ಬೆಂಗಳೂರು: ನನ್ನ ಪುತ್ರ ಕೆ.ಇ. ಕಾಂತೇಶ್‌ಗೆ (KE Kantesh) ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಶಿವಮೊಗ್ಗದಿಂದ ಸ್ಪರ್ಧೆ ಮಾಡಬೇಕು ಎಂಬ ಆಸೆ ಇತ್ತು. ಆದರೆ, ವರಿಷ್ಠರು ಅವನಿಗೆ ಟಿಕೆಟ್ ಕೊಡದೆ ಸಾಮಾನ್ಯ ಕಾರ್ಯಕರ್ತನೊಬ್ಬನಿಗೆ ಟಿಕೆಟ್ ಕೊಟ್ಟರು. ಅವರು ಸ್ಪರ್ಧಿಸಿ ಗೆದ್ದು ಬಂದರು. ಈಗ ಕಾಂತೇಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ (Haveri Lok Sabha constituency) ಸ್ಪರ್ಧೆ ಮಾಡುವ ಇಚ್ಛೆಯನ್ನು ಹೊಂದಿದ್ದಾನೆ. ಹೀಗಾಗಿ ಅಲ್ಲಿ ಸಾಕಷ್ಟು ಕೆಲಸವನ್ನೂ ಮಾಡುತ್ತಿದ್ದಾನೆ ಎಂದು ಮಾಜಿ ಡಿಸಿಎಂ, ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ (Former Deputy CM and senior BJP leader KS Eshwarappa) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಹಾವೇರಿ ಜಿಲ್ಲೆಯಲ್ಲಿ ನನ್ನ ಪುತ್ರ ಕಾಂತೇಶ್ ಸಂಚಾರ ಮಾಡುತ್ತಿದ್ದು, ಎಲ್ಲ ಸಮಾಜದ ಸಾಧುಸಂತರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾನೆ. ಅವರೂ ಸಹ ಈತನ ಸ್ಪರ್ಧೆ ಬಗ್ಗೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಪಕ್ಷ ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತಾನೆ. ಇಲ್ಲವಾದರೆ ಟಿಕೆಟ್ ಕೊಟ್ಟವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.
ಸನಾತನ ಧರ್ಮದ ಹೇಳಿಕೆ ಬಗ್ಗೆ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಏಡ್ಸ್, ಡೆಂಘೀಯಂತಹ ಹೇಳಿಕೆ ನೀಡಿದವರಿಗೆ ಜನರೇ ಚಿಕಿತ್ಸೆ ಕೊಡುತ್ತಾರೆ. ಈ ಹೇಳಿಕೆ ಕೊಟ್ಟವನ ಹೆಸರನ್ನೇ ನಾನು ಇದುವರೆಗೆ ಕೇಳಿರಲಿಲ್ಲ. ಉದಯನಿಧಿ ಸ್ಟಾಲಿನ್‌ಗೆ ಯಾವ ಪದದಲ್ಲಿ ಬೈಯಬೇಕು ಎಂಬುದೇ ನನಗೆ ಗೊತ್ತಾಗಲಿಲ್ಲ. ಅವನನ್ನು ಹುಚ್ಚ ಎನ್ನಬೇಕೋ? ಅಯೋಗ್ಯ ಎನ್ನಬೇಕೋ? ಎಂಬುದೇ ನನಗೆ ಗೊತ್ತಾಗಲಿಲ್ಲ. ಸನಾತನ ಧರ್ಮದ ಬಗ್ಗೆ ಮಾತನಾಡಲು ಇವನು ಯಾವನು? ಇವನಿಗೆ ಅಧಿಕಾರವೇ ಇಲ್ಲ. ಇವನು ಕ್ರಿಶ್ಚಿಯನ್ ಆಗಿದ್ದಾನೆ. ಹಾಗಾಗಿ ಕ್ರಿಶ್ಚಿಯನ್ ಧರ್ಮದಲ್ಲಿ ಏನು ರಿಪೇರಿ ಮಾಡಲು ಕೆಲಸ ಇದೆಯೋ ಅದನ್ನು ಮಾಡಲಿ ಎಂದು ಗುಡುಗಿದರು.
ಮುಸ್ಲಿಮರಲ್ಲೂ ನೂರು ಸಮಸ್ಯೆ ಇದೆ. ಅವರ ಸಮುದಾಯದ ಬಗ್ಗೆ ಮಾತನಾಡಲಿ ನೋಡೋಣ. ಏಕೆ ಮಾತನಾಡುವುದಿಲ್ಲ? ಹಿಂದು ಸಮಾಜಕ್ಕೆ, ಸನಾತನ ಧರ್ಮಕ್ಕೆ ಬೈದರೆ ಮುಸ್ಲಿಮರ ಮತ ಸಿಗುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಕಾಂಗ್ರೆಸ್‌ನವರಿಗೆ ಮುಸ್ಲಿಮರ ಮತ ಬೇಕು. ಹೀಗಾಗಿ ಅವರು ಸಹ ಇಂಥ ಹೇಳಿಕೆಯನ್ನು ಬೆಂಬಲಿಸುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ಹಿಂದು ಸಮಾಜದ ವಿರುದ್ಧ ಹೋದರೆ ಕಾಂಗ್ರೆಸ್ ನಿರ್ನಾಮ ಆಗುತ್ತದೆ ಎಂಬ ಕಾರಣಕ್ಕಾಗಿಯೇ ಕಾಂಗ್ರೆಸ್ ಇದರ ಬಗ್ಗೆ ಮಾತನಾಡದಿರುವ ನಿರ್ಣಯ ಕೈಗೊಂಡಿತು. ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ ಎರಡು ದಿನ ಇವರು ಬಾಯಿಗೆ ಬಂದಂತೆ ಮಾತನಾಡಿದರು. ಕೊನೆಗೆ ಇವರಿಗೆ ಅರಿವಾಯಿತು ಎಂದು ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಇದನ್ನೂ ಓದಿ: Power Point with HPK : ಜಾತಿ ಹೆಸರಿಲ್ಲದೆ ಸಿದ್ದರಾಮಯ್ಯ, ಡಿಕೆಶಿ ರಾಜಕೀಯ ಮಾಡಲ್ಲವೆಂದ ಈಶ್ವರಪ್ಪ
ಹಿಂದು ಸಮಾಜವನ್ನು ನಿರ್ನಾಮ ಮಾಡುತ್ತೇವೆ ಎಂದು ಹೋದ ರಾಕ್ಷಸರು ನಾಶವಾಗಿ ಹೋದರು. ಸರ್ವೇ ಜನಃ ಸುಖಿನೋ ಭವಂತು ಎಂಬ ಸಮಾಜ ನಮ್ಮದು. ಹಿಂದು ಧರ್ಮವನ್ನು ಟೀಕೆ ಮಾಡುತ್ತಾ ಬಂದಿರುವ ಕಾಂಗ್ರೆಸ್ ಸ್ಥಿತಿ ಇಂದು ಏನಾಗಿದೆ? ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಷ್ಟು ಮಟ್ಟಿಗೆ ಬಂದು ತಲುಪಿದೆ ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.