Site icon Vistara News

ಕರವೇ ನಾರಾಯಣ ಗೌಡ ಇಂದು ಜೈಲಿನಿಂದ ಬಿಡುಗಡೆ; ಮತ್ತೆ ಬಂಧನ ಸಾಧ್ಯತೆ

narayana gowda karave

ಬೆಂಗಳೂರು: ಕನ್ನಡ ನಾಮಫಲಕ (Kannada boards) ಅಳವಡಿಕೆ ವಿಚಾರದಲ್ಲಿ ನಡೆಸಲಾದ ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಮುಖ್ಯಸ್ಥ ಕರವೇ ನಾರಾಯಣ ಗೌಡ (Karave Narayana Gowda) ಅವರು ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದು, ಅವರನ್ನು ಮತ್ತೆ ಪೊಲೀಸರ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಗೊತ್ತಾಗಿದೆ.

ಕರವೇ ನಾರಾಯಣ ಗೌಡ ಸೇರಿದಂತೆ ವೇದಿಕೆಯ 28 ಮಂದಿ ಕಾರ್ಯಕರ್ತರು 13 ದಿನದ ನ್ಯಾಯಾಂಗ ಬಂಧನದ ಬಳಿಕ ನಿನ್ನೆ ಬಿಡುಗಡೆಯಾಗಬೇಕಿತ್ತು. ಆದರೆ ಜಾಮೀನು ಆದೇಶದ ಪ್ರತಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿಲ್ಲ ಎಂಬ ಕಾರಣ ನೀಡಿ ಬಿಡುಗಡೆಯನ್ನು ಇಂದಿಗೆ ಮುಂದೂಡಲಾಗಿತ್ತು. ಇಂದು ಮಧ್ಯಾಹ್ನದ ವೇಳೆಗೆ ನಾರಾಯಣಗೌಡ ಹಾಗೂ ಕಾರ್ಯಕರ್ತರ ಬಿಡುಗಡೆ ಸಾಧ್ಯತೆ ಇದೆ.

ನಾರಾಯಣಗೌಡ ಪರ ವಕೀಲರು ಎಲ್ಲಾ ಕಾನೂನು ಪ್ರಕ್ರಿಯೆ ಮುಗಿಸಿದ್ದಾರೆ. ಹದಿಮೂರು ದಿನದ ಸೆರೆವಾಸದ ಬಳಿಕ, ಷರತ್ತುಬದ್ಧ ಜಾಮೀನಿನ ಮೇರೆಗೆ ನಾರಾಯಣಗೌಡರ ರಿಲೀಸ್ ಆಗುತ್ತಿದೆ. ಆದರೆ ನಾರಾಯಣ ಗೌಡರಿಗೆ ಮತ್ತೆ ಸಂಕಷ್ಟ ಸಾಧ್ಯತೆ ಇದೆ. ಹಳೆಯ ಕೇಸ್ ವಿಚಾರವಾಗಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಅವರನ್ನು ಬಂಧನ ಮಾಡುವ ಸಾಧ್ಯತೆ ಇದೆ.

ಶನಿವಾರದಿಂದ ಕುಮಾರಸ್ವಾಮಿ ಲೇಔಟ್ ಪೊಲೀಸರು ಜೈಲಿನ ಬಳಿಯೇ ಕಾದು ಕುಳಿತಿದ್ದು, ಜೈಲಿನಿಂದ ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಮತ್ತೆ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಂಧನ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ನ್ಯಾಯಾಧೀಶರ ತೀರ್ಪಿನ ಮೇರೆಗೆ ನಾರಾಯಣಗೌಡರು ಹೊರಗೆ ಬರುತ್ತಾರೋ ಮತ್ತೆ ಒಳಗೆ ಬರುತ್ತಾರೋ ಎಂಬುದು ನಿರ್ಧಾರ ಆಗಲಿದೆ.

“ಇಂದು ಸಂಜೆ 6.45ಕ್ಕೆ ಜಾಮೀನು ಪ್ರತಿ ಯಾವುದೇ ವಿಳಂಬ ಆಗದೆ ಜೈಲಿಗೆ ತಲುಪಿದೆ. ಲಾ ಅಂಡ್ ಆರ್ಡರ್ ಪ್ರಾಬ್ಲಮ್ ಆಗಬಹುದು ಎನ್ನುವ ಕಾರಣಕ್ಕೆ ವಿಳಂಬ ಮಾಡುತ್ತಿರಬಹುದು. ನಾಳೆ ಬೆಳಗ್ಗೆಯೂ ಕೂಡ ಅವರನ್ನು ಬಿಡಬಹುದು” ಎಂದು ನಾರಾಯಣಗೌಡ ಪರ ವಕೀಲ ಕುಮಾರ್ ಎಲ್‌.ಜಿ ನಿನ್ನೆ ಹೇಳಿದ್ದರು.

“ಹೊರಬಂದ ನಂತರ ಅವರನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಬಹುದು. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪ್ರಕರಣದಲ್ಲಿ ವಾರೆಂಟ್ ಇದೆ. ಹಲಸೂರು ಗೇಟ್ ಠಾಣೆಯಲ್ಲಿ ಯಾವುದೇ ವಾರೆಂಟ್ ಇಲ್ಲ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಪ್ರಕರಣದಲ್ಲಿ ಜಾಮೀನು ಅಲ್ಲದ ಪ್ರಕರಣ ಆಗಿದೆ. ಈ ಹಿನ್ನೆಲೆ ಅವರನ್ನು ವಶಕ್ಕೆ ಪಡೆಯಬಹುದು. ವಶಕ್ಕೆ ಪಡೆದರೂ ಸಹ ನಾವು ನಾಳೆಯೇ ಬೇಲ್ ಮೂಲಕ ಹೊರ ಕರೆ ತರುತ್ತೇವೆ” ಎಂದು ಅವರು ತಿಳಿಸಿದ್ದಾರೆ.

“ನಾರಾಯಣಗೌಡ ಅವರನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಏಳು ವರ್ಷದ ಹಳೆಯ ಪ್ರಕರಣದಲ್ಲಿ ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಇದುವರೆಗೆ ಪೊಲೀಸರು ಯಾಕೆ ಸುಮ್ಮನಿದ್ದರು? ಸಮನ್ಸ್ ಯಾಕೆ ಜಾರಿ ಮಾಡಿರಲಿಲ್ಲ? ಸರ್ಕಾರವೇ ನಾರಾಯಣ ಗೌಡ ಸೇರಿ ಕರವೇ ಕಾರ್ಯಕರ್ತರನ್ನು ಹತ್ತಿಕ್ಕುತ್ತಿದೆ” ಎಂದು ವಕೀಲ ಕುಮಾರ್ ಹೇಳಿದ್ದಾರೆ.

Exit mobile version