Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಕುಲಭೇದ ನಿರಾಕರಣೆ ಕನ್ನಡ ಸಾಹಿತ್ಯದ ಶ್ರೇಷ್ಠತೆ: ವಿವೇಕ ರೈ

vivek rai

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ನುಡಿ

ಹಾವೇರಿ (ಕನಕ- ಶರೀಫ- ಸರ್ವಜ್ಞ ವೇದಿಕೆ): ಕನ್ನಡ ಸಾಹಿತ್ಯದ ಪರಂಪರೆ ಇಡೀ ಜಗತ್ತಿಗೆ ಮಾದರಿಯಾದುದು. ಕುಲಭೇದ- ಜಾತಿಭೇದದ ನಿರಾಕರಣೆಯನ್ನು ಅದು ಉದ್ದಕ್ಕೂ ಪ್ರತಿಪಾದಿಸುತ್ತ ಬಂದಿದೆ ಎಂದು ವಿಶ್ರಾಂತ ಕುಲಪತಿಗಳಾದ ಡಾ.ವಿವೇಕ್ ರೈ ನುಡಿದರು.

ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪದ ನುಡಿಗಳನ್ನು ಆಡಿದರು.

ಹಾವೇರಿಯ ಮೂಲದವರಾದ ಕನಕದಾಸರು ರಾಗಿ ಮತ್ತು ಭತ್ತಗಳನ್ನು ಇಟ್ಟುಕೊಂಡು, ರಾಗಿಯನ್ನು ಬಡವರ ಪರ ಹಾಗೂ ಭತ್ತವನ್ನು ಶ್ರೀಮಂತರ ಪರ ಎಂದು ಪ್ರತಿಪಾದಿಸಿ ಕಾವ್ಯವ ಬರೆದರು. ಇಂಥ ರೂಪಕ ಕಾವ್ಯ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ. ಹಾಗೆಯೇ ಕನ್ನಡದ ತತ್ವಪದಕಾರರಂಥ ಪರಂಪರೆಯೂ ಬೇರೆಲ್ಲೂ ಇಲ್ಲ. ಶಿಶುನಾಳ ಶರೀಫರಂತೆಯೇ ಇತರ ಅನೇಕ ಮುಸ್ಲಿಂ ತತ್ವಪದಕಾರರಿಗೆ ಹಿಂದೂ ಗುರುಗಳು ಇದ್ದರು. ಕುವೆಂಪು ಅವರೂ ಒಂದು ಕಡೆ ರಾಮಾಯಣ ದರ್ಶನಂ ಎಂಬ ಕಾವ್ಯ ಬರೆದರು. ಇನ್ನೊಂದೆಡೆ ಜಾತಿಧರ್ಮ ನಿರಾಕರಿಸುವ ಮಾತುಗಳನ್ನು ಆಡಿದರು ಎಂದರು.

ಕನ್ನಡದ ವಿಚಾರಧಾರೆಯ ಎರಡು ಸಂಕೇತಗಳಂತೆ ನಾವು ಇಬ್ಬರನ್ನು ಪರಿಗಣಿಸಬಹುದು. ಅವರು ಕವಿ ಸಿದ್ದಲಿಂಗಯ್ಯ ಹಾಗೂ ಸಿದ್ದೇಶ್ವರ ಸ್ವಾಮಿಗಳು. ಅವರಿಬ್ಬರನ್ನೂ ಇತ್ತೀಚೆಗೆ ಕಳೆದುಕೊಂಡಿದ್ದೇವೆ. ಅವರಿಬ್ಬರಲ್ಲೂ ಜನತೆಗೆ ಸಾಂತ್ವನ, ಸಮಾಧಾನ ನೀಡುವ ಶಕ್ತಿ ಇತ್ತು. ಸಿದ್ದಲಿಂಗಯ್ಯನವರಲ್ಲಿ ದೌರ್ಜನ್ಯದತ್ತ ಆಕ್ರೋಶವಿದ್ದರೂ ಅಂತಿಮವಾಗಿ ಸಾಂತ್ವನವಿತ್ತು. ಹೀಗೆ ಕನ್ನಡ ಶಾಂತಿ ಸಮಾಧಾನಗಳ ಭಾಷೆ ಎಂದರು.

ಪಂಪ ಮಹಾಭಾರತ ಆದಿಕಾವ್ಯವನ್ನೂ, ಆಗಮಕಾವ್ಯವನ್ನೂ ಬರೆದ. ಅವುಗಳಲ್ಲಿ ಬಾಹುಬಲಿಯ ತ್ಯಾಗವನ್ನು ಎತ್ತಿ ಆಡಿದ. ತ್ಯಾಗ ಹೀಗೆ ಕನ್ನಡದ ಗುಣವಾಗಿದೆ. ಭರತನಿಗೆ ಗರ್ವರಸ ಸೋರಿದುದನ್ನು ನಾವು ಕಾವ್ಯದಲ್ಲಿ ಕಾಣುತ್ತೇವೆ. ಜಾತಿಗರ್ವ, ಅಧಿಕಾರ ಗರ್ವ ನಿರಸನವಾಗುವಾಗ ಒಳ್ಳೆಯ ಕನ್ನಡಿಗರಾಗುತ್ತೇವೆ. ಪಂಪನ ಕರ್ಣ ಹೇಳುವುದೂ ಕೂಡ ಕುಲದ ನಿಷ್ಫಲತೆಯನ್ನೇ ಆಗಿದೆ. ಇದನ್ನು ವಚನ ಸಾಹಿತ್ಯದಲ್ಲೂ ಕಾಣುತ್ತೇವೆ. ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿಯವರಂಥ ಘನ ಚೈತನ್ಯಗಳು ವಚನ ಸಾಹಿತ್ಯವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಕೊಯ್ದಿದ್ದಾರೆ. ಜರ್ಮನಿಯಲ್ಲಿ ಓಡಾಡುತ್ತಿದ್ದಾಗ ಅಲ್ಲಿನ ವಿದ್ವಾಂಸರು, ವಚನಸಾಹಿತ್ಯದಂಥ ಶ್ರೇಷ್ಠ ಸಾಹಿತ್ಯ ಬೇರೆಲ್ಲೂ ಇಲ್ಲ ಎಂದುದನ್ನು ಕೇಳಿಸಿಕೊಂಡಿದ್ದೇನೆ ಎಂದರು.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮಾತೃಭಾಷೆ ಶಿಕ್ಷಣಕ್ಕೆ ಬೇಕಿದೆ ಸಾಂವಿಧಾನಿಕ ರಕ್ಷಣೆ: ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಸೆ

ನನ್ನ ಮಾತೃಭಾಷೆ ತುಳುವಾದರೂ ಐವತ್ತು ವರ್ಷ ಕಾಲ ಕನ್ನಡವನ್ನು ನಾನು ಬೋಧಿಸಿದವನು. ಕನ್ನಡ ನಾಡಿನಲ್ಲಿ ಕನ್ನಡದ ಜತೆಗೆ ತುಳು ಬ್ಯಾರಿ ಕೊಂಕಣಿ ಮೊದಲಾದ ಉಪಭಾಷೆಗಳು ಸಹಜೀವನ ನಡೆಸಿವೆ. ಇಂಥ ಕನ್ನಡ ಬಹುಕಾಲ ಬಾಳಲಿದೆ. ಇದರ ಬಗ್ಗೆ ಆತಂಕ ಬೇಡ. ಆದರೆ ನಮ್ಮ ಶಾಲೆಗಳನ್ನು ಸಂವರ್ಧಿಸಬೇಕು. ನಾನು ಓದಿದ ಶಾಲೆಗೆ 117 ವರ್ಷಗಳಾಗಿವೆ. ಅಂದು ಒಂಬತ್ತು ಶಿಕ್ಷಕರಿದ್ದರೆ, ಇಂದು ಒಬ್ಬರೇ ಇದ್ದಾರೆ. ನೂರು ವರ್ಷ ದಾಟಿದ ಶಾಲೆಗಳನ್ನು ನಾವು ಪೋಷಿಸಿ ಬೆಳೆಸಬೇಕು ಎಂದು ನುಡಿದರು.

ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಮೂಡಿಬಂದ ಚಿಂತನೆಗಳನ್ನು ಕ್ರೋಡೀಕರಿಸಿ ಯಾವುದು ಕಾರ್ಯಸಾಧು ಎಂಬುದನ್ನು ಪರಿಶೀಲಿಸಲು ಕಸಾಪ ಒಂದು ಸಮಿತಿ ಮಾಡಬೇಕು. ಇದು ಸರ್ಕಾರಕ್ಕೆ ಕಾಲಕಾಲಕ್ಕೆ ಈ ಬಗ್ಗೆ ಹಿಮ್ಮಾಹಿತಿ ನೀಡುತ್ತಿರುವಂತಿರಬೇಕು ಎಂದವರು ಸೂಚಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಾಹಿತ್ಯ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ, ಸಂಸದ ಪ್ರಹ್ಲಾದ ಜೋಶಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಕಸಾಪ ಅಧ್ಯಕ್ಷ ಮಹೇಶ ಜೋಶಿ  ಮುಂತಾದವರಿದ್ದರು.  

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಇದು ಧರ್ಮ ಸಮ್ಮೇಳನವಲ್ಲ, ಇಲ್ಲಿ ಕನ್ನಡವೇ ಸಾರ್ವಭೌಮ: ಟೀಕಿಸಿದವರಿಗೆ ಮಹೇಶ ಜೋಶಿ ಉತ್ತರ

Exit mobile version