ರಾಮನಗರ, ಕರ್ನಾಟಕ: ಕನ್ನಡಿಗರು ತಮಿಳಿಗರಿಂದ ರಾಜಕೀಯ ಕಲಿಯಬೇಕು. ತಮಿಳುನಾಡಿನಲ್ಲಿ ಕಾಂಗ್ರೆಸ್, ಬಿಜೆಪಿ ಯಾವುದೂ ಇಲ್ಲ. ಅಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚು ಬಲ. ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಕ್ಕೆ ಬಲ ನೀಡಬೇಕು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ನಾಯಕ ಎಚ್ ಡಿ ದೇವೇಗೌಡ (H D Devegowda) ಅವರು ಹೇಳಿದ್ದಾರೆ(Karnataka Election 2023).
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಮತಯಾಚನೆ ಮಾಡಿದ ಎಚ್ ಡಿ ದೇವೇಗೌಡ ಅವರು, ಇವತ್ತು(ಬುಧವಾರ) ಚನ್ನಪಟ್ಟಣಕ್ಕೆ ಬಂದಿದ್ದೇನೆ. ಮೊನ್ನೆ ಕೂಡ ಬಹಿರಂಗ ಸಭೆ ಮಾಡಿದ್ದೆ. ಇವತ್ತೂ ಎರಡು ಕಡೆ ಸಭೆ ನಡೆಸಿ ಕುಮಾರಸ್ವಾಮಿ ಪರ ಪ್ರಚಾರ ಮಾಡ್ತಿದ್ದೇನೆ. ಇಬ್ರಾಹಿಂ ಕೂಡಾ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡ್ತಿದ್ದಾರೆ. ಇಡೀ ದೇಶದಲ್ಲಿ ಯಾವುದೇ ಸಿಎಂ ಕೂಡಾ ದೊಡ್ಡಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಏಕಾಂಗಿಯಾಗಿ ನಿಂತು ರೈತರ ಸಾಲಮನ್ನಾ ಮಾಡಿದ್ದಾರೆ. ಮಹಿಳೆಯರಿಗೆ ರಿಸರ್ವೇಷಬ್ ಕೊಡಿಸಿದ್ದು ಯಾರು? ದಯಮಾಡಿ ಜೆಡಿಎಸ್ ಬಗೆಗಿನ ಟೀಕೆಗಳನ್ನ ನಿಲ್ಲಿಸಿ ಎಂದು ಹೇಳಿದರು.
ತಮಿಳಿಗರ ರೀತಿ ಇಲ್ಲೂ ಕೂಡಾ ಕಲಿಯಬೇಕು. ತಮಿಳುನಾಡಿನಲ್ಲಿ ಯಾವುದೇ ಕಾಂಗ್ರೆಸ್, ಬಿಜೆಪಿ ಇಲ್ಲ. ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇದೆ. ಕುಮಾರಸ್ವಾಮಿ 26 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ಯಾರಾದ್ರೂ ದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಾಲಮನ್ನಾ ಮಾಡಿದ್ದರೆ ತೋರಿಸಿ ಎಂದರು.
ನಾವು ಕನ್ನಡಿಗರು ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಇಡೀ ತಾಲೂಕನ್ನ ನೀರಾವರಿ ಮಾಡಿದ್ದು ಯಾರು? ಚನ್ನಪಟ್ಟಣದ ರೈತರು ಬದುಕಿದ್ದಾರೆ ಅಂದ್ರೆ ಕಾರಣ ದೇವೇಗೌಡ. ಬಿಜೆಪಿ, ಕಾಂಗ್ರೆಸನವರು ಕೈಕಟ್ಕೊಂಡು ಕೂತಿದ್ರು. ಏಕಾಂಗಿಯಾಗಿ ನೀರಿಗೆ ಹೋರಾಟ ಮಾಡಿದ್ದು ನಾನು. ರೈತರು ಬೆವರು ಸುರಿಸಿದ ದುಡ್ಡಲ್ಲಿ ನಾವು ನೀರಾವರಿ ತಂದಿದ್ದೇವೆ. ಅದೇ ತಮಿಳುನಾಡಿನವರಿಗೆ ದುಡ್ಡು ಕೊಡ್ತೀರಿ, ಪ್ರಾಜೆಕ್ಟ್ ಕ್ಲಿಯರ್ ಮಾಡ್ತೀರಿ. ನಮ್ಮ ಕನ್ನಡಿಗರಿಗೆ ಸ್ವಾಭಿಮಾನ ಇಲ್ವೆ? ಒಂದು ಮೇಕೆದಾಟು ಆಣೆಕಟ್ಟು ಕಟ್ಟಲು ಬಿಡ್ತಿಲ್ಲ. ಅದಕ್ಕಾಗಿ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಬೇಕು ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೇಳಿದರು.
ಅಶ್ವಿನ್ ಕುಮಾರ್ ಅವರನ್ನು ಗೆಲ್ಲಿಸಲು ದೇವೇಗೌಡ ಕರೆ
ಮೈಸೂರು, ಕರ್ನಾಟಕ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಮೈಸೂರಿನ ತಿ.ನರಸೀಪುರ ಕ್ಷೇತ್ರದ ಬನ್ನೂರಿನಲ್ಲಿ ಬುಧವಾರ ಪ್ರಚಾರ ಮಾಡಿದರು. ಈ ವೇಳೆ ಅವರು, ಅಭ್ಯರ್ಥಿ ಅಶ್ವಿನ್ ಕುಮಾರ್ ಅವರಿಂದ ಯಾವುದೇ ಸವಲತ್ತು ನಿರೀಕ್ಷೆ ಮಾಡಬೇಡಿ. ಅವರಂತಹ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕೆಂದು ಬಂದಿದ್ದೀರಿ. ಇದು ಅಶ್ವಿನ್ ಕುಮಾರ್ ಅವರ ಜನಪ್ರಿಯತೆ, ಪ್ರಾಮಾಣಿಕತೆ, ಪಕ್ಷ ನಿಷ್ಠೆಗೆ ಸಾಕ್ಷಿ ಎಂದು ಹೇಳಿದರು.
ಇದನ್ನೂ ಓದಿ: Karnataka Election 2023: ಮೇ 10ಕ್ಕೆ ಕುಮಾರಸ್ವಾಮಿಯನ್ನು ಗೆಲ್ಲಿಸಿ, 13ಕ್ಕೆ ಸಿಎಂ ಆಗ್ತಾರೆ: ಎಚ್.ಡಿ. ದೇವೇಗೌಡ
ತಮಿಳರಿಗೆ ನಾವು ಕಡಿಮೆ ಇಲ್ಲ. ನಮ್ಮ ನೀರನ್ನು ತಮಿಳರು ಕಸಿದುಕೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ 3 ಲಕ್ಷ ಜನ ಸೇರಿಸಿ ಸಭೆ ಮಾಡಿದ್ದೆ. ಮುಸ್ಲಿಂ, ಮಹಿಳೆಯರು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ತಂದು ಕೊಟ್ಟಿದ್ದೇನೆ. ಮಾತನಾಡಲು ತುಂಬಾ ಇದೆ. ಅಧಿಕಾರಕ್ಕೆ ಕೈ ಚಾಚುವವರಿಗೆ ಶ್ರೇಯಸ್ಸು ಇರಲ್ಲ. ಅಶ್ವಿನ್ ಕುಮಾರ್ ಅವರನ್ನು ಬಹುಮತದಿಂದ ಗೆಲ್ಲಿಸಿ. ಮೇ 13ರಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ. ಆ ಸಂದರ್ಭದಲ್ಲಿ ಅಶ್ವಿನ್ ಕುಮಾರ್ ಗೆಲುವು ನಿಮ್ಮ ಕೊಡುಗೆ ಆಗಬೇಕು ಎಂದು ಎಚ್ ಡಿ ದೇವೇಗೌಡ ಅವರು ಹೇಳಿದರು.