ಬೆಳಗಾವಿ: ಮರಾಠಿ ಭಾಷಿಕರು ಹೆಚ್ಚಾಗಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕೆಂದು ಮಹಾರಾಷ್ಟರ್ ವಿಧಾನಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಕರ್ನಾಟಕದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬೆಳಗಾವಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಹಾರಾಷ್ಟ್ರ ರಾಜ್ಯದವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಕರ್ನಾಟಕದ ಅನೇಕ ಗ್ರಾಮದ ನಮ್ಮದು ಎಂದು ಹೇಳುತ್ತಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಒಂದಿಂಚೂ ಜಾಗವನ್ನು ಬಿಡುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಮಹಾರಾಷ್ಟ್ರ ಸಭೆಯಲ್ಲಿ ನಿರ್ಣಯ ಮಾಡಿದೆ. ಕರ್ನಾಟಕ ಹಾಗೂ ಕಾಂಗ್ರೆಸ್ ಪಕ್ಷ ತೀವ್ರವಾಗಿ ಇದನ್ನು ಖಂಡಿಸುತ್ತದೆ. ನಮ್ಮ ಒಂದು ಹಳ್ಳಿಯನ್ನೂ ನಾವು ಬಿಟ್ಟು ಕೊಡುವುದಿಲ್ಲ. ಅವರ ಹಳ್ಳಿಯೂ ನಮಗೆ ಬೇಡ. ಚುನಾವಣೆ ಹತ್ತಿರ ಬಂದಿದೆ. ಹೀಗಾಗಿ ಬಿಜೆಪಿ ಕುತಂತ್ರದಿಂದ ಮಾಡುತ್ತಾ ಇದೆ. ಎಲ್ಲರ ಒಗ್ಗಟ್ಟಿನಿಂದ ಕರ್ನಾಟಕವನ್ನು ಕಾಪಾಡಬೇಕು. ಇದು ನಮ್ಮ ಕರ್ತವ್ಯವಾಗಿದೆ. ಅವರು ಮಾಡಿದ ತೀರ್ಮಾನಕ್ಕೆ ನಮ್ಮ ವಿರೋಧ ಇದೆ. ಬೇಕು ಎಂದು ಅಶಾಂತಿ ಮೂಡಿಸಲು ತೊಂದರೆ ಮಾಡುತ್ತಾ ಇದ್ದಾರೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಹಾಗೂ ಪಕ್ಷದ ಸಹಕಾರ ಯಾವಗಲೂ ಇರುತ್ತದೆ.
ಸಭೆಯಲ್ಲೂ ಇದನ್ನು ನಾವು ಪ್ರಸ್ತಾಪ ಮಾಡುತ್ತೇವೆ. ಇದರ ಕುರಿತು ನಾವು ನಿರ್ಣಯ ಮಂಡಿಸುತ್ತೇವೆ. ದ್ವೇಶ, ಅಸೂಯೆಯಿಂದ ಹೀಗೆ ಮಾಡುತ್ತಾ ಇದ್ದಾರೆ. ಕೇಂದ್ರ, ಮಹಾರಾಷ್ಟ್ರ, ಹಾಗೂ ಇಲ್ಲಿಯೂ ಬಿಜೆಪಿ ಆಡಳಿತವಿದೆ. ರಾಜಕೀಯವಾಗಿ ಹೆಚ್ಚು ಕಡಿಮೆ ಆಗುತ್ತದೆ ಎಂದು ಹೀಗೆ ಮಾಡುತ್ತಾ ಇದ್ದಾರೆ. ಈ ಭಾಗದ ರಾಜಕಾರಣದಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ಹೀಗಾಗಿ ಇವರೇ ಕುಮ್ಮಕ್ಕು ಕೊಟ್ಟು ಹೀಗೆ ಮಾಡಿಸುತ್ತಾ ಇದ್ದಾರೆ. ಕನ್ನಡ ಪರ ಸಂಘಟನೆ ಹಾಗೂ ರಾಜ್ಯದ ಜನ ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಹಾಜನ್ ವರದಿಯೇ ಅಂತಿಮ. ಅವರು ಪ್ರಚೋದನೆ ಮಾಡುತ್ತಾ ಇದ್ದಾರೆ. ನಮ್ಮ ವಿಧಾನಸಭೆಯಲ್ಲಿ ನಿರ್ಣಯ ಮಾಡಿದ್ದು ಬೇರೆ. ಅವರ ವಿಧಾನಸಭೆಯಲ್ಲಿ ನಿರ್ಣಯ ಮಾಡಿದ್ದು ಪ್ರಚೋದನೆ ಮಾಡಲು. ಮಹಾರಾಷ್ಟ್ರ ಸರ್ಕಾರ ಮೊದಲಿನಿಂದಲೂ ಕ್ಯಾತೆ ತೆಗೆಯುತ್ತಿದೆ.
ಮಹಾರಾಷ್ಟ್ರ ಖಂಡನಾ ನಿರ್ಣಯಕ್ಕೆ ಯಾವುದೇ ಬೆಲೆ ಇಲ್ಲ. ರಾಜಕೀಯಕ್ಕಾಗಿ ಕ್ಯಾತೆ ತೆಗೆಯುತ್ತಿದ್ದಾರೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎಂದರು.
ವಿಧಾನ ಪರಿಷತ್‌ನಲ್ಲಿ ಈ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಡಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಯಾರು ಪ್ರಬಲರಿದ್ದರು ಅವರೆಲ್ಲ ತಮಗೆ ಬೇಕಾದ ರೀತಿಯಲ್ಲಿ ರಾಜ್ಯ ಮಾಡಿಕೊಂಡರು. ಭಾಷೆಯ ವಿಚಾರದಲ್ಲಿ ಕೆಲವು ರಾಜ್ಯದವರು ಕ್ಯಾತೆ ತೆಗೆದಿರುವುದನ್ನು ನೋಡಿದಾಗ ಇವರ ಉದ್ದೇಶ ಬೇರೆ ಏನೊ ಇದೆ ಎನ್ನಿಸುತ್ತದೆ. ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಈ ರೀತಿಯ ಕೃತ್ಯವನ್ನು ಮಾಡುತ್ತಿವೆ.
ಗಡಿ ಭಾಗದಲ್ಲಿ ಕನ್ನಡ ಅಥವಾ ಮರಾಠಿ ಮಾತನಾಡುವವರು ಈ ವಿವಾದ ಮಾಡುತ್ತಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶಾಂತಿ ಕದಡುವ ಪ್ರಯತ್ನ ಮಾಡುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಬಹಳ ಕೆಟ್ಟ ಪರಿಣಾಮವಾಗುತ್ತದೆ. ಆದರಿಂದ ನಾವು ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಎಂಇಎಸ್ ಬ್ಯಾನ್ ಮಾಡಬೇಕು. ಇದರ ಬಗ್ಗೆ ಒಂದು ದಿಟ್ಟ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ಶಾಂತಿಭಂಗ ತರುವ ಕೆಲಸ ಮಾಡುತ್ತಾರೆ. ಬ್ಲಾಕ್ ಡೇ ಆಚರಣೆ ಮಾಡುತ್ತಾರೆ. ಸಂಗೊಳ್ಳಿ ರಾಯಣ್ಣ, ಬಸವಣ್ಣ ಮೂರ್ತಿ ಇರಬಹುದು, ಕನ್ನಡ ಬಾವುಟ ಸುಡುವ ಕೆಲಸವನ್ನು ಎಂಇಎಸ್ ಮಾಡುತ್ತಾರೆ ಎಂದರು.
ಬಿಜೆಪಿಐ ತೇಜಸ್ವಿನಿಗೌಡ ಮಾತನಾಡಿ, ಬೆಳಗಾವಿ ನಮ್ಮ ಅವಿಭಾಜ್ಯ ಅಂಗ. ಕಿತ್ತೂರು ರಾಣಿ ಚೆನ್ನಮ್ಮ ಹುಟ್ಟಿದ ನಾಡು. ಬ್ರಿಟಿಷರ ವಿರುದ್ಧ ಹೋರಾಡಿದ ಮಹಿಳೆ ಆಕೆ. ಬ್ರಿಟಿಷರು ಕಿತ್ತೂರು ಚೆನ್ನಮ್ಮ ನವರಿಗೆ ಕಪ್ಪಕೊಡಬೇಕೆಂದು ಕೇಳಿದಾಗ ನೀವೆನು ಇಲ್ಲಿ ಉತ್ತಿರಾ, ಬಿತ್ತಿರಾ ನಿಮಗೇಕೆ ಕೊಡಬೇಕು ಕಪ್ಪ ಎಂದು ಅವರ ವಿರುದ್ಧ ಯುದ್ದ ಸಾರಿದ ವೀರ ಮಹಿಳೆ.
ಅಂತಹ ನಾಡಲ್ಲಿ ಹುಟ್ಟಿದ ನಾವು ಕರ್ನಾಟಕದ ಒಂದಿಂಚು ಭೂಮಿಯನ್ನೂ ನೀಡುವುದಿಲ್ಲ. ಶಿವಾಜಿ ಮಹಾರಾಜರ ಮೇಲೆ ಅಭಿಮಾನ ಹೊಂದಿರುವ ಮಹಾರಾಷ್ಟ್ರದವರು ಅವರ ಮಗನಿಗೆ ಆಶ್ರಯ ನೀಡಿದ ಕರ್ನಾಟಕದ ರಾಜರ ಸರ್ಕಾರವನ್ನು ಮರೆಯಬಾರದು ಎಂದರು.
ಸದಸ್ಯರ ಮಾತಿನ ನಂತರ ಸರ್ಕಾರದ ಪರವಾಗಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರ ನೀಡಿದರು. ಭಾಷಾವಾರು ಪ್ರಾಂತ್ಯ ವಿಂಗಡಣೆ ಮಾಡಿದ್ದು ಅಷ್ಟು ಸುಲಭದ ಕೆಲಸ ಅಲ್ಲ. ಫಜಲ್ ಅಲಿ ಕಮಿಷನ್ ಕೊಟ್ಟ ವರದಿ ವೇಳೆ ನಮಗೂ ಅಸಮಧಾನ ಇತ್ತು. ಕಾವೇರಿಯಿಂದ ಗೋದಾವರಿವರೆಗೂ ಇದ್ದ ರಾಜ್ಯವನ್ನು ಬೆಳಗಾವಿವರೆಗೆ ಮಾತ್ರ ಕೊಟ್ಟರಲ್ಲ ಎಂಬ ಬೇಸರವಿತ್ತು. ನಾವು ಶಾಂತಿಪ್ರಿಯರು, ಹೀಗಾಗಿ ಸಾಕು ಬಿಡಪ್ಪ ಎಂದು ಸುಮ್ಮನಾದೆವು.
ಅಮಿತ್ ಷಾ ಅವರು ಒಡಂಬಡಿಕೆಗೆ ಕರೆಯಲಿಲ್ಲ. ಶಾಂತಿ ಕಾಪಾಡಿ ಎಂದು ಹೇಳುವುದಕ್ಕಷ್ಟೆ ಕರೆದಿದ್ದು. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ. ಮಹಾರಾಷ್ಟ್ರ ಅಧಿವೇಶನದಲ್ಲಿ ಜಯಂತ್ ಪಾಟೀಲ್ ಅವರು ನಮ್ಮ ಸಿಎಂಗೆ ಕೊಬ್ಬು ಎಂದು ಹೇಳುತ್ತಾರೆ. ಇನ್ನೊಬ್ಬ ಶಾಸಕ ಕೊಯ್ನಾದಿಂದ ಒಂದು ಹನಿ ನೀರನ್ನೂ ಬಿಡುವುದಿಲ್ಲ ಎಂದು ಹೇಳುತ್ತಾರೆ. ಇದನ್ನ ತೀವ್ರವಾಗಿ ಖಂಡಿಸುತ್ತೇವೆ.
ಯಾವುದಾದರೂ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಬೇಕಾದರೆ ಅದು ಮುಂಬೈ, ಅದು ಕಾಸ್ಮೋಪಾಲಿಟನ್ ಸಿಟಿ ಮುಂಬೈ. ಬೆಳಗಾವಿಗೆ ಆ ಲಕ್ಷಣ ಇಲ್ಲ. ಮುಂಬೈನ ಬೆಳವಣಿಗೆಯಲ್ಲಿ ಕನಿಷ್ಠ ಶೇ.20ರಷ್ಟು ಕನ್ನಡಿಗರು, ಕೊಂಕಣಿಯವರ ಕೊಡುಗೆ ಇದೆ. ಹೀಗಾಗಿ ಅವರಿಗೆ ಇಚ್ಚೆ ಇದ್ದರೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಲಿ.
ಶಾಂತಿ , ನೆಮ್ಮದಿ ಕಾಪಾಡಿ ಎಂದು ಕೇಂದ್ರ ಸಚಿವರು ಹೇಳಿದ್ದರು ಅದಕ್ಕಾಗಿ ಸುಮ್ಮನಿದ್ದೇವೆ. ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದಲ್ಲ. ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆ ಬಂದಾಗ ಈ ರೀತಿಯ ವಿಚಾರ ಬರುತ್ತದೆ. ಬೆಳಗಾವಿಯಲ್ಲಿ ಪಾಲಿಕೆ ಚುನಾವಣೆ ಬಂದಾಗ ಈ ವಿವಾದ ಬರುತ್ತದೆ ಅಷ್ಟೆ..
ಇಲ್ಲಿನ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಕನ್ನಡಿಗರು, ಮರಾಠಿಗರು ನೆಂಟಸ್ತನ, ಬೀಗತನ ಮಾಡಿಕೊಂಡು ಚೆನ್ನಾಗಿದ್ದಾರೆ. ರಾಜ್ಯದ ಬೆಳಗಾವಿಯ ಭಾಗದಲ್ಲಿ ನಾವು ಅಭಿವೃದ್ಧಿ ಮಾಡಿದ್ದೇವೆ. ಈ ಬೆಳಗಾವಿಯ ವಿವಾದ ಮುಗಿದು ಹೊದ ವಿಚಾರ ಎಂದು ನಿರ್ಣಯವನ್ನು ಮಂಡನೆ ಮಾಡಿದರು. ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕಾರ ಮಾಡಲಾಯಿತು.
ಇದನ್ನೂ ಓದಿ | Border Dispute | ಕರ್ನಾಟಕದಲ್ಲಿರುವ ಮರಾಠಿ ಭಾಷಿಕರ ಪ್ರದೇಶಗಳೆಲ್ಲ ನಮ್ಮ ರಾಜ್ಯಕ್ಕೇ ಸೇರಬೇಕು; ಮಹಾರಾಷ್ಟ್ರದಲ್ಲಿ ನಿರ್ಣಯ ಅಂಗೀಕಾರ