Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಶತಮಾನದ ಧೀಮಂತ ಪುರುಷರ ಸ್ಮರಣೆ

shatamana haveri

ಹಾವೇರಿ: ನಾಡಿನ ಧೀಮಂತ ಮಹನೀಯರಾದ ಜಿ.ನಾರಾಯಣ, ಡಾ.ಹಿರೇಮಲ್ಲೂರ ಈಶ್ವರನ್, ಸು.ರಂ.ಎಕ್ಕುಂಡಿ, ಶಾಂತವೇರಿ ಗೋಪಾಲಗೌಡ, ಹಾಸ್ಯನಟ ನರಸಿಂಹರಾಜು ಅವರ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಹಾವೇರಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಶತಮಾನ ಪುರುಷರು’ ವಿಷಯದ ಮೇಲೆ ವಿಶೇಷ ಗೋಷ್ಠಿ ನಡೆಯಿತು.

ಅಗತ್ಯವಾಗಿ ಸಮಗ್ರ ಸಾಹಿತ್ಯ ಪ್ರಕಟಣೆ ಮಾಡುವಷ್ಟು ಸಾಹಿತ್ಯ ಕೃಷಿ ಮಾಡಿದ ಸು.ರಂ. ಎಕ್ಕುಂಡಿಯವರು ಪ್ರಕೃತಿ ಮಾತೆಯ ವರಕವಿ. ಅವರು ಕಾವ್ಯದ ದಾಸರಾಗಿದ್ದರು. ವಾದಕ್ಕೆ ಸಿಲುಕದ, ವಿವಾದಕ್ಕೆ ಆಸ್ಪದವಿಲ್ಲದ ಕಾವ್ಯ ಕೃಷಿ ಅವರದಾಗಿತ್ತು. ಎಕ್ಕುಂಡಿಯವರು ಕವಿರತ್ನ ಕಾವ್ಯದಾಸ ಇದ್ದ ಹಾಗೆ ಎಂದು ಲೇಖಕ ಜೆ.ಎಂ.ರಾಜಶೇಖರ ಅವರು ಹೇಳಿದರು.

ಹೊಸ ಆಲೋಚನೆಗೆ ಶಾಂತವೇರಿ ಗೋಪಾಲಗೌಡರ ವಿಚಾರಧಾರೆಯು ಇಂದು ಅತ್ಯಗತ್ಯವಾಗಿದೆ. ಶಾಸಕರಾಗಿರುವ ವ್ಯಕ್ತಿ ಹೇಗೆ ಮಾತನಾಡಬೇಕು ಎಂಬುದಕ್ಕೆ ಗೋಪಾಲಗೌಡರೇ ಸಾಕ್ಷಿಯಂತಿದ್ದರು. ಸದನವು ಭರ್ತಿಯಾಗಬೇಕಾದರೆ ಶಾಂತವೇರಿ ಗೋಪಾಲಗೌಡರು ಸದನಕ್ಕೆ ಬರಬೇಕು ಎಂದು ಅಂದಿನ ಸಭಾಧ್ಯಕ್ಷರು ಹೇಳುತ್ತಿದ್ದರು ಎಂದು ನೆಂಪೆ ದೇವರಾಜ್ ನುಡಿದರು.

ಜಿ.ನಾರಾಯಣ ಅವರು ಹಿರಿಯ ಗಾಂಧಿವಾದಿಯಾಗಿದ್ದರು. ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ್ದರು. ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದರು. ಹೊಸ ಹೊಸ ಸಂಸ್ಥೆಗಳನ್ನು ಹುಟ್ಟು ಹಾಕಿದರು.  ಶಾಲಾ-ಕಾಲೇಜುಗಳನ್ನು ತೆರೆದರು. ಆಸ್ಪತ್ರೆಗಳನ್ನು ನವೀಕರಿಸಿದರು ಎಂದು ಲೇಖಕ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು.

ಇದನ್ನೂ ಓದಿ |ಕನ್ನಡ ಸಾಹಿತ್ಯ ಸಮ್ಮೇಳನ | ಎಲ್ಲೆಲ್ಲೂ ಪುನೀತ್‌ ರಾಜಕುಮಾರ್‌ ಹವಾ; ಸೆಲ್ಫಿ ಕ್ರೇಜ್‌

ಹಿರೇಮಲ್ಲೂರ ಈಶ್ವರನ್ ಅವರು ವಿದೇಶಕ್ಕೆ ತೆರಳಿ ಅಲ್ಲಿನ ಸಂಸ್ಕೃತಿಯ ಬಗ್ಗೆ ಅಧ್ಯಯನ ಮಾಡಿದರು. ತಮ್ಮ ಕನ್ನಡ ಕೃತಿ ರಚನೆ ಬಳಿಕ ಅದನ್ನೇ ಇಂಗ್ಲಿಷಿಗೆ ತಾವೇ ಅನುವಾದ ಮಾಡುತ್ತಿದ್ದರು. ಧಾರವಾಡದಲ್ಲಿನ ಅವರ ಮನೆಯನ್ನು ತೋಂಟದಾರ್ಯ ಮಠಕ್ಕೆ ನೀಡಿದರು. ತೋಂಟದಾರ್ಯ  ಶ್ರೀಗಳು ಅವರ ಮನೆಯನ್ನು ಹಿರೇಮಲ್ಲೂರ ಈಶ್ವರನ್ ಕಾಲೇಜನ್ನಾಗಿ ರೂಪಾಂತರಿಸಿ ಅವರಿಗೆ ಗೌರವ ಸಲ್ಲಿಸಿದರು ಎಂದು ಲೇಖಕ ಶಶಿಧರ್ ತೋಡ್ಕರ್ ಅವರು ತಿಳಿಸಿದರು.

ಮನೆ ಬಿಟ್ಟು ಹೋದ ಹುಡುಗನೊಬ್ಬ ದೈತ್ಯ ಕಲಾವಿದನಾಗಿ ಹೊರಹೊಮ್ಮಿದ ಬದುಕೇ ನರಸಿಂಹರಾಜು ಅವರ ಕಥೆ. ಮನೆಬಿಟ್ಟು ಹೋದ ಹುಡುಗ ಕಲಾವಿದನಾಗಿ ಬೆಳೆದು ಬದುಕಿ ಹಾಸ್ಯ ಚರ್ಕವರ್ತಿಯಾಗಿ ಮನೆಗೆ ಬರುತ್ತಾರೆ ಎನ್ನುವ ಅವರ ಜೀವನಗಾಥೆ ನನಗೆ ದಾರಿದೀಪವಾಗಿದೆ. ಅವಳ ಮಗಳಾಗಿ ಹುಟ್ಟಿದ ನಾನು ಧನ್ಯಳು ಎಂದು ನಟಿ, ಲೇಖಕಿ ಸುಧಾ ನರಸಿಂಹರಾಜು ಭಾವುಕರಾಗಿ ನುಡಿದರು. ಹಿರಿಯ ಪತ್ರಕರ್ತರಾದ ಬಾಬು ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜವನ್ನು ಬದಲಾಯಿಸುವ ಕಾರ್ಯವನ್ನು ಈ ಎಲ್ಲ ಮಹನಿಯರು ತಮ್ಮ ಜೀವನುದ್ದಕ್ಕೂ ಮಾಡಿದರು. ಸಮಾಜದ ಏಳ್ಗೆಗಾಗಿ ದುಡಿದರು ಎಂದು ತಿಳಿಸಿದರು. ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ನಿಜಾರ್ಥದಲ್ಲಿ ವಿಶ್ವ ಕನ್ನಡ ಸಮ್ಮೇಳನ: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

Exit mobile version