ಹಾವೇರಿ: ಸಮಕಾಲೀನ ಸಮಸ್ಯೆಗಳಿಗೆ ಸ್ಪಂದನ ನೀಡುವ ಬರೆಹಗಾರರ ಸಂಖ್ಯೆ ಈಗ ಮೊದಲಿಗಿಂತ ಹೆಚ್ಚಿದೆ. ಎಲ್ಲರೂ ಸೇರಿ ಕನ್ನಡದ ಹೊಸ ಚಿಂತನಾ ಮಾದರಿಯನ್ನು ಕಟ್ಟುತ್ತಿದ್ದಾರೆ. ಹೊಸ ಮಾದರಿಯಲ್ಲಿ ಕಾವ್ಯ ಸೃಷ್ಟಿಯಾಗುತ್ತಿದೆ ಎಂದು ಹಿರಿಯ ಕಥೆಗಾರ್ತಿ, ವಿಮರ್ಶಕಿ ಸುನಂದಾ ಪ್ರಕಾಶ ಕಡಮೆ ಅವರು ಹೇಳಿದರು.
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು- ಚಂಪಾ ವೇದಿಕೆಯಲ್ಲಿ ನಡೆದ ʼಕನ್ನಡ ಸಾಹಿತ್ಯದ ಹೊಸ ಒಲವುಗಳುʼ ವಿಷಯದ ಮೇಲಿನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದಲ್ಲೀಗ 40 ಸಾವಿರ ಜನರು ಕವಿತೆ ಬರೆಯುತ್ತಿದ್ದಾರೆ. ಕನ್ಮಡದ ಹೊಸ ಒಲವು ಕನ್ನಡಿಗರ ಚಿಂತನೆಯ ಒಟ್ಟು ಮಾತಾಗಿದೆ. ತೃತೀಯ ಲಿಂಗಿಗಳ ಹೋರಾಟ, ಬಂಡವಾಳಶಾಹಿ ಧೋರಣೆ, ಭಯೋತ್ಪಾದನೆ, ಪರಿಸರ ನಾಶ, ಪುರುಷ ಪ್ರಧಾನ ವ್ಯವಸ್ಥೆ, ವಿಘಟಿತ ದಾಂಪತ್ಯ, ಜಾತಿ ಧರ್ಮದ ತಾರತಮ್ಯ, ಮಧ್ಯಮ ವರ್ಗದ ಜನರ ಅವಕಾಶವಾದಿತನ, ಕೊರೋನಾ ಕಾಲದ ಸಂಚಲನ, ರೈತರ ಆತ್ಮಹತ್ಯೆ ಮತ್ತು ಇನ್ನೂ ಅನೇಕ ವಸ್ತು ವಿಷಯಗಳ ಮೇಲೆ ಈಗ ಕವಿತೆಗಳು ವಿಭಿನ್ನ ಮಾದರಿಯಲ್ಲಿ ರಚನೆಯಾಗುತ್ತಿವೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಕಾಶಕರ ಕೊರತೆ
ವರ್ತಮಾನದ ತಲ್ಲಣ, ವರ್ಗ ಸಂಘರ್ಷದ ಬಗ್ಗೆ ಅರಿತು, ಸಾಮಾಜಿಕ ಅಪಮಾನವ ಗೆದ್ದು, ಸಂವಿಧಾನದ ನೆಲೆಯಲ್ಲಿ, ಮಾನವೀಯ ನೆಲೆಯಲ್ಲಿ ಬರೆಯುತ್ತ, ಬಹುತೇಕರ ಬರೆಹದಲ್ಲಿ ವೈಚಾರಿಕತೆಯು ಕಾಪಿಟ್ಟಿದೆ. ಕೆಲ ಹೊಸಬರ ಬರೆಹದಲ್ಲಿ ಸಮಾಜಶಾಸ್ತ್ರದ ವಿಷಯ ಸಹ ಹಾಸುಹೊಕ್ಕಾಗಿದೆ. ಗಾಂಧೀತತ್ವ ಮೇಳೈಸಿದ ಬರೆಹ ಕೂಡ ಕಾಣಸಿಗುತ್ತದೆ. ಮನಶಾಸ್ತ್ರೀಯ ನೆಲೆಯಲ್ಲಿ ಕೂಡ ಬರೆಹ ಹುಟ್ಟುತ್ತಿರುವುದು ಆಯಾ ಕಾಲದ ಒತ್ತಡ ಇಲ್ಲವೇ ಚಾರಿತ್ರಿಕ ಒತ್ತಡಗಳ ಫಲವೂ ಆಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸಣ್ಣಕತೆ ಮತ್ತು ಕವಿತೆ ಕುರಿತು ಮಾತನಾಡಿದ ಡಾ.ವಿ.ಎ. ಲಕ್ಷ್ಮಣ, ಚಳವಳಿಯ ಭಾರವಿಲ್ಲದ ಕಾಲವಿದು. ಬರೆಹಗಾರನು ಈಗ ಸ್ವಂತ ದಾರಿ ಕಂಡುಕೊಳ್ಳುತ್ತಿದ್ದಾನೆ. ಯಾವುದೇ ಶೈಲಿಗೆ ಒಗ್ಗದೇ, ತನ್ನದೇ ಶೈಲಿ ರೂಢಿಸಿಕೊಳ್ಳುತ್ತಿದ್ದಾನೆ. ಈಗ ಯಾವುದೇ ರೀತಿಯ ಸಿದ್ಧ ಮಾದರಿ ಇಲ್ಲ. ಹೊಸ ಹೊಸ ಪ್ರಯೋಗಗಳಿಗೆ ಕನ್ನಡದಲ್ಲಿ ಈಗ ಹುಲುಸಾದ ಫಸಲು. ಕಾವ್ಯವು ಈಗ ಘೋಷಣೆಗಳಾಗಿ ಉಳಿದಿಲ್ಲ; ಬದುಕಿನ ದಿಕ್ಕನ್ನು ಬದಲಿಸುವಂತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಬಂಧ ಮತ್ತು ಲಘು ಬರೆಹ ಕುರಿತು ಲೇಖಕಿ ಡಾ.ತಮಿಳ್ ಸೆಲ್ವಿ ಅವರು ಮಾತನಾಡಿ, ಪ್ರಬಂಧ ಮಾದರಿಯು ಕನ್ನಡ ಸಾಹಿತ್ಯಕ್ಕೆ ಹೊಸದಲ್ಲ. ನಮ್ಮಲ್ಲಿ ಪ್ರಬಂಧಕ್ಕೆ ತಕ್ಕ ಪಾಂಡಿತ್ಯವಿರಬೇಕು, ನಿರೂಪಣೆ ಮಾಡುವ ನೈಪುಣ್ಯತೆ ಇರಬೇಕು. ಲಲಿತ ಪ್ರಬಂಧಗಳೇ ಈಗ ಹೆಚ್ಚು ಮುನ್ನೆಲೆಗೆ ಬರುತ್ತಿರುವುದು ಇತ್ತೀಚಿನ ಹೊಸ ಪ್ರಯೋಗವಾಗಿದೆ. ಪ್ರಬಂಧಕ್ಕೆ ಕವಿತೆಯ ಸೊಗಸು, ಕತೆಯ ಬೆಡಗು ಎರಡೂ ಇರುತ್ತದೆ. ನಿರೂಪಣೆಯು ಆಪ್ತವಾಗಿದ್ದಲ್ಲಿ ಪ್ರಬಂಧ ಎಲ್ಲರಿಗೂ ಹಿಡಿಸುತ್ತದೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ನಾಡಿನ ಪರಂಪರೆಯ ಶ್ರೀಮಂತಿಕೆಗೆ ಉಪಭಾಷೆಗಳು ಕಾರಣ: ಪಾರ್ವತಿ ಐತಾಳ್