Site icon Vistara News

KARAVE protest : ಜೈಲಿಂದ ಬಿಡುಗಡೆ ಬೆನ್ನಲ್ಲೇ ಕರವೇ ನಾರಾಯಣ ಗೌಡ ಮತ್ತೆ ಅರೆಸ್ಟ್‌

Karave Narayana Gowda12

ಬೆಂಗಳೂರು: ಕನ್ನಡ ನಾಮಫಲಕ (Kannada boards) ಅಳವಡಿಕೆ ವಿಚಾರದಲ್ಲಿ ನಡೆಸಲಾದ ಪ್ರತಿಭಟನೆಯ (KARAVE protest) ಸಂದರ್ಭದಲ್ಲಿ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ (Karnataka Rakshana Vedike) ಮುಖ್ಯಸ್ಥ ಕರವೇ ನಾರಾಯಣ ಗೌಡ (Karave Narayana Gowda) ಅವರನ್ನು ಸೋಮವಾರ ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಬಿಡುಗಡೆಯಾಗುತ್ತಿದ್ದಂತೆಯೇ ಪೊಲೀಸರು ಅವರನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದು, ಇನ್ನೊಮ್ಮೆ ಕೋರ್ಟ್‌ ಮುಂದೆ ಹಾಜರುಪಡಿಸಿ ಜೈಲಿಗಟ್ಟಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವಿದ್ಯಮಾನ ಕನ್ನಡ ಹೋರಾಟಗಾರರನ್ನು ಕೆರಳಿಸಿದೆ.

ಕರವೇ ನಾರಾಯಣ ಗೌಡ ಸೇರಿದಂತೆ ವೇದಿಕೆಯ 28 ಮಂದಿ ಕಾರ್ಯಕರ್ತರಿಗೆ ಕೋರ್ಟ್‌ ಕಳೆದ ಶುಕ್ರವಾರವೇ ಜಾಮೀನು ನೀಡಿತ್ತು. ಆದರೆ, ಜಾಮೀನು ಆದೇಶದ ಪ್ರತಿ ಸಿಕ್ಕಿಲ್ಲ ಎಂಬ ಕಾರಣ ನೀಡಿ ಶುಕ್ರವಾರ ರಾತ್ರಿವರೆಗೂ ಕಾಯಿಸಲಾಗಿತ್ತು. ಶನಿವಾರ -ಭಾನುವಾರ ರಜೆ ಇದ್ದ ಕಾರಣ ಬಿಡುಗಡೆ ಆಗಿರಲಿಲ್ಲ. ಸೋಮವಾರ ಕೂಡಾ ಕಾನೂನಾತ್ಮಕ ಪ್ರಕ್ರಿಯೆಗಳ ಹೆಸರಿನಲ್ಲಿ ದಿನ ದೂಡಿದ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯಷ್ಟೇ ಬಿಡುಗಡೆ ಮಾಡಿದ್ದಾರೆ. ಆದರೆ, ಪೊಲೀಸರು ಮತ್ತೆ ಬಂಧಿಸಿದ್ದಾರೆ. ಒಬ್ಬ ಕನ್ನಡ ಹೋರಾಟಗಾರನನ್ನು ಈ ರೀತಿಯಾಗಿ ಸತಾಯಿಸಿದ್ದು ಮತ್ತು ಹಳೆ ಪ್ರಕರಣದ ಹೆಸರಿನಲ್ಲಿ ಬಂಧಿಸಿದ್ದು ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಯಾವುದದು ಇನ್ನೊಂದು ಪ್ರಕರಣ?

ನಾರಾಯಣ ಗೌಡ ಅವರು ಜೈಲಿನಿಂದ ಬಿಡುಗಡೆ ಆಗು ವೇಳೆ ಅಲ್ಲೇ ಕಾಯುತ್ತಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ. 2017ರ ಕನ್ನಡ ನಾಮಫಲಕ ಹೋರಾಟಕ್ಕೆ ಸಂಬಂಧಿಸಿ ಅವರ ಬಂಧನ ನಡೆದಿದೆ.

2017ರಲ್ಲಿ ಯಲಚೇನಹಳ್ಳಿ ಮೆಟ್ರೋ ಸ್ಟೇಷನ್ ನಾಮ ಫಲಕಗಳಿಗೆ ಮಸಿ ಬಳಿಯಲು ಮುಂದಾಗಿದ್ದ ನಾರಾಯಣಗೌಡ ಹಾಗೂ ಸಂಗಡಿಗರು ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅವರ ಮೇಲೆ ಚಾರ್ಜ್ ಶೀಟ್ ಕೂಡಾ ಸಲ್ಲಿಕೆಯಾಗಿತ್ತು. ಆದರೆ ನಾರಾಯಣ ಗೌಡರು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಇದಕ್ಕೆ ಸಂಬಂಧಿಸಿ 16 ಬಾರಿ ಜಾಮೀನುರಹಿತ ಬಂಧನ ವಾರಂಟ್‌ ಜಾರಿಯಾಗಿತ್ತು. ಈ ನಡುವೆ, ಜನವರಿ 12ರೊಳಗೆ ನಾರಾಯಣ ಗೌಡರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಕಾರ್ಯಕರ್ತರು ಮನೆಗೆ, ನಾರಾಯಣ ಗೌಡರು ಆಸ್ಪತ್ರೆಗೆ

ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡ 27 ಕನ್ನಡ ಕಾರ್ಯಕರ್ತರನ್ನು ಪೊಲೀಸರ ಬೆಂಗಾವಲಿನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಅವರವರ ಮನೆಗೆ ಬಿಡುವ ಕೆಲಸ ನಡೆಯುತ್ತಿದೆ. ಈ ನಡುವೆ, ಮರಳಿ ಬಂಧಿತರಾದ ನಾರಾಯಣ ಗೌಡ ಅವರನ್ನು ಸೈಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಾರಾಯಣಗೌಡ ಪುತ್ರಿ ಹಾಗೂ ಪುತ್ರ ಆಸ್ಪತ್ರೆ ಬಳಿ ಆಗಮಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿದ ಬಳಿಕ ಪೊಲೀಸರು ಅವರನ್ನು ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ.

ಇದನ್ನೂ ಓದಿ: Karave Protest : ನಾರಾಯಣ ಗೌಡ ಪರಪ್ಪನ ಅಗ್ರಹಾರ ಜೈಲಿಗೆ; ಮುಠ್ಠಾಳ ಸರ್ಕಾರ ಎಂದು ಆಕ್ರೋಶ

ಏನಾಗಬಹುದು ಮುಂದೆ?

ನಾರಾಯಣ ಗೌಡರ ಮೇಲಿರುವುದು ವಿಚಾರಣೆಗೆ ಹಾಜರಾಗದ ಕಾರಣಕ್ಕಾಗಿ ಹೊರಡಿಸಿದ ಬಂಧನ ಆದೇಶ. ಈಗ ಅವರನ್ನು ಹಾಜರು ಮಾಡುವಲ್ಲಿಗೆ ಬಂಧನ ವಾರಂಟ್‌ ರದ್ದಾಗುವ ಸಾಧ್ಯತೆ ಇದೆ. ಅಥವಾ ಒಂದೊಮ್ಮೆ ಕೋರ್ಟ್‌ ಬಯಸಿದರೆ ನ್ಯಾಯಾಂಗ ಬಂಧನವನ್ನು ವಿಧಿಸುವ ಸಾಧ್ಯತೆಗಳೂ ಇವೆ.

Exit mobile version