ಹಾವೇರಿ (ಕನಕ- ಶರೀಫ- ಸರ್ವಜ್ಞ ವೇದಿಕೆ): ಹಾವೇರಿಯ ಸಮ್ಮೇಳನದಲ್ಲಿ ಮುಸ್ಲಿಂ ಸಾಹಿತಿಗಳನ್ನು ದೂರ ಇಡಲಾಗಿದೆ ಎಂಬ ಬಿ.ಕೆ. ಹರಿಪ್ರಸಾದ್ ಮಾತುಗಳನ್ನು ನಾನು ಒಪ್ಪುವುದಿಲ್ಲ. ಇದು ಧರ್ಮ ಆಧಾರಿತ, ಜಾತಿ ಆಧಾರಿತ ಸಾಹಿತ್ಯ ಸಮ್ಮೇಳನವಲ್ಲ. ಇಲ್ಲಿ ಕನ್ನಡವೇ ಸಾರ್ವಭೌಮ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ನುಡಿದರು.
ನಾನು ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ಮಾತಾಡುವುದಿಲ್ಲ. ಆದರೆ ಟೀಕಿಸಿದವರಿಗೆ ಉತ್ತರ ನೀಡದಿದ್ದರೆ ಅದನ್ನು ಒಪ್ಪಿಕೊಂಡಂತಾಗುತ್ತದೆ. ಸಮಾನತೆಯ ಹರಿಕಾರ ಸಂತ ಶಿಶುನಾಳ ಶರೀಫರ ನಾಡಿನಲ್ಲಿ, ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂದು ಸಂದೇಶ ನೀಡಿದ ಕನಕದಾಸರ ಈ ನಾಡಿನಲ್ಲಿ ಧರ್ಮಾಧಾರಿತವಾಗಿ ಅನ್ಯಾಯ ಮಾಡಲು ಸಾಧ್ಯವಿಲ್ಲ. ಮುಖ್ಯ ವೇದಿಕೆಯಲ್ಲಿ ಇಬ್ಬರು ಮುಸ್ಲಿಮರಿಗೆ ಸನ್ಮಾನ ಮಾಡಿದ್ದೇವೆ. ಆದರೆ ಅವರ ಹೆಸರಿನಲ್ಲಿ ಅದು ತಿಳಿಯುವುದಿಲ್ಲ ಎಂದರು.
ಇನ್ನು ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರ ಜತೆಗೆ ಮುಖ್ಯಮಂತ್ರಿಗಳ ಫೋಟೋ ಹಾಕಿದ್ದನ್ನೂ ಟೀಕಿಸಲಾಯಿತು. ಹಾವೇರಿ ಸಮ್ಮೇಳನದ ಯಶಸ್ಸಿಗೆ ಹಾವೇರಿ ಜನತೆಯಂತೆಯೇ ಮುಖ್ಯಮಂತ್ರಿಗಳೂ ಕಾರಣ. ಹೀಗಾಗಿ ಸಮ್ಮೇಳನಾಧ್ಯಕ್ಷರ ಫೋಟೋ ಜತೆಗೆ ಅವರ ಫೋಟೋವನ್ನೂ ಹಾಕಿದ್ದೇವೆ ಎಂದು ನುಡಿದರು.
ಹಿಂದೆ ಇಂಥ ಸಮ್ಮೇಳನ ಆಗಿಲ್ಲ, ಮುಂದೆ ಆಗುವುದೂ ಇಲ್ಲ ಎಂಬ ವಿಶ್ವಾಸವಿದೆ. ಹಲಕೆಲವು ಸವಾಲುಗಳು, ಪ್ರಶ್ನೆಗಳು, ಕೊರತೆಗಳು ಉಂಟಾಗಿರಬಹುದು. ಆದರೆ ಇಂತಹ ಬೃಹತ್ ಕಾರ್ಯಕ್ರಮದಲ್ಲಿ ಇವು ಸಾಮಾನ್ಯ. ಮೂರು ದಿನಗಳ ಕಾರ್ಯಕ್ರಮದ ಯಶಸ್ಸಿನಿಂದ ದಿವ್ಯಾನುಭೂತಿ ಉಂಟಾಗಿದೆ ಎಂದು ಅವರು ನುಡಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಸ್ಥಳೀಯ ಭಾಷೆಗೆ ಒತ್ತಾಸೆ ನೀಡಿದ ಅಮಿತ್ ಶಾ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬಣ್ಣನೆ