸಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಅಖಂಡ ಭಾರತದ ಕಲ್ಪನೆ ಮರೆತ ನೆರೆನಾಡು: ಎಚ್‌ಎಸ್‌ವಿ

Exit mobile version