Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ನಾಡಿನ ಪರಂಪರೆಯ ಶ್ರೀಮಂತಿಕೆಗೆ ಉಪಭಾಷೆಗಳು ಕಾರಣ: ಪಾರ್ವತಿ ಐತಾಳ್

regional languages

ಹಾವೇರಿ (ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆ): ಕರ್ನಾಟಕದ ಪರಂಪರೆ ಶ್ರೀಮಂತವಾಗಲು ನಾನಾ ಉಪಭಾಷೆಗಳು ಕಾರಣವಾಗಿವೆ ಎಂದು ಸಾಹಿತಿ ಪಾರ್ವತಿ ಜಿ. ಐತಾಳ್ ನುಡಿದರು.

ಅವರು ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ: ಭಾಷಾ ವೈವಿಧ್ಯ’ ಗೋಷ್ಠಿಯ ಆಶಯ ನುಡಿಗಳನ್ನು ನುಡಿಯುತ್ತಾ ಹೀಗೆಂದರು.

ಕನ್ನಡದಾದ್ಯಂತ ಒಂದೇ ಕನ್ನಡ ಇರುವುದಲ್ಲ. ವೈವಿಧ್ಯಮಯ ಕನ್ನಡಗಳು ಕನ್ನಡನಾಡಿನಲ್ಲಿ ಕ್ರಿಯಾಶೀಲವಾಗಿವೆ. ಕೆಲವು ಕನ್ನಡ ಭಾಷೆಗಳನ್ನು ನೋಡಿದರೆ ಇದು ಕನ್ನಡವೇ ಅಲ್ಲವೇ ಎಂಬ ಸಂಶಯ ಬರುತ್ತದೆ. ಪ್ರತಿ ಭಾಷೆಗೂ ಅದರದೇ ಆದ ಸಂಸ್ಕೃತಿಯಿದೆ. ಕರ್ನಾಟಕದ ಪರಂಪರೆ ಶ್ರೀಮಂತವಾಗಲು ನಾನಾ ಉಪಭಾಷೆಗಳು ಕಾರಣವಾಗಿವೆ. ಸಣ್ಣ ಭಾಷೆಗಳು ಬೆಳೆದಂತೆ ಕನ್ನಡವೂ ಬೆಳೆಯುತ್ತದೆ. ಆದ್ದರಿಂದ ಸಣ್ಣ ಭಾಷೆಗಳನ್ನೂ ಕನ್ನಡದಷ್ಟೇ ಮರ್ಯಾದೆಯಿಂದ ನಡೆಸಿಕೊಳ್ಳಬೇಕಿದೆ ಎಂದು ಅವರು ನುಡಿದರು.

ತುಳು ಭಾಷೆಯ ಬಗ್ಗೆ ಮಾತನಾಡಿದ ಡಾ.ಗಣನಾಥ ಎಕ್ಕಾರು, ಹದಿನಾಲ್ಕನೇ ಶತಮಾನದ ಕವಿ ರತ್ನಾಕರವರ್ಣಿ ತನ್ನ ಕನ್ನಡ ಕಾವ್ಯವನ್ನು ತುಳುವರು  ‘ಎಂಚ ಪೊರ್ಲಾಂಡೆಂದು’ ಕೊಂಡಾಡಬೇಕು ಎಂದು ಅಪೇಕ್ಷಿಸುತ್ತಾನೆ. ತುಳುವರ ಸಂಖ್ಯೆ ಐವತ್ತು ಲಕ್ಷಕ್ಕೂ ಹೆಚ್ಚಾಗಿರಬಹುದು. ಜಗತ್ತಿನ ಎಲ್ಲ ಕಡೆ ಅವರು ತಮ್ಮ ಸಾಧನೆಯ ಸೀಮೆಯನ್ನು ವಿಸ್ತರಿಸಿದ್ದಾರೆ. ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ಅದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರುವುದು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

‘ಅರೆಭಾಷೆ’ಯ ಬಗ್ಗೆ ಸ್ಮಿತಾ ಅಮೃತರಾಜ್ ಮಾತನಾಡಿದರು. ಸುಮಾರು ಮೂರು ನಾಲ್ಕು ಲಕ್ಷದಷ್ಟು ಜನ ಮಾತನಾಡುವ ಅರೆಭಾಷೆಯನ್ನು ಗೌಡಭಾಷೆಯೆಂದು ವಿದ್ವಾಂಸರು ಕರೆದರು. ಆದರೆ ಇದು ಸುಳ್ಯ ಪುತ್ತೂರಿನ ಗೌಡ ಸಮುದಾಯಕ್ಕಷ್ಟೇ ಸೀಮಿತವಾದದ್ದಲ್ಲ.  ಅದು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡು ಇತರ ಸಮುದಾಯಗಳಿಗೂ ಹಬ್ಬಿದೆ. ಇದು ಹಳೆಗನ್ನಡದ ಮೂಲಸ್ವರೂಪ ಉಳಿಸಿಕೊಂಡಿದೆ. ತುಳು- ಮಲಯಾಳಗಳ ಪ್ರಭಾವವನ್ನು ಒಳಗೊಂಡು ತನ್ನದೇ ಆದ ಅಸ್ಮಿತೆಯನ್ನು ಹೊಂದಿದೆ. ಇತ್ತೀಚೆಗೆ ಅರೆಭಾಷೆ ಅಕಾಡೆಮಿ ಸ್ಥಾಪನೆಗೊಂಡು ಹೆಚ್ಚಿನ ಕೆಲಸ ಮಾಡಿದೆ ಎಂದು ನುಡಿದರು.

ದಕ್ಷಿಣ ದ್ರಾವಿಡ ಭಾಷೆಗಳಲ್ಲಿ ಕೊಡವ ಭಾಷೆ ಪ್ರಮುಖವಾದುದು. ಇದು ರೂಪುಗೊಳ್ಳುವಲ್ಲಿ ಸುತ್ತಮುತ್ತಲಿನ ಕನ್ನಡ ತುಳು ಮಲಯಾಳಗಳ ಕೊಡುಗೆಯೂ ಇದೆ. ಮೂಲ ದ್ರಾವಿಡವೇ ಕೊಡವ ಭಾಷೆ ಎನ್ನುವವರಿದ್ದಾರೆ. ವಿಶಿಷ್ಟವಾದ ಅಸ್ಮಿತೆ ಸಂಸ್ಕೃತಿ ಭೌಗೋಳಿಕ ಸ್ವರೂಪ ಚೆಹರೆಗಳನ್ನು ಇದು ಹೊಂದಿದೆ ಎಂದು ಕೊಡವ ಭಾಷೆಯ ಬಗ್ಗೆ ಮಾತನಾಡಿದ ಡಾ.ಕಾವೇರಿ ಎನ್.ವಿ ನುಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಕಾಶಕರ ಕೊರತೆ

ಕೊಂಕಣಿ ಭಾಷಿಕರು ಐತಿಹಾಸಿಕವಾಗಿ ಅನೇಕ ಅನ್ಯಾಯಗಳನ್ನು ಉಂಡಿದ್ದಾರೆ. ಪೋರ್ಚುಗೀಸರಿಂದ ಆರಂಭಿಸಿ ತುಳಿತವಾಗಿದೆ. ಹೀಗಾಗಿ ಕೊಂಕಣಿ ಭಾಷಿಕರು ಉತ್ತರಕ್ಕೂ ದಕ್ಷಿಣಕ್ಕೂ ಹರಿಹಂಚಾಗಿಹೋದರು. ತಮ್ಮದೇ ಲಿಪಿಯನ್ನು ಉಳಿಸಿಕೊಳ್ಳಲಾಗದೆ ಹೋದರು. ಕರ್ನಾಟಕಕ್ಕೆ ಬಂದವರು ಕನ್ನಡದ ಲಿಪಿಯನ್ನು ಬಳಸಿದರು. ಹಲವು ಜಾತಿ ಸಮುದಾಯಗಳನ್ನು ಹೊಂದಿರುವ ಈ ಕೊಂಕಣಿ ಭಾಷೆಯು ನಾಶವಾಗಬಾರದು ಎಂಬ ಆಶಯವನ್ನು ಈ ಭಾಷಿಕರು ಗಟ್ಟಿಯಾಗಿ ಹೊಂದಿದ್ದಾರೆ ಎಂದು ಕೊಂಕಣಿ ಭಾಷೆಯ ಬಗ್ಗೆ ಫ್ಲೋರಿನ್ ರೋಚ್ ಹೇಳಿದರು.

ಸೋಲಿಗರು ಆಫ್ರಿಕ ಮೂಲದಿಂದ ಬಂದಿರಬಹುದು ಎಂಬ ಊಹೆ ಇದೆ. ಮೇಲ್ಮೈ ಲಕ್ಷಣ ಹೊಂದಿದಾಗ ಹೀಗೆ ಅನಿಸುತ್ತದೆ. ಆದರೆ ಇದು ಮೂಲ ದ್ರಾವಿಡ ಭಾಷೆ ಎಂದು ಅಧ್ಯಯನಗಳು ಖಚಿತಪಡಿಸಿವೆ. ಸೋಲಿಗ ಭಾಷೆಯನ್ನು ಸೀಮಿತ ಜನಾಂಗದ ಮಂದಿ ಮಾತನಾಡುತ್ತಿದ್ದು, ಹೆಚ್ಚಿನ ಅಧ್ಯಯನ ಹಾಗೂ ಸಹಾಯಗಳು ಇದರ ಬೆಳವಣಿಗೆಗೆ ಅಗತ್ಯವಿದೆ ಎಂದು ಸೋಲಿಗ ಭಾಷೆಯ ಬಗ್ಗೆ ಡಾ.ಉಮೇಶ್ ಮೈಸೂರು ನುಡಿದರು.

ಡಾ.ವಿಟ್ಠಲರಾವ್ ಗಾಯಕವಾಡ ಅವರು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಉಪಭಾಷೆಗಳನ್ನು ಒಳಗೊಳ್ಳಬೇಕಾದ ಅಗತ್ಯದ ಬಗ್ಗೆ ಸಮನ್ವಯದ ನುಡಿಗಳನ್ನು ಆಡಿದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಜ್ಞಾನ ಜನಸಾಮಾನ್ಯರ ಬದುಕಿನಲ್ಲಿ ಬೆಳಕು ತರಲಿ: ಡಾ.ಸಿ.ಎನ್.ಮಂಜುನಾಥ್

Exit mobile version