ಹಾವೇರಿ (ಕನಕ- ಶರೀಫ- ಸರ್ವಜ್ಞ ವೇದಿಕೆ): ಕನ್ನಡ ಬೆಳೆಯಬೇಕೆಂದರೆ ಕನ್ನಡ ಮಾಧ್ಯಮ ಶಾಲೆಗಳನ್ನು ಇಂಗ್ಲಿಷ್ ಖಾಸಗಿ ಶಾಲೆಗಳಂತೆ ರೂಪಿಸಬೇಕು ಎಂದು ಶಿಕ್ಷಣ ತಜ್ಞ ಮೋಹನ ಆಳ್ವ ನುಡಿದರು.
ಹಾವೆರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಮುಖ್ಯ ವೇದಿಕೆಯಲ್ಲಿ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ. ಸೂರ್ಯಚಂದ್ರ ಇರುವವರೆಗೆ ಕನ್ನಡವನ್ನು ತೆಗೆದುಕೊಂಡು ಹೋಗಬೇಕಿದೆ. ಎಲ್ಲಾ ಸಮಾನ ಮನಸ್ಕರು ಕನ್ನಡಕ್ಕಾಗಿ ದುಡಿಯಬೇಕಿದೆ. ನಮ್ಮ ಕನ್ನಡದ ಮೇಲೆ ಅನೇಕ ದಾಳಿಗಳು ಆಗುತ್ತಿವೆ. ಇದನ್ನು ಎದುರಿಸುವ ಶಕ್ತಿ ನಮ್ಮ ಭಾಷೆಗೆ ಇದೆ. ದಾಳಿಗಳ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದರು.
ಸಮಾಜವನ್ನು ಕಟ್ಟುವ ಕೆಲಸ ಪ್ರಜ್ಞಾವಂತ ನಾಗರಿಕನ ಕೆಲಸ. ಎಲ್ಲಾ ಕೆಲಸ ಸರ್ಕಾರ ಮಾಡಲು ಆಗುವುದಿಲ್ಲ. ಕನ್ನಡದ ಭಾಷೆ ಆಡುವ ಭಾಷೆಯಾಗಿ ಇನ್ನೂ ಬೆಳೆಯಬೇಕಿದೆ. ಭಾಷೆಯನ್ನು ಸಾಹಿತ್ಯ ಹಾಗೂ ಅನೇಕ ಕಲೆಗಳು ನಂಬಿಕೊಂಡಿವೆ. ಭಾಷೆಯನ್ನು ಬೆಳೆಸಿದರೆ, ನಮ್ಮ ಜಾನಪದ ಕಲೆಗಳು ಬೆಳೆಯುತ್ತವೆ. ಕನ್ನಡಕ್ಕಾಗಿ ಇನ್ನೂ ಅನೇಕ ಕೆಲಸಗಳು ಆಗಬೇಕಿವೆ. 48 ಕೋಟಿ ವಿದ್ಯಾರ್ಥಿಗಳು ನಮ್ಮ ದೇಶದಲ್ಲಿ, ಒಂದು ಕೋಟಿ ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅವರೆಲ್ಲರೂ ಕನ್ನಡಕ್ಕಾಗಿ ಶ್ರಮ ವಹಿಸಬೇಕಿದೆ. ಕನ್ನಡ ಮಾಧ್ಯಮ ಶಾಲೆಗಳು ಇನ್ನೂ ಬೆಳೆಯಬೇಕು. ಆಗ ಮಾತ್ರ ಕನ್ನಡ ಶಾಲೆಗಳು ಉಳಿಯುತ್ತವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿತವರೇ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ನನ್ನ ಶಿಕ್ಷಣ ಸಂಸ್ಥೆಗಳಲ್ಲೆಲ್ಲ ನಾನು ಅತಿ ಹೆಚ್ಚು ಪ್ರೀತಿಸುವುದು ಕನ್ನಡ ಮಾಧ್ಯಮ ಶಾಲೆಗಳನ್ನು ಎಂದರು.
ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸನ್ಮಾನ ನಿರ್ವಹಿಸಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 28 ಸಾಧಕರಿಗೆ ಸನ್ಮಾನ ನಡೆಯಿತು.
ಇದನ್ನೂ ಓದಿ |ಕನ್ನಡ ಸಾಹಿತ್ಯ ಸಮ್ಮೇಳನ | ಒಂದಾಗಿಸುವ ಕವಿತೆಯಲ್ಲಿ ಮಿಂದೆದ್ದ ಕವಿಗೋಷ್ಠಿ