Site icon Vistara News

Kannada Sahitya Sammelana | ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ; 20 ಸಮಿತಿ ರಚನೆ

kannada sahitya sammelana logo

ಹಾವೇರಿ: ೨೦೨೩ರ ಜನವರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಲಾಂಛನ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ೨೦ ಸಮಿತಿಗಳನ್ನು ರಚನೆ ಮಾಡಿದ್ದು, ಸಮ್ಮೇಳನದ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲಾಗಿದೆ.

ಶನಿವಾರ (ಅ. ೨೯) ಹಾವೇರಿಯ ಜಿಲ್ಲಾಡಳಿತ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಸಂಬಂಧ ೨೦ ಸಮಿತಿಗಳನ್ನೂ ರಚನೆ ಮಾಡಲಾಗಿದೆ. ಬಳಿಕ ಸಚಿವ ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದರು.

ಲಾಂಛನದಲ್ಲೇನಿದೆ?
ಕನ್ನಡಾಂಬೆ ಭುವನೇಶ್ವರಿ ಫೋಟೋ, ಕನ್ನಡ ಸಾಹಿತ್ಯ ಪರಿಷತ್‌ ಲೋಗೋ ಮತ್ತು ಫೋಟೊ, ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ ಏಲಕ್ಕಿ ಮಾಲೆ, ಕೃಷ್ಣಮೃಗ ಅಭಯಾರಣ್ಯ, ನವಿಲುಧಾಮ, ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ಮಾಸೂರು ಕೆರೆ, ಪುರಸಿದ್ದೇಶ್ವರ ದೇವಸ್ಥಾನ, ಜಾನಪದ ವಿಶ್ವವಿದ್ಯಾಲಯ, ಗಳಗನಾಥ ದೇವಸ್ಥಾನ, ಸರ್ವಜ್ಞ, ವಿ.ಕೃ. ಗೋಕಾಗ, ಅಂಬಿಗರ ಚೌಡಯ್ಯ, ಕನಕದಾಸ, ಶಿಶುನಾಳ ಷರೀಫ್‌, ಪುಟ್ಟರಾಜ ಗವಾಯಿ, ಯಳವನಕಟ್ಟೆ ಗಿರಿಯಮ್ಮ, ಮೈಲಾರ ಮಹದೇವಪ್ಪ, ಗಳಗನಾಥರು, ಹಾನಗಲ್‌ ಶಿವಕುಮಾರಸ್ವಾಮಿಗಳ ಫೋಟೊವನ್ನು ಹಾಕಿ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ. ಕೊನೆಯಲ್ಲಿ “ಹೊನ್ನ ಬಿತ್ತೇವು ಹೊಲಕೆಲ್ಲ” ಎಂಬ ಧ್ಯೇಯವಾಕ್ಯವನ್ನೂ ಬರೆಯಲಾಗಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ | Kannada Rajyotsava | ಕನ್ನಡ ಸಾಹಿತ್ಯ ಪರಿಷತ್‌ ಪುಸ್ತಕಗಳ ಮಾರಾಟ; ಇಲ್ಲಿವೆ ಆಕರ್ಷಕ ರಿಯಾಯಿತಿ!

೨೦ ಸಮಿತಿ ರಚನೆ
ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸುದ್ದಿಗೋಷ್ಠಿ ನಡೆಸಿ, ಜನವರಿ 6, 7, 8ರಂದು ಮೂರು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅದ್ಧೂರಿಯಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ಒಟ್ಟು ೨೦ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಶಾಸಕರು, ಮಾಜಿ ಶಾಸಕರು, ಸಚಿವರ ಜತೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಇಡೀ ಜಿಲ್ಲೆಯ ಸಾಹಿತಿಗಳು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಸಮ್ಮೇಳನದ ಯಶಸ್ಸಿಗಾಗಿ ಸಾರಿಗೆ, ಆರೋಗ್ಯ, ಸ್ವಚ್ಛತೆ, ಪೊಲೀಸ್ ಬಂದೋಬಸ್ತ್ ಸೇರಿದಂತೆ ವಿವಿಧ ಕಾರ್ಯವ್ಯಾಪ್ತಿಗೆ ಸಂಬಂಧಪಟ್ಟಂತೆ ಒಟ್ಟು 2೦ ಸಮಿತಿಯನ್ನು ರಚನೆ ಮಾಡಲಾಗಿದೆ. ಆದ್ಯತೆ ಮೇರೆಗೆ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದ್ದು, ವೇಗವಾಗಿ ಕೆಲಸಗಳನ್ನು ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮೈಸೂರು ದಸರಾ ಮೀರಿಸುವಂತೆ ದೀಪಾಲಂಕಾರ
ಸಮ್ಮೇಳನಕ್ಕೆ ಆಗಮಿಸುವ 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಬಾರಿ ವಿದ್ಯುತ್‌ ದೀಪಾಲಂಕಾರಕ್ಕೂ ಒತ್ತು ನೀಡಲಾಗಿದ್ದು, ಮೈಸೂರು ದಸರಾವನ್ನು ಮೀರಿಸುವಂತೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹಾವೇರಿ ನಗರದ ಒಟ್ಟು 21 ಕಿ.ಮೀ. ವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಅಧಿಕಾರಿಗಳ ವರ್ಗಾವಣೆ ಸಲ್ಲ: ನಾಡೋಜ ಡಾ.ಮಹೇಶ ಜೋಶಿ

ಸಮ್ಮೇಳನ ಸ್ಥಳ ವೀಕ್ಷಣೆ
ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಥಳಕ್ಕೆ ಭೇಟಿ ನೀಡಿದ ಸಚಿವರಾದ ಶಿವರಾಮ ಹೆಬ್ಬಾರ್, ಸುನಿಲ್ ಕುಮಾರ್ ಆಗಬೇಕಾದ ಸಿದ್ಧತೆಗಳು, ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದರು. ಪಿ.ಬಿ. ರಸ್ತೆಯ ಪಕ್ಕದಲ್ಲಿರುವ ಸ್ಥಳವನ್ನು ಸಮ್ಮೇಳನಕ್ಕಾಗಿ ಗೊತ್ತು ಮಾಡಲಾಗಿದೆ.

೩ ದರ್ಜೆಯಲ್ಲಿ ಕೊಠಡಿ, ೨೫ ಸಾವಿರ ಮಂದಿಗೆ ವಸತಿ ವ್ಯವಸ್ಥೆ- ಸುನಿಲ್‌ ಕುಮಾರ್
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಸಮ್ಮೇಳನವನ್ನು ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಅದ್ಧೂರಿಯಾಗಿ ಕನ್ನಡದ ಹಬ್ಬವನ್ನು ಮಾಡಲಾಗುವುದು. ಇದರಲ್ಲಿ ಒಂದು ಪ್ರಧಾನ ಮತ್ತು ಎರಡು ಉಪ ವೇದಿಕೆಯನ್ನು ನಿರ್ಮಾಣ ಮಾಡಲಾಗಿದೆ. 25 ಸಾವಿರ ಜನರಿಗೆ ವಸತಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗುವುದು. ವಾಸ್ತವ್ಯಕ್ಕೆ ಕೊಠಡಿಗಳ ವ್ಯವಸ್ಥೆ ಬಗ್ಗೆಯೂ ಚರ್ಚೆ ಮಾಡಲಾಗಿದ್ದು, ಎ ದರ್ಜೆಯ 1000, ಬಿ ದರ್ಜೆಯ 4000 ಹಾಗೂ ಸಿ ದರ್ಜೆಯ 20,000 ರೂಂಗಳ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

5 ಸಾವಿರ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಕನ್ನಡದ ರಥವನ್ನು ಸಿದ್ದಾಪುರದಿಂದ ಆರಂಭಿಸುತ್ತೇವೆ. ಪ್ರತಿ ನಿತ್ಯ ಮೂರು ಲಕ್ಷ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ೧೫ ದಿನ ಬಿಟ್ಟು ಮತ್ತೊಮ್ಮೆ ಸಭೆ ನಡೆಸಲಿದ್ದೇವೆ ಎಂದು ಸುನಿಲ್‌ ಕುಮಾರ್‌ ತಿಳಿಸಿದರು.

ಜಿಲ್ಲಾಧಿಕಾರಿ, ಸಿಇಒಗೆ ಸಂಪೂರ್ಣ ಹೊಣೆ
ವಸತಿ ಜವಾಬ್ದಾರಿಯನ್ನು ವಿಭಾಗದ ಅಧಿಕಾರಿಗಳಿಗೆ ವಹಿಸಿಕೊಳ್ಳಲು ಸೂಚಿಸಲಾಗಿದೆ. ಸೊಳ್ಳೆ ಬತ್ತಿಯಿಂದ ಹಿಡಿದ ವಾಶ್ ರೂಂ ತನಕ‌ ಎಲ್ಲವೂ‌ ಅಚ್ಚುಕಟ್ಟಾಗಿ ಇರಬೇಕೆಂದು ಹೇಳಲಾಗಿದೆ. ಇಡೀ ಜಿಲ್ಲಾಧಿಕಾರಿ ಹಾಗೂ ಸಿಇಒಗಳು ಸಮ್ಮೇಳನದ ಜವಾಬ್ದಾರಿಯನ್ನು ನಿಭಾಯಿಸಲಿದ್ದು, ಈ ಎಲ್ಲ ಕಾರ್ಯಚಟುವಟಿಕೆಯನ್ನು ಭಾನುವಾರ (ಅ.೩೦) ದಿಂದಲೇ ಆರಂಭಿಸಲು ಸೂಚನೆ ನೀಡಲಾಗಿದೆ. ಇನ್ನು ಸರ್ಕಾರ ಹಾಗೂ ಸಾರ್ವಜನಿಕ ಸಮಿತಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಬೇಕು ಎಂದು ತಿಳಿಸಿದರು.

ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಶಾಸಕರಾದ ನೆಹರು ಓಲೇಕಾರ, ಅರುಣಕುಮಾರ್ ಪೂಜಾರ ಸೇರಿದಂತೆ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಪರಿಷತ್‌ ಪ್ರಶಸ್ತಿ ಪಡೆಯಲು ಅರ್ಜಿಯೂ ಬೇಡ, ಮರ್ಜಿಯೂ ಬೇಡ: ನಾಡೋಜ ಡಾ. ಮಹೇಶ ಜೋಶಿ

Exit mobile version