Site icon Vistara News

ಕನ್ನಡ ಸಾಹಿತ್ಯ ಸಮ್ಮೇಳನ | ಯುವಶಕ್ತಿಯನ್ನು ನಂಬಿದೆ ನಮ್ಮ ದೇಶ: ಸ್ವಾಮಿ ನಿರ್ಭಯಾನಂದ

youth

ಹಾವೇರಿ: ಈ ದೇಶದ ಯುವಶಕ್ತಿ ಇಡೀ ಜಗತ್ತಿಗೆ ಮಾದರಿಯಾಗಿದೆ. ಈ ದೇಶದ ಚಿಂತನೆ ದೇಹದ ಕಡೆಗೆ ಬಹಳ ಗಮನ ಕೊಟ್ಟಿಲ್ಲ. ಆದರೆ ಯುವಶಕ್ತಿಯ ಕಡೆಗೆ ಹೆಚ್ಚಿನ ಗಮನ ಕೊಟ್ಟಿದೆ ಎಂದು ಸ್ವಾಮಿ ನಿರ್ಭಯಾನಂದ  ಸರಸ್ವತೀ ನುಡಿದರು.

ಅವರು ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎರಡನೇ ದಿನದ ‘ಯುವ ಕರ್ನಾಟಕ ನಾಡು ನುಡಿ ಚಿಂತನೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹದಿನೆಂಟರಿಂದ ಮೂವತ್ತು ವರ್ಷದ ವ್ಯಕ್ತಿ ಯುವಕನಲ್ಲ. ಯಾವ ವ್ಯಕ್ತಿಯಲ್ಲಿ ಚೈತನ್ಯ ಚಿಮ್ಮುತ್ತಿದೆಯೋ. ಅಡ್ಡಿ ಆತಂಕಗಳು ಹೆಚ್ಚಾದಷ್ಟು ಉತ್ಸಾಹ ಯಾರಲ್ಲಿ ಚಿಮ್ಮುತ್ತಿದೆಯೋ ಅವನು ಯುವಕ. ಈ ದೇಶದ ನಂಬಿಕೆ ಇದು. ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವ ಒಳ್ಳೆಯ ಚಿಂತನೆಗಳಿವೆಯೋ ಅವೆಲ್ಲವೂ ಭಾರತದಿಂದ ಹೋಗಿವೆ. ಇದಕ್ಕೆ ಸ್ವಾಮಿ ವಿವೇಕಾನಂದರೇ ಉದಾಹರಣೆ. ಯವ್ವನ, ಯುವಶಕ್ತಿ ಎಂಬುದು ಮನಸ್ಸಿಗೆ ಸಂಬಂಧಿಸಿದ್ದು ಹೊರತು ವಯಸ್ಸಿಗಲ್ಲ. ಜಗತ್ತನ್ನು ಕಟ್ಟಿದ ವ್ಯಕ್ತಿಗಳೆಲ್ಲ ಯುವಕರು ಎಂದು ಅವರು ನುಡಿದರು.

ಸಂತೋಷವಾಗಿ ನಡೆದುಕೊಂಡು ಇದ್ದರೆ ಎಂಥ ಅಂಗವಿಕಲತೆಯನ್ನೂ ಮೀರಬಹುದು. ನಾವು ಹೇಗಿದ್ದೇವೆ ಎಂಬುದನ್ನು ನೋಡಿಕೊಂಡು ಕೊರಗುವುದಕ್ಕಿಂತ ಭಗವಂತ ನಮಗೆ ಕೊಟ್ಟ ಅವಕಾಶದಲ್ಲಿ ಹೆಚ್ಚಿನ ಕ್ರಿಯಾಶೀಲತೆ ಇದ್ದಾಗ ಬಾಳು ಸುಂದರವಾಗುತ್ತದೆ. ಹಣ  ಕೊಟ್ಟರೆ ಎಲ್ಲವೂ ಸಿಗುತ್ತೆ. ಆದರೆ ದೃಢಮನಸ್ಸು ಎಂಬುದು ನಮ್ಮೊಳಗೇ ಉತ್ಪತ್ತಿಯಾಗಬೇಕು. ಕೋಟಿ ಕೊಟ್ಟರೂ ಅದು ಸಿಗುವುದಿಲ್ಲ. ಆತ್ಮವಿಶ್ವಾಸವೇ ಮುಖ್ಯ ಎಂಬುದನ್ನು ಅರಿತು ನಡೆದಾಗ ನಮ್ಮನ್ನು ಯಾರೂ ತಡೆಯಲಾರರು ಎಂದು ಹಿರಿಯ ಅಂತಾರಾಷ್ಟ್ರೀಯ ಕ್ರೀಡಾಪಟು ಮಾಲತಿ ಹೊಳ್ಳ ಆಶಯ ನುಡಿಯಲ್ಲಿ ನುಡಿದರು.

ಇದನ್ನೂ ಓದಿ |ಕನ್ನಡ ಸಾಹಿತ್ಯ ಸಮ್ಮೇಳನ : ತೀರ್ಪುಗಳು ಕನ್ನಡದಲ್ಲಿದ್ದರೆ ಜನರಿಗೆ ನ್ಯಾಯ: ನ್ಯಾ. ಅರಳಿ ನಾಗರಾಜ

ಯುವಜನತೆಯ ಮೇಲೆ ದೇಶದ ನಾಳೆಗಳು ನಿಂತಿವೆ. ಆದರೆ ದಾರಿ ತಪ್ಪಿದ ಯುವಜನತೆ ಅಷ್ಟೇ ಹಾನಿಯನ್ನೂ ಮಾಡಬಲ್ಲುದು. ಯುವಜನತೆಗೆ ಶಿಸ್ತಿನ ಪಾಠವನ್ನು ಸರಿಯಾಗಿ ಕಲಿಸಿಕೊಡುವುದು ನಮ್ಮ ಭಾರತೀಯ ಸೇನೆ. ವೇದನೆಯಿಲ್ಲದೆ ಸಾಧನೆಯಿಲ್ಲ. ನಾವು ನಿರ್ಮಿಸಿಕೊಂಡ ಕೋಟೆಯಿಂದ ಹೊರಬರಬೇಕು. ನಾವು ನಿರ್ಮಿಸಿಕೊಂಡ ಸುರಕ್ಷತೆಯ ಆವರಣದಿಂದ ಹೊರಬಂದು ಪರಿಶ್ರಮಿಸಿದರೆ ಸೇನೆಯಲ್ಲಿ ಮೇಲೆ ಬರಲು ಅವಕಾಶವಿದೆ. ಇಂದು ಸ್ತ್ರೀಯರೂ ಗಂಡಸರಿಗೆ ಸರಿಸಮಾನವಾದ ಅವಕಾಶವನ್ನು ಸೈನ್ಯದಲ್ಲಿ ಹೊಂದಿದ್ದಾರೆ ಎಂದು ‘ಯುವ ಕನ್ನಡಿಗರಿಗೆ ಸೈನ್ಯದಲ್ಲಿ ಅವಕಾಶಗಳು’ ಕುರಿತು ಮಾತನಾಡಿದ ಸ್ಕ್ವಾಡ್ರನ್ ಲೀಡರ್ ವಿನುತಾ ಜಿ.ಆರ್ ಹೇಳಿದರು.

ಇವತ್ತು ಕರ್ನಾಟಕ ದೇಶಾದ್ಯಂತದಿಂದ ಯುವಜನತೆಯನ್ನು ಆಕರ್ಷಿಸುತ್ತಿದೆ. ಹೀಗಾಗಿ ಕರ್ನಾಟಕ ಹೊಸ ಚಿಂತನೆಗಳಿಂದ ನಳನಳಿಸುತ್ತಿದೆ. ಭಾರತ ಐವತ್ತರ ದಶಕದಲ್ಲಿ ಹಲವಾರು ಅವಕಾಶಗಳನ್ನು ಕಳೆದುಕೊಂಡಿತು. ಕರ್ನಾಟಕದ ಯುವಜನತೆಯ ಸಂಖ್ಯೆ ಇಸ್ರೇಲಿನ ಜನಸಂಖ್ಯೆಯ ಎರಡು ಪಟ್ಟು. ಆ ದೇಶ ಮರಳುಗಾಡನ್ನು ಹಚ್ಚಹಸಿರಾಗಿ ರೂಪಿಸಿಕೊಂಡಿದೆ. ಹೀಗಿರುವಾಗ, ನಾವು ನಮ್ಮ ರಾಜ್ಯವನ್ನು ಸಂಕಲ್ಪಿಸಿದರೆ ಇಡೀ ಭಾರತದ ಚಿತ್ರಣವನ್ನು ಬದಲಾಯಿಸಬಹುದು ಎಂದು ‘ಯುವ ಕರ್ನಾಟಕ ಹೊಸ ತಲೆಮಾರಿನ ಮನಸ್ಥಿತಿ’ ವಿಷಯದಲ್ಲಿ ಮಾತನಾಡಿದ ಪ್ರೊ.ಸ್ಮೃತಿ ಹರಿತ್ಸ ನುಡಿದರು.

ಪುಸ್ತಕಗಳು ಮತ್ತು ಸಾಹಿತ್ಯ ಅವಿನಾಶಿ. ಓದುವವರೇ ಇಲ್ಲ ಎಂಬ ಗೊಣಗಾಟದ ನಡುವೆಯೂ ಓದುವವರ ಹಾಗೂ ಬರೆಯುವವರ ಸಂಖ್ಯೆ ಬೆರಗುಗೊಳಿಸುವಷ್ಟಿದೆ. ಇಂದಿನ ಯುವ ಲೇಖಕರ ಬರವಣಿಗೆ ಬರಹದ ವಿಸ್ತಾರ ಅಪಾರವಾಗಿದೆ. ಸುತ್ತಲಿನ ಲೋಕವನ್ನು ಗಮನಿಸುತ್ತಾ ಸೂಕ್ಷ್ಮ ಒಳನೋಟಗಳನ್ನು ದಾಖಲಿಸುತ್ತಿದ್ದಾರೆ. ಏಕಕೇಂದ್ರಿತ ವ್ಯವಸ್ಥೆಯನ್ನು ವಿರೋಧಿಸಿ ಬಹುತ್ವವನ್ನು ಅಪ್ಪಿಕೊಳ್ಳುತ್ತಿದ್ದಾರೆ ಎಂದು ‘ಯುವ ಲೇಖಕರು ಮತ್ತು ಪ್ರಸ್ತುತ ಸಾಹಿತ್ಯ’ ಕುರಿತು ಮಾತನಾಡಿದ ದೀಪಾ ಹಿರೇಗುತ್ತಿ ನುಡಿದರು.

ಇದನ್ನೂ ಓದಿ |ಕನ್ನಡ ಸಾಹಿತ್ಯ ಸಮ್ಮೇಳನ | ಮುದ್ರಣ, ಟಿವಿ ಜಾಹೀರಾತುಗಳು ಡಿಜಿಟಲ್‌ ಮಾಧ್ಯಮದೆಡೆಗೆ ಹೋಗಲಿವೆ: ಡಾ. ಸಿಬಂತಿ ಪದ್ಮನಾಭ

Exit mobile version