ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಇದು ಜೆಡಿಎಸ್ ಇದುವರೆಗೆ ಪ್ರಚಾರ ಮಾಡುತ್ತಿರುವ ಪಂಚರತ್ನ ಭರವಸೆಗಳಿಗೆ ಹೆಚ್ಚುವರಿಯಾಗಿ ನೀಡಿರುವ ಹೊಸ ಗ್ಯಾರಂಟಿ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿದ ಅವರು ಹೊಸ ಭರವಸೆಯನ್ನು ನೀಡಿದರು. ಪಂಚರತ್ನ ಕಾರ್ಯಕ್ರಮದ ಜೊತೆಗೆ ಹೊಸ ಭರವಸೆ ಘೋಷಣೆ ಮಾಡಿದ ಎಚ್‌ಡಿಕೆ ಅವರು, ವಿದ್ಯಾರ್ಥಿನಿಯರಿಗೆ ಶಾಲಾ, ಕಾಲೇಜುಗಳಿಗೆ ಹೋಗಿ ಬರಲು ಅನುಕೂಲವಾಗುವಂತೆ ಎಲೆಕ್ಟ್ರಿಕ್ ಮೊಪೆಡ್‌ನ್ನು ಉಚಿತವಾಗಿ ನೀಡಲಾಗುವುದು ಎಂದರು.
ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದೇ ನಾನು
ʻʻನಮ್ಮದು ಕೇವಲ ಗ್ರಾಮೀಣ ಭಾಗದ ಪಕ್ಷವಲ್ಲ. ನಗರ ಪ್ರದೇಶಕ್ಕೆ ನಮ್ಮ ಸರ್ಕಾರ ಹಾಗೂ ದೇವೆಗೌಡರು ಬಹಳಷ್ಟು ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಮೆಟ್ರೋ ರೈಲು ಯೋಜನೆ ತಂದದ್ದು ನಮ್ಮ ಸರ್ಕಾರ ಮೆಟ್ರೋ ಯೋಜನೆಗೆ ಅಡಿಪಾಯ ಹಾಕಿದ್ದೇ ನಾನುʼʼ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದರು.
ʻʻಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದೇನೆ. ನೀವು ಕೊಡುವ ಪ್ರೀತಿಯೇ ನನಗೆ ಶಕ್ತಿʼʼ ಎಂದು ಕುಮಾರಸ್ವಾಮಿ ಹೇಳಿದರು. ಪಂಚರತ್ನ ಕಾರ್ಯಕ್ರಮಗಳನ್ನ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನುಡಿದರು.
ಬಿಸಿಲಲ್ಲೇ ಇದ್ದೇನೆ, ಬಿಸಿಲಲ್ಲೇ ಇರುತ್ತೇನೆ ಎಂದರು ಎಚ್.ಡಿ.ಕೆ.
ಕೆಂಚೇನಹಳ್ಳಿಯಲ್ಲಿ ನಡೆದ ಸಭೆಯ ವೇಳೆ, ಪ್ರಚಾರ ವಾಹನವನ್ನು ನೆರಳಿನಲ್ಲಿ ನಿಲ್ಲಿಸಲು ಮುಂದಾದಾಗ, ʻʻಡ್ರೈವರ್ ನೆರಳಿಗೆ ಹಾಕಬೇಡಿ, ಇಲ್ಲೇ ಮಾತನಾಡುತ್ತೇನೆʼʼ ಎಂದರು. ʻಬಿಸಿಲು ಇದೆ ಅಣ್ಣʼ ಎಂದು ಕಾರ್ಯಕರ್ತರು ಹೇಳಿದಾಗ, ನಾಲ್ಕು ತಿಂಗಳಿಂದ ಬಿಸಿಲಲ್ಲೇ ಇದ್ದೇನೆ, ಏನೂ ಆಗಲ್ಲ ಎಂದರು ಎಚ್.ಡಿ.ಕೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರನೇ ದಿನ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆದಿದ್ದು, ಅಭ್ಯರ್ಥಿ ಜವರಾಯಿಗೌಡ ಪರ ಪ್ರಚಾರ ಮಾಡಿದರು.
ಈ ನಡುವೆ ಬೇರೆ ಪಕ್ಷದ ಟಿಕೆಟ್ ಸಿಗದ ಬಂಡಾಯ ಅಭ್ಯರ್ಥಿಗಳು ಜೆಡಿಎಸ್ ಸೇರುತ್ತಿರುವ ಬಗ್ಗೆ ಕೇಳಿದಾಗ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನ ಕೆಲವು ಬಂಡಾಯ ಅಭ್ಯರ್ಥಿಗಳು ನಮ್ಮ ಜೊತೆ ಬರಬೇಕು ಅಂತ ಇದ್ದಾರೆ. ನಾವು 120 ಸೀಟು ಗೆಲ್ಲಬೇಕಲ್ಲ. ಮತ್ತೊಂದು ಮೈತ್ರಿ ಸರ್ಕಾರ ಮಾಡೋದಕ್ಕಲ್ಲ ನಾನು ಹೋರಾಟ ನಡೆಸುತ್ತಿರುವುದು. ಹೀಗಾಗಿ ಅವರ ಬೆಂಬಲವನ್ನೂ ಪಡೆಯುತ್ತೇನೆ ಎಂದರು. ಆದರೆ, ಪಕ್ಷ ಬಿಟ್ಟು ಹೋದವರ ಅವಶ್ಯಕತೆ ನನಗಿಲ್ಲ ಎಂದೂ ಹೇಳಿದರು.
ಎಚ್‌ಡಿಕೆ ಅವರನ್ನು ಭೇಟಿಯಾದ ಕೆಜಿಎಫ್ ಬಾಬು
ಪಂಚರತ್ನ ರಥ ಯಾತ್ರೆ ಹೆಮ್ಮಿಗೆ ಪುರಕ್ಕೆ ಆಗಮಿಸಿದ ವೇಳೆ ಕಾಂಗ್ರೆಸ್ ನಾಯಕ ಕೆ.ಜಿಎಫ್ ಬಾಬು ಅವರು ಎಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದರು. ಚಿಕ್ಕಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಅವರು ಒಂದೊಮ್ಮೆ ಟಿಕೆಟ್ ಸಿಗದೆ ಹೋದರೆ ಜೆಡಿಎಸ್ ಸೇರುವ ಪ್ಲ್ಯಾನ್ ಹೊಂದಿದ್ದಾರೆ ಎನ್ನಲಾಗಿದೆ.
ಭೇಟಿಯ ಬಳಿಕ ಮಾತನಾಡಿದ ಕೆಜಿಎಫ್ ಬಾಬು, ನಾನು ವೈಯಕ್ತಿಕ ಕಾರಣದಿಂದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದೇನೆ. ಕಾಂಗ್ರೆಸ್ ನನಗೆ ಟಿಕೆಟ್ ಕೊಡುವ ಖಾತ್ರಿ ಇದೆ, ಕೊಡದಿದ್ದರೆ ಕುಮಾರಣ್ಣ ಇದ್ದಾರಲ್ಲಾ ಎಂದು ನಕ್ಕರು.
ಇದನ್ನೂ ಓದಿ : Hasana Politics: ನನ್ನ ಹತ್ರ ಬ್ಲ್ಯಾಕ್‌ಮೇಲ್ ನಡೆಯಲ್ಲ; ಟಿಕೆಟ್ ಕೊಡದಿದ್ರೆ ಪಕ್ಷೇತರ ಎಂಬ ವರಸೆಗೆ ಕುಮಾರಸ್ವಾಮಿ ತಿರುಗೇಟು