ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯು ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷೆ (Karnataka Election Exit Poll) ಕೂಡ ಲಭ್ಯವಾಗಿವೆ. ಇನ್ನು, ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದೇ ಹೇಳುತ್ತಿವೆ. ಹಾಗಾಗಿ, ರಾಜಕಾರಣಿಗಳು ಹಾಗೂ ಜನರಿಗೆ ಫಲಿತಾಂಶದ ಕುರಿತು ಒಂದು ಚಿತ್ರಣ ಸಿಕ್ಕಂತಾಗಿದೆ.
ಟಿವಿ9-ಸಿವೋಟರ್ ಸಮೀಕ್ಷೆ ಹೇಳುವುದೇನು?
ಟಿವಿ 9 ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಯು 83-95, ಕಾಂಗ್ರೆಸ್ 100-112, ಜೆಡಿಎಸ್ 21-29 ಹಾಗೂ ಪಕ್ಷೇತರರು 02-06 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ: Karnataka Election 2023: ಅನಾರೋಗ್ಯ ಇದ್ದರೂ ಮತದಾನದ ಹೆಬ್ಬಯಕೆ; ಸ್ಟ್ರೆಚರ್‌ನಲ್ಲೇ ಬಂದು ಹಕ್ಕು ಚಲಾವಣೆ
ಬಿಜೆಪಿಗೆ ಹೆಚ್ಚು ಕ್ಷೇತ್ರ ಎಂದ ಜನ್ ಕೀ ಬಾತ್
ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದೆ. ಬಿಜೆಪಿಯು 94-117, ಕಾಂಗ್ರೆಸ್ 91-106, ಜೆಡಿಎಸ್ 14-24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ, ಇಲ್ಲೂ ಕಾಂಗ್ರೆಸ್ 100ರ ಗಡಿ ದಾಟುತ್ತದೆ ಎಂದು ಸಮೀಕ್ಷೆ ತಿಳಿಸಿರುವುದು ಜಿದ್ದಾಜಿದ್ದಿಯ ಕದನ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪೋಲ್ ಸ್ಟ್ರ್ಯಾಟ್ (POLLSTRAT) ಸಮೀಕ್ಷೆ
ಪೋಲ್ ಸ್ಟ್ರ್ಯಾಟ್ ಮತಗಟ್ಟೆ ಸಮೀಕ್ಷೆ ಕೂಡ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಲಭಿಸಲಿವೆ ಎಂದು ತಿಳಿಸಿದೆ. ಆಡಳಿತಾರೂಢ ಬಿಜೆಪಿಯು 88-98, ಕಾಂಗ್ರೆಸ್ 99-109, ಜೆಡಿಎಸ್ 21-26 ಹಾಗೂ ಜೆಡಿಎಸ್ 2-4 ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಿದೆ ಎಂದು ತಿಳಿಸಿದೆ.
ಟೈಮ್ಸ್ ನೌ ಪೋಲ್ ಆಫ್ ಪೋಲ್ಸ್
ಟೈಮ್ಸ್ ನೌ ವಾಹಿನಿಯ ಪೋಲ್ ಆಫ್ ಪೋಲ್ಸ್ ಮತಗಟ್ಟೆ ಸಮೀಕ್ಷೆಯೂ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನ ಲಭಿಸಲಿವೆ ಎಂದು ತಿಳಿಸಿದೆ. ಬಿಜೆಪಿ 94, ಕಾಂಗ್ರೆಸ್ 103, ಜೆಡಿಎಸ್ 25 ಹಾಗೂ ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ತಿಳಿಸಿದೆ. ಆದರೆ, ಯಾವ ಪಕ್ಷವೂ ಮ್ಯಾಜಿಕ್ ನಂಬರ್ ಕ್ರಾಸ್ ಮಾಡಿಲ್ಲ ಎಂಬುದು ಗಮನಾರ್ಹವಾಗಿದೆ.
ರಿಪಬ್ಲಿಕ್ ಟಿವಿ ಪೋಲ್ ಆಫ್ ಪೋಲ್ಸ್
ರಿಪಬ್ಲಿಕ್ ಟಿವಿಯ ಪೋಲ್ ಆಫ್ ಪೋಲ್ಸ್‌ನಲ್ಲಿಯೂ ಕಾಂಗ್ರೆಸ್ ಪಾರಮ್ಯ ಸಾಧಿಸಿದೆ. ಆದರೆ, ಬಹುಮತಕ್ಕೆ ಬೇಕಾದ ಸಂಖ್ಯೆ ದಾಟುವಲ್ಲಿ ಕಾಂಗ್ರೆಸ್ ವಿಫಲವಾಗಲಿದೆ ಎಂಬುದು ಪೋಲ್ ಆಫ್ ಪೋಲ್ಸ್ ತಿಳಿಸಿದೆ. ಬಿಜೆಪಿ 91, ಕಾಂಗ್ರೆಸ್ 105, ಜೆಡಿಎಸ್ 27 ಹಾಗೂ ಜೆಡಿಎಸ್ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.