ಉಡುಪಿ: ಕಾಂತಾರ ಸಿನೆಮಾದಲ್ಲಿ (Kantara movie) ದೈವ ಮತ್ತು ಮುಂಬೈನಿಂದ ಬಂದ ಸಾಹುಕಾರನ ವಾದ ವಿವಾದ ಬಹುತೇಕ ಎಲ್ಲಾ ನೋಡಿರುತ್ತೀರಿ. ದೈವದ ಜಾಗ ಕೇಳಿದಾಗ ನಾನು ಕೊಟ್ಟ ಸುಖ ನೆಮ್ಮದಿ ಮರಳಿ ನೀಡುತ್ತೀಯಾ ಕೇಳಿದ್ದಕ್ಕೆ, ಕೋರ್ಟ್ ವಿಚಾರ ಎತ್ತಿದ್ದ ಸಾಹುಕಾರ ಕೊನೆಗೆ ಕೋರ್ಟ್ ಆವರಣದಲ್ಲೇ ರಕ್ತ ಕಾರಿ ಸಾಯುತ್ತಾನೆ. ಅದೇ ರೀತಿಯ ಪ್ರಕರಣ ಉಡುಪಿ ಜಿಲ್ಲೆಯ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದಲ್ಲಿ ನಡೆದಿದೆ. ದೈವಸ್ಥಾನದ ವಿರುದ್ಧ ಮೊದಲ ಬಾರಿ ವ್ಯಕ್ತಿಯೊಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್‌ನಿಂದ ತಡೆಯಾಜ್ಞೆ ತಂದ ಮರುದಿನವೇ ಅವರು ಕುಸಿದು ಬಿದ್ದು ಸಾವನ್ನಪ್ಪಿದ್ದು ಕಾಕತಾಳೀಯ ಎನಿಸಿದೆ.
ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಮೂಲವಾಗಿತ್ತು. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯ ನೇಮೋತ್ಸವ ನಡೆಯುತ್ತಿದ್ದು ಊರವರು ಭಾಗಿಯಾಗುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಯಲ್ಲಿ ಪ್ರಕಾಶ್ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದಾಗ ಪ್ರಕಾಶ್ ಶೆಟ್ಟಿ ಸಹಜವಾಗಿ ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಹಪಹಪಿಯಿಂದ ಪ್ರತ್ಯೇಕ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ , ಇಲ್ಲಿಯ ಸಾನದ ಮನೆಯ ಗುರಿಕಾರರಾದ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತಾರೆ. ಹೀಗೆ 5 ಜನರ ಟ್ರಸ್ಟ್ ರಚಿಸಿದ ಪ್ರಕಾಶ್ ಶೆಟ್ಟಿ, ಇದರಲ್ಲಿ ಜಯ ಪೂಜಾರಿಯನ್ನು ಅಧ್ಯಕ್ಷರನ್ನಾಗಿ ನೇಮಿಸ್ತಾರೆ. ದೈವಸ್ಥಾನ ತಮಗೆ ಸೇರಿದ್ದು ಎಂದು ಹಕ್ಕು ಸ್ಥಾಪಿಸಲು ಯತ್ನಿಸುತ್ತಾರೆ.
ಈ ನಡುವೆ, ವರ್ಷಂಪ್ರತಿಯಂತೆ ಈ ವರ್ಷ ನೇಮೋತ್ಸವ ನಡೆಸಲು ಜಾರಂದಾಯ ದೈವಸ್ಥಾನ ಸಮಿತಿ ತೀರ್ಮಾನಿಸಿ, ಜನವರಿ 7 ರಂದು ಕೋಲ ನಡೆಸಲು ತೀರ್ಮಾನಿಸುತ್ತದೆ. ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವ ಜಯ ಪೂಜಾರಿ ಮತ್ತು ಪ್ರಕಾಶ್ ಶೆಟ್ಟಿ ಕೋಲಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗ್ತಾರೆ.
ಆಶ್ಚರ್ಯದ ಸಂಗತಿ ಎಂದರೆ ಡಿಸೆಂಬರ್ 23ಕ್ಕೆ ತಡೆಯಾಜ್ಞೆ ತಂದ ಜಯಪೂಜಾರಿ, ಡಿಸೆಂಬರ್ 24ರಂದು ಹಠಾತ್ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಇವರು, ಸಮೀಪದಲ್ಲಿ ನಡೆಯುತ್ತಿದ್ದ ತಂಬಿಲ ಸೇವೆ ಸಂದರ್ಭ ಎಲ್ಲರೆದುರೇ ಸಾವನ್ನಪ್ಪಿದ್ದನ್ನು ಊರಿನ ಜನ ಮೂಕವಿಸ್ಮಿತರಾಗಿ ನೋಡುತ್ತಾರೆ.
ಈ ಪ್ರಕರಣವನ್ನು ಕೈಗೆತ್ತಿಕೊಂಡ ಖ್ಯಾತ ವಕೀಲ ಬಿ. ನಾಗರಾಜ್, ತಡೆಯಾಜ್ಞೆಯನ್ನು ವೆಕೇಟ್ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಇಷ್ಟಕ್ಕೂ ಸುಮ್ಮನಿರದ ಟ್ರಸ್ಟಿ ಪ್ರಕಾಶ್ ಶೆಟ್ಟಿ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಕೊನೆಗೆ ಜಾರಂದಾಯ ದೈವಸ್ಥಾನದ ದೈವ ನರ್ತಕ ಭಾಸ್ಕರ ಬಂಗೇರ ಅವರನ್ನು ಬೆದರಿಸಿ ತಾವು ಹೇಳುವ ರೀತಿ ದೈವದ ನುಡಿ ಕೊಡಬೇಕು ಎಂದು ಬೆದರಿಸಿತ್ತಾರೆ.
ಜನವರಿ 7ಕ್ಕೆ ನಡೆಯಬೇಕಿದ್ದ ನೇಮೋತ್ಸವವನ್ನು ದೈವಸ್ಥಾನ ಸಮಿತಿ ಜಯಪೂಜಾರಿ ದೈವಾಧೀನರಾದ ಕಾರಣಕ್ಕೆ ಮುಂದೂಡಿದೆ. ಆದರೆ ಹಠ ಬಿಡದ ಪ್ರಕಾಶ್ ಶೆಟ್ಟಿ ಮತ್ತು ತಂಡ ಜಯ ಪೂಜಾರಿಯವರ ಉತ್ತರಕ್ರಿಯೆಯ ದಿನವಾದ ಜ. 7ರಂದೇ ಕಾಲಾವಧಿ ನೇಮೋತ್ಸವ ಮಾಡಲು ಹೊರಟಿದೆ. ಕೋರ್ಟ್‌ನಲ್ಲಿ ತಡೆಯಾಜ್ಞೆ ತೆರವಾಗಿದ್ದರೂ ಊರವರ ವಿರುದ್ಧ ಹೊರಟಿರುವ ಪ್ರಕಾಶ್ ಶೆಟ್ಟಿ ಮತ್ತು ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದೀಗ ಊರ ಸಮಸ್ತರು ಸಭೆ ಸೇರಿ 500 ವರ್ಷಗಳ ಇತಿಹಾಸ ಇರುವ ಜಾರಂದಾಯ ಬಂಟ ಸೇವಾ ಸಮಿತಿ ಮಾಡುವ ನಿರ್ಣಯಕ್ಕೆ ಬದ್ಧ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇದನ್ನೂ ಓದಿ | ಕೊರಗಜ್ಜನ ಪವಾಡ | 6 ವರ್ಷದ ಮಗುವಿನ ಸಕ್ಕರೆ ಕಾಯಿಲೆ ಗುಣಪಡಿಸಿದ ಕೊರಗಜ್ಜ; ಹರಕೆ ತೀರಿಸಿದ ಉಕ್ರೇನ್ ದಂಪತಿ