ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡ (TA Narayana Gowda) ಅವರಿಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ‘ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ’ದಲ್ಲಿ ಮಂಗಳವಾರ ಪ್ರತಿಷ್ಠಿತ ʼಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿʼ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಕರವೇ ಸಂಸ್ಥಾಪಕ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು, ನಾನು ಹೋರಾಟದ ಹಾದಿಯಲ್ಲಿ ಬರಲು ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಹಾಗೂ ಡಾ. ರಾಜಕುಮಾರ್ ಅವರ ಚಿತ್ರಗಳು ಕಾರಣ. ಕುವೆಂಪು ಅವರು ಕರ್ನಾಟಕ ರಕ್ಷಣಾ ವೇದಿಕೆಯ ಬಹುದೊಡ್ಡ ಆದರ್ಶವಾಗಿದ್ದಾರೆ. ಅವರ ಸಾಹಿತ್ಯ, ವಿಚಾರಧಾರೆಗಳನ್ನು ನಮ್ಮ ಕಾರ್ಯಕರ್ತರೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದರು.
ಕನ್ನಡದ ಶತ್ರುಗಳಿಗೆ ಒಂದು ಮಾತು ಹೇಳುತ್ತಿರುತ್ತೇನೆ. ಕನ್ನಡದ ನಾಡು, ನುಡಿ ವಿಚಾರದಲ್ಲಿ ನಾನು ಯುದ್ಧ ಟ್ಯಾಂಕರ್ ಇದ್ದ ಹಾಗೆ, ಅಡ್ಡಿ ಬರಬೇಡಿ ಅಪ್ಪಚ್ಚಿ ಆಗಿಬಿಡುತ್ತೀರಾ ಎಂದು ಕುವೆಂಪು ಅವರು ಹೇಳುತ್ತಿದ್ದರು. ಕುವೆಂಪು ಪದ್ಯ ʼಮನುಜ ಮತ ವಿಶ್ವಪಥʼ ನನ್ನ ಅಚ್ಚುಮೆಚ್ಚಿನದ್ದಾಗಿದೆ. ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕಹಿತಕೆ, ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ; ಓ ಬನ್ನಿ ಸೋದರರೇ ವಿಶ್ವಪಥಕ್ಕೆ! ಎಂಬ ಅವರ ಪದ್ಯದ ನುಡಿಗಳು ನನಗೆ ಬಹಳ ಇಷ್ಟ. ಇಂತಹ ರೋಮಾಂಚನಕಾರಿ ಪದ್ಯಗಳ ನುಡಿಗಳು ನನ್ನಂತಹವರಿಗೆ ಹೋರಾಟದ ಕಿಚ್ಚು ತುಂಬಿವೆ ಎಂದು ಹೇಳಿದರು.
ದಲಿತ, ರೈತ, ಕಮ್ಯುನಿಸ್ಟ್ ಸೇರಿ ಎಲ್ಲ ಚಳವಳಿಗೆ ಆದರ್ಶ ಎಂದು ಯಾರಾದರೂ ಇದ್ದರೆ ಅದು ಕುವೆಂಪು ಅವರು ಮಾತ್ರ. ಅವರು ಎಲ್ಲ ಹೋರಾಟಗಾರರಿಗೆ ಸ್ಫೂರ್ತಿ. ಕನ್ನಡಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಅಂತಹ ಮಹಾಕವಿಯ ಹೆಸರಿನ ಪ್ರಶಸ್ತಿಯನ್ನು ನಾನು ಸ್ವೀಕರಿಸಿರುವುದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರಂದತಹ, ಸುವರ್ಣ ಅಕ್ಷರಗಳಲ್ಲಿ ಬರೆದಿಡುವ ಗಳಿಗೆಯಾಗಿದೆ. ಈ ಪ್ರಶಸ್ತಿಯನ್ನು ನನಗೆ ಜನ್ಮ ಕೊಟ್ಟ ತಂದೆ-ತಾಯಿ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ | ಮಾನವೀಯ ಮೌಲ್ಯದ ಮೇರು ಸಂತ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ
ನಾರಾಯಣ ಗೌಡ ಅವರಿಗೆ ಅವರೇ ಹೋಲಿಕೆ: ಕೋಡಿಮಠ ಶ್ರೀ
ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಮಾತನಾಡಿ, ನಮ್ಮ ಕನ್ನಡನಾಡಿನಲ್ಲಿ ಅನೇಕ ಸಾಹಿತಿಗಳು, ವೀರರು, ಶೂರರು, ಹೋರಾಟಗಾರರು, ಧೀರರು ಆಗಿ ಹೋಗಿದ್ದಾರೆ. ಅಂತಹವರಲ್ಲಿ ನಮ್ಮ ನಾರಾಯಣ ಗೌಡರು ಕೂಡ ಒಬ್ಬರು. ಅವರ ತಂದೆಯವರು ಕೂಡ ಬಹಳ ವಿನಯವಂತರು. ಅದೇ ಗುಣ ನಮ್ಮ ನಾರಾಯಣ ಗೌಡರಲ್ಲಿದೆ. ಆದರೆ, ಸ್ವಲ್ಪ ವ್ಯತ್ಯಾಸವಾದರೆ ಆತ ಹುಲಿಯಾಗುತ್ತಾನೆ. ನಮ್ಮ ದೃಷ್ಟಿಯಲ್ಲಿ ವಾರಿಧಿ ವಾರಿಧಿಯೇ, ಆಕಾಶ, ಆಕಾಶವೇ. ಸಮುದ್ರ ಮತ್ತು ಆಕಾಶವನ್ನು ಹೋಲಿಕೆ ಮಾಡಲು ಆಗಲ್ಲ. ಹೀಗಾಗಿ ನಾರಾಯಣ ಗೌಡ ಅವರಿಗೆ ಅವರೇ ಹೋಲಿಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ನೆಲ, ಜಲಕ್ಕಾಗಿ ಹೋರಾಟ ಮಾಡಿದ ಡಾ. ರಾಜಕುಮಾರ್ ಅವರನ್ನು ಬಿಟ್ಟರೆ ನಮ್ಮ ನಾರಾಯಣಗೌಡರೇ ಅಂತಹ ಸ್ಥಾನ ಪಡೆದಿದ್ದಾರೆ. ಇನ್ನು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ತಾವು ಮಾಡಿದ ಒಳ್ಳೆ ಕೆಲಸಗಳನ್ನು ಮುಂದುವರಿಸಲು ನಾರಾಯಣಗೌಡರ ರೂಪದಲ್ಲಿ ಕೆಂಪೇಗೌಡರೇ ಬಂದಿದ್ದಾರೆ. ನಾಡು, ನುಡಿ, ಜಲದ ರಕ್ಷಣೆಗೆ ನಾರಾಯಣ ಗೌಡರು ಕಟಿಬದ್ಧರಾಗಿದ್ದು, ಅವರಿಗೆ ಎಲ್ಲ ದೈವಗಳ ಆಶೀರ್ವಾದ ಇರುತ್ತದೆ ತಿಳಿಸಿದರು.
ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಪಂಪ ನಾಗರಾಜಯ್ಯ, ನ್ಯಾಯಮೂರ್ತಿ ಅರಳಿ ನಾಗರಾಜ, ಹಿರಿಯ ಸಾಹಿತಿಗಳಾದ ಡಾ. ದೊಡ್ಡರಂಗೇಗೌಡ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಟಿ.ಎ. ನಾರಾಯಣ ಗೌಡರು ಸ್ವೀಕರಿಸಿದ ಮೊಟ್ಟ ಮೊದಲ ಪ್ರಶಸ್ತಿ
ಕನ್ನಡಕ್ಕೆ ಸದಾ ಮಿಡಿವ ಚೈತನ್ಯದ ಚಿಲುಮೆ, ನಾಡಿನ ಅಪರೂಪದ ಕನ್ನಡ ಸೇನಾನಿ, ಕನ್ನಡ ನೆಲ, ಜಲ, ಕನ್ನಡಿಗರ ನೆಮ್ಮದಿಯ ಬದುಕಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಟಿ.ಎ. ನಾರಾಯಣ ಗೌಡರು ಇದುವರೆಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಯಾವುದೇ ಪುರಸ್ಕಾರವನ್ನೂ ಸ್ವೀಕರಿಸಿಲ್ಲ. ಆದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಭಿಮಾನ ಮತ್ತು ಕುವೆಂಪು ಅವರ ಸಾಹಿತ್ಯ, ವರನಟ ರಾಜಕುಮಾರ್ ಅವರ ಸಿನಿಮಾಗಳ ಪ್ರೇರಣೆಯಿಂದ ಹೋರಾಟಕ್ಕೆ ಬಂದ ಹಿನ್ನೆಲೆ ತಮ್ಮ ಜೀವನದ ಮೊಟ್ಟ ಮೊದಲ ಪ್ರಶಸ್ತಿಯಾಗಿ ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.