Site icon Vistara News

Karnataka Politics : ಸಿಎಂ-ಡಿಸಿಎಂ ಒಳಜಗಳಕ್ಕೆ ಮುಲಾಂ ಹಚ್ಚಲು ಬಂದ ಕೈ ಕಮಾಂಡ್;‌ ಸುರ್ಜೇವಾಲ, ವೇಣುಗೋಪಾಲ್‌ ದಾಳವೇನು?

CM Siddaramaiah and DCM DK Shivakumar infront of vidhana soudha

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karanataka Politics) ಕಾಂಗ್ರೆಸ್‌ ಒಳಜಗಳವೇ ಚರ್ಚಾ ವಿಷಯ ಆಗಿದೆ. 135 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದರೂ ರಾಜ್ಯ ಕಾಂಗ್ರೆಸ್‌ನಲ್ಲಿ (Congress Karnataka) ನೆಮ್ಮದಿ ಇಲ್ಲ. ಸಿದ್ದರಾಮಯ್ಯ (CM Siddaramaiah) ಅವರು ಸಿಎಂ ಗಾದಿಯಲ್ಲಿ ನೆಮ್ಮದಿಯಿಂದ ಕುಳಿತು ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬಂತಹ ಬೆಳವಣಿಗೆಗಳು ನಡೆಯುತ್ತಲೇ ಇವೆ. ಪೂರ್ಣಾವಧಿ ಸಿಎಂ ಬಗ್ಗೆ ಚರ್ಚೆ ಹುಟ್ಟಿಕೊಳ್ಳುತ್ತಲೇ, ಡಿ.ಕೆ. ಶಿವಕುಮಾರ್‌ (DCM DK Shivakumar) ಬಣದಿಂದ ಒಂದೊಂದು ರಾಜಕೀಯ ತಂತ್ರಗಳು ಶುರುವಾಗುತ್ತವೆ. ಇನ್ನೊಂದು ಡಿನ್ನರ್‌ ಪಾಲಿಟಿಕ್ಸ್‌ (Dinner Politics) ಆರಂಭವಾಗಿ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾಬೀತು ಮಾಡುತ್ತದೆ. ಇನ್ನು ಬೆಳಗಾವಿ ರಾಜಕೀಯವು (Belagavi politics) ನುಂಗಲಾರದ ತುತ್ತಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಸಚಿವ ಸತೀಶ್‌ ಜಾರಕಿಹೊಳಿ ಸಮರ ಸಾರಿದ್ದಾರೆ. ಅವರು ಶಾಸಕರ ಗುಂಪನ್ನು ಕರೆದುಕೊಂಡು ದುಬೈಗೆ ಹೋಗಲು ಮುಂದಾದ ಬೆನ್ನಲ್ಲೇ ರಾಜ್ಯಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಆಗಮಿಸಿದ್ದಾರೆ. ಈಗ ಸಿಎಂ – ಡಿಸಿಎಂ ಮಧ್ಯೆ ಯಾವ ಸಂಧಾನ ಸೂತ್ರವನ್ನು ಇಡುತ್ತಾರೆ ಎಂಬುದು ಸದ್ಯದ ಕುತೂಹಲವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ನಾಯಕರು ದಿಢೀರ್‌ ಎಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಮೊದಲು ಇಂಧನ ಸಚಿವ ಕೆ.ಜೆ. ಜಾರ್ಜ್‌ ನಿವಾಸದಲ್ಲಿ ಗುಪ್ತ ಸಭೆ ನಡೆಸಲು ತೀರ್ಮಾನಿಸಲಾಗಿತ್ತಾದರೂ ಮಾಧ್ಯಮಗಳಿಗೆ ವಿಚಾರ ತಿಳಿದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಗೆ ಸಭೆಯನ್ನು ಶಿಫ್ಟ್‌ ಮಾಡಲಾಗಿದೆ. ಅಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆಗೆ ಚರ್ಚೆ ನಡೆಸಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌ ಹಾಗೂ ರಣದೀಪ್ ಸಿಂಗ್‌ ಸುರ್ಜೇವಾಲ (AICC general secretary KC Venugopal and Randeep Singh Surjewala), ಆಗಿರುವ ಗಾಯಕ್ಕೆ ಮುಲಾಂ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.

ರಾಜ್ಯದಲ್ಲಿ ಸರ್ಕಾರ ರಚಿಸಿ ಐದು ತಿಂಗಳಾದರೂ ಕಾಂಗ್ರೆಸ್ ಒಳಬೇಗುದಿ ನಿಂತಿಲ್ಲ. ಹಲವು ಸಂದರ್ಭಗಳಲ್ಲಿ ಶಾಸಕರು ಸಚಿವರು ಸರ್ಕಾರಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದಾರೆ. ಹೈಕಮಾಂಡ್ ಮಧ್ಯಪ್ರವೇಶದ ಹೊರತು ಇದೆಲ್ಲವೂ ಬಗೆಹರಿಯುವ ಲಕ್ಷಣ ‌ಕಾಣಿಸುತ್ತಿಲ್ಲ ಎಂದು ಅರಿತು ದೆಹಲಿ ನಾಯಕರು ರಾಜ್ಯಕ್ಕೆ ಆಗಮಿಸಿದ್ದಾರೆ. ಈ ಮೂಲಕ ಸಿಎಂ‌ ಅಧಿಕಾರ ಹಂಚಿಕೆ ವಿಚಾರ ಪದೇ ಪದೆ ಚರ್ಚೆ ಆಗುತ್ತಿರುವುದು ಹಾಗೂ ಹೆಚ್ಚುವರಿ ಡಿಸಿಎಂ ಮಾಡಬೇಕು ಎಂಬ ಕೂಗಿಗೆ ಬ್ರೇಕ್‌ ಹಾಕಲು ಮುಂದಾಗಿದ್ದಾರೆ. ಈ ವಿಚಾರವಾಗಿ ಈಗ ಸಿಎಂ ಹಾಗೂ ಡಿಸಿಎಂ ಎದುರು ವೇಣುಗೋಪಾಲ್‌ ಮತ್ತು ಸುರ್ಜೇವಾಲ ಪ್ರಸ್ತಾಪಿಸಿದ್ದಾರೆ.

ಕಿಡಿ ಹೊತ್ತಿಸಿದ ಬೆಳಗಾವಿ ರಾಜಕಾರಣ

ಸಚಿವರಾದ ಸತೀಶ್ ಜಾರಕಿಹೊಳಿ (Satish Jarkiholi) V/s ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಪ್ಲಸ್‌ ಡಿ.ಕೆ. ಶಿವಕುಮಾರ್‌ ಎಂಬ ರೀತಿಯಲ್ಲಿ ಈಗ ಬೆಳಗಾವಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಅಲ್ಲಿ ಕೆಲವೊಂದು ವಿಚಾರಕ್ಕೆ ಡಿ.ಕೆ. ಶಿವಕುಮಾರ್‌ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಚಿವ ಸತೀಶ್‌ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರು ಆಗಾಗ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಲೇ ಬಂದಿದ್ದಾರೆ. ಇನ್ನು ಅವರೂ ಸಹ ಶಾಸಕರ ತಂಡದ ಜತೆ ದುಬೈ ಪ್ರವಾಸಕ್ಕೆ ಹೊರಟ್ಟಿದ್ದರು.

ಸಚಿವರ ಮನೆಗಳಿಗೆ ಸಿಎಂ ಭೇಟಿ

ಇತ್ತ ಸಚಿವರ ಮನೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಾಗ ಭೇಟಿ ನೀಡುತ್ತಿರುವುದು ಸಹ ಪರೋಕ್ಷ ಸಂದೇಶ ರವಾನೆಗೆ ಕಾರಣವಾಗಿದೆ. ಮೊದಲು ಸಚಿವ ಎನ್. ಚೆಲುವರಾಯಸ್ವಾಮಿ, ಬಳಿಕ‌ ಸಚಿವ ಸತೀಶ್ ಜಾರಕಿಹೊಳಿ, ಈಗ ಸಚಿವ ಡಾ. ಜಿ. ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ನಡೆದಿದೆ. ಮುಂದೆ ಡಾ. ಎಚ್.ಸಿ. ಮಹದೇವಪ್ಪ, ಜಮೀರ್ ಅಹ್ಮದ್‌ ಖಾನ್‌ ಮನೆಗೆ ತೆರಳುವ ಸಾಧ್ಯತೆ ಇದೆ.

ಕೇಳಿ ಬಂದ ಸಂಪುಟ ಪುನಾರಚನೆ ಕೂಗು

ಸಚಿವ ಸಂಪುಟ ಪುನಾರಚನೆ ಮಾಡಬೇಕು, ಅವಕಾಶ ಸಿಗದೇ ಇರುವವರಿಗೆ ಅವಕಾಶ ಕೊಡಬೇಕು ಎಂಬ ಒತ್ತಾಯ ಸಹ ಇದೇ ವೇಳೆ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್‌ ಸಿಎಂ ಆಗುತ್ತಾರೆ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗದವರು, ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ ಎಂದು ಪದೇ ಪದೆ ಹೇಳುತ್ತಿದ್ದಾರೆ. ಇದನ್ನು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ.

ಸರ್ಕಾರ ಬದಲಿಸುವ ಶಕ್ತಿ ನಮ್ಮ ನಾಯಕ ಸಮುದಾಯಕ್ಕೆ ಇದೆ ಎಂದು ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಈಚೆಗೆ ಹೇಳಿಕೆ ನೀಡಿದ್ದರು. ಇನ್ನು ಸಚಿವರ ವರ್ತನೆ ವಿರುದ್ಧ ಶಾಸಕರ ಅಸಮಾಧಾನ ಸಹ ಮುಂದುವರಿದಿದೆ. ನಿಗಮ – ಮಂಡಳಿ ನೇಮಕದಲ್ಲಿ ಶಾಸಕರು ವರ್ಸಸ್ ಕಾರ್ಯಕರ್ತರು ಎಂಬಾತಾಗಿದೆ. ಇನ್ನು ಕಾಂಗ್ರೆಸ್ ಶಾಸಕರಿಗೆ‌ ಯಾವುದೇ ವಿಶೇಷ ಅನುದಾನ ಸಹ ಸಿಗುತ್ತಿಲ್ಲ. ಇದು ಸಹ ಪಕ್ಷದೊಳಗಿನ ಕಲಹಕ್ಕೆ ಕಾರಣವಾಗಿದೆ.

ಇತ್ತ ಜಾತಿ ಗಣತಿ ವರದಿ ಸ್ವೀಕರಿಸಿ ಅದನ್ನು ಬಿಡುಗಡೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರ ಬಿಡುಗಡೆ ಬಳಿಕ ಉಂಟಾಗುವ ಸಮಸ್ಯೆಗಳು ಏನು? ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿಯಾಗಿ ಇದನ್ನು ಬಳಸಿಕೊಳ್ಳಬೇಕು? ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಹೇಗೆ ಎಂಬ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Karnataka Rajyotsava : ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು – ವಿದ್ಯುತ್: ಸಿಎಂ ಸಿದ್ದರಾಮಯ್ಯ

ಆಪರೇಷನ್‌ ಕಮಲದ ಚರ್ಚೆ

ಇದರ ನಡುವೆ ಬಿಜೆಪಿಯ ಆಪರೇಷನ್ ಕಮಲ ವಿಚಾರ ಹೆಚ್ಚು ತಲೆ ಕೆಡಸಿದೆ. ಕಾಂಗ್ರೆಸ್ ಶಾಸಕರು ಬಿಜೆಪಿ ನಾಯಕರ ಜತೆ ಮಾತುಕತೆ ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದಕ್ಕೆ ಹೇಗೆ ಕಡಿವಾಣ ಹಾಕಬೇಕು? ಯಾವ ಕಾರ್ಯತಂತ್ರಗಳನ್ನು ಹೆಣೆಯಬೇಕು? ಶಾಸಕರ ಅತೃಪ್ತಿಯನ್ನು ಹೇಗೆ ತಣಿಸಬೇಕು ಎಂಬುದನ್ನೂ ಸಹ ವೇಣುಗೋಪಾಲ್‌ ಹಾಗೂ ಸುರ್ಜೇವಾಲ ಚರ್ಚೆ ನಡೆಸುತ್ತಿದ್ದಾರೆ.

Exit mobile version