Site icon Vistara News

Karnataka Bandh : ಇಂದು ರಾತ್ರಿಯಿಂದಲೇ ಸೆಕ್ಷನ್‌ 144 ಜಾರಿ; ರ‍್ಯಾಲಿ, ಮೆರವಣಿಗೆಗೆ ಅವಕಾಶವಿಲ್ಲ

Karnataka Bandh Police commissioner B Dayanand

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿರುವುದನ್ನು ಪ್ರತಿಭಟಿಸಿ (Cauvery Dispute) ಕನ್ನಡ ಪರ ಸಂಘಟನೆಗಳು (Kannada Organizations) ಕರೆ ನೀಡಿರುವ ಶುಕ್ರವಾರದ (ಸೆ. 29) ಕರ್ನಾಟಕ ಬಂದ್‌ (Karnataka Bandh) ವೇಳೆ ಯಾವುದೇ ಪ್ರತಿಭಟನಾ ರ‍್ಯಾಲಿ (No protest rallies), ಮೆರವಣಿಗೆ ನಡೆಸುವಂತಿಲ್ಲ (No procession) ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ Bangalore police Commissioner) ಬಿ ದಯಾನಂದ್ (B Dayanand) ಹೇಳಿದ್ದಾರೆ.

ಸೆಪ್ಟೆಂಬರ್‌ 26ರಂದು ನಡೆದ ಬೆಂಗಳೂರು ಬಂದ್‌ ವೇಳೆ ತೆಗೆದುಕೊಳ್ಳಲಾದ ಮಾದರಿಯಲ್ಲೇ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು, ಗುರುವಾರ (ಸೆ. 28) ಮಧ್ಯರಾತ್ರಿಯಿಂದಲೇ ಸಿಆರ್‌ಪಿಸಿ ಸೆಕ್ಷನ್‌ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು, ಅದು ಶುಕ್ರವಾರ ರಾತ್ರಿ 12 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಕಮಿಷನರ್‌ ಬಿ. ದಯಾನಂದ್‌ ಹೇಳಿದ್ದಾರೆ. ಇದು ಬೆಂಗಳೂರಿಗೆ ಸೀಮಿತವಾದ ಆದೇಶವಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಎಸ್‌ಪಿಗಳು ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಬಂದ್‌ನ್ನು ಶಾಂತಿಯುತವಾಗಿ ಆಚರಿಸಲು ಯಾವುದೇ ರೀತಿಯಲ್ಲಿ ಅಡ್ಡಿ ಇಲ್ಲ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸೆಕ್ಷನ್‌ 144ರ ಪ್ರಕಾರ, ಐದು ಜನಕ್ಕಿಂತ ಹೆಚ್ಚು ವ್ಯಕ್ತಿಗಳು ಒಂದು ಕಡೆಯಲ್ಲಿ ಗುಂಪುಗೂಡಬಾರದು. ಹಾಗೆ ಗುಂಪುಗೂಡಿದರೆ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಬಂದ್‌ನ ಸಂದರ್ಭದಲ್ಲಿ ಯಾವುದೇ ಮೆರವಣಿಗೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್‌ ಸೂಚನೆ ನೀಡಿದೆ. ಹೀಗಾಗಿ ಯಾವುದೇ ಮೆರವಣಿಗೆ, ರ‍್ಯಾಲಿಗಳಿಗೆ ಅವಕಾಶ ನೀಡಲಾಗುವುದಿಲ್ಲ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಸ್ಥಳ ನಿಗದಿ ಮಾಡಿದೆ. ಅಲ್ಲಿ ಬಂದ ಪ್ರತಿಭಟನೆ ನಡೆಸಬಹುದು ಎಂದು ಅವರು ಸ್ಪಷ್ಟಪಡಿಸಿದರು.

ಎಲ್ಲಾ ಸಂಘಟನೆಗಳಿಗೆ ನೋಟಿಸ್‌

ಬಂದ್‌ ಕರೆ ನೀಡಿರುವ ಮತ್ತು ಬೆಂಬಲ ನೀಡಿರುವ ಎಲ್ಲ ಸಂಘಟನೆಗಳಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಬಂದ್‌ ವೇಳೆ ನಡೆದುಕೊಳ್ಳಬೇಕಾದ ರೀತಿ ರಿವಾಜುಗಳನ್ನು ತಿಳಿಸಲಾಗಿದೆ.

ಬಂದ್‌ನ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸುವುದು, ವಾಹನಗಳನ್ನು ತಡೆಯುವುದು ಸೇರಿದಂತೆ ಬಲವಂತ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಬಂದ್‌ನ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದರೆ ಅದನ್ನು ಬಂದ್‌ ಸಂಘಟಕರೇ ಭರಿಸಬೇಕು ಎಂಬ ಸೂಚನೆಯನ್ನು ನೀಡಲಾಗಿದೆ ಎಂದು ಬಿ. ದಯಾನಂದ್‌ ಸ್ಪಷ್ಟಪಡಿಸಿದರು.

Bangalore police

ಬೆಂಗಳೂರಿನಲ್ಲಿ ಬಿಗಿ ಭದ್ರತೆ

ಬೆಂಗಳೂರು ನಗರದಲ್ಲಿ ಬಿಗಿ ಪೊಲೀಸ್ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಆರ್ ಪಿಎಫ್ ಪ್ಲಟೂನ್‌ಗಳಿವೆ, ಕೆಎಸ್‌ಆರ್‌ಪಿ ತುಕಡಿಗಳಿವೆ ಹಾಗು ಹಿರಿಯ ಅಧಿಕಾರಿಗಳೂ ಕೂಡ ಇರಲಿದ್ದಾರೆ. ಹೀಗಾಗಿ ಯಾರೇ ದುಷ್ಕರ್ಮಿ, ಕಿಡಿಗೇಡಿ ಕೃತ್ಯ ನಡೆಸಿದರೂ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ರಕ್ಷಣೆ

ಈಗಾಗಲೇ ಕೆಎಸ್ಆರ್ಟಿಸಿ ನಿಗಮದವರು ಬಸ್‌ ಓಡಾಟಕ್ಕೆ ರಕ್ಷಣೆ ಕೇಳಿದ್ದಾರೆ. ನಾವು ಬಸ್‌ ಓಡಿಸುತ್ತೇವೆ, ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದಾರೆ. ಬಿಎಂಟಿಸಿ ಬಸ್‌ಗಳಿಂದಲೂ ಕೋರಿಕೆ ಬಂದಿದೆ. ಅದು ನಮ್ಮ ಕರ್ತವ್ಯ., ನಾವು ರಕ್ಷಣೆ ಕೊಡುತ್ತೇವೆ ಎಂದು ಬಿ. ದಯಾನಂದ್‌ ಹೇಳಿದರು.

ಯಾವುದೇ ಸಂಘಟನೆಗಳು ರಾಜಕೀಯ ಪಕ್ಷಗಳು ಬಂದ್ ಗೆ ಅನುಮತಿ ಪಡೆದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸೆಕ್ಷನ್‌ ಹಾಕಿದರೆ ತೀವ್ರ ಪ್ರತಿಭಟನೆ ಎಂದಿದ್ದ ವಾಟಾಳ್‌

ಕಳೆದ ಸೆ. 26ರಂದು ನಡೆದ ಬೆಂಗಳೂರು ಬಂದ್‌ ಸಂದರ್ಭದಲ್ಲಿ ಸೆಕ್ಷನ್‌ 144ರಡಿ ನಿಷೇಧಾಜ್ಞೆ ವಿಧಿಸಿದ್ದರಿಂದ ಸಂಘಟನೆಗಳ ಕಾರ್ಯಕರ್ತರನ್ನು ತಕ್ಷಣಕ್ಕೆ ಬಂಧಿಸಲಾಗಿತ್ತು. ಮತ್ತು ಯಾವುದೇ ಮೆರವಣಿಗೆಗೂ ಅವಕಾಶ ನೀಡಲಾಗಿರಲಿಲ್ಲ. ಸೆ. 29ರ ಬಂದ್‌ ವೇಳೆ ಇದೇ ನೀತಿ ಮಾಡಿದರೆ ತೀವ್ರವಾಗಿ ಪ್ರತಿಭಟಿಸಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಹೇಳಿದ್ದರು.

ಶುಕ್ರವಾರದ ಬಂದ್‌ ವೇಳೆ ವಾಟಾಳ್‌ ನಾಗರಾಜ್‌ ತಂಡ ಬೃಹತ್‌ ರ‍್ಯಾಲಿಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಅದಕ್ಕೆ ನಿಷೇಧಾಜ್ಞೆ ಯಾವ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗಿದೆ.

ಪ್ರತಿಭಟನೆ ಹತ್ತಿಕ್ಕುವ ಕ್ರಮ ಎಂಬ ಆಕ್ರೋಶ

ಈ ನಡುವೆ ರಾಜ್ಯ ಸರ್ಕಾರ ನಿಷೇಧಾಜ್ಞೆಯ ಮೂಲಕ ಬಂದ್‌ನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂಬ ಆರೋಪವನ್ನು ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಆರೋಪಿಸಿವೆ. ಬಂದ್‌ನ ಮುನ್ನಾದಿನವೇ ಕೆಲವೊಂದು ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದನ್ನು ಪಕ್ಷಗಳು ಆಕ್ಷೇಪಿಸಿದ್ದವು. ಆದರೆ, ತಾವು ಬಂಧಿಸಿದ್ದು, ಈ ಹಿಂದಿನ ಬಂದ್‌ಗಳಲ್ಲಿ ಹಿಂಸಾಕೃತ್ಯಕ್ಕೆ ಇಳಿದ ಹಿನ್ನೆಲೆ ಇರುವವರನ್ನು ಎಂದು ಪೊಲೀಸ್‌ ಇಲಾಖೆ ಸಮರ್ಥನೆ ಮಾಡಿತ್ತು.

ಇದನ್ನೂ ಓದಿ: Karnataka Bandh : ನಾಳೆ ಬಂದ್‌ ಮಾಡಿದ್ರೆ ಹುಷಾರ್‌ ಎಂದ ಪರಮೇಶ್ವರ್; ಹೋರಾಟ ಹತ್ತಿಕ್ಕಲು ಮುಂದಾಯಿತಾ ಸರ್ಕಾರ?

ಶಾಂತಿಯುತ ಬಂದ್‌ ಮಾಡಿ, ಬಲವಂತ ಮಾಡಿದರೆ ಕ್ರಮ ಎಂದ ಗೃಹ ಸಚಿವ

ಇತ್ತ ಗೃಹ ಸಚಿವರಾಗಿರುವ ಪರಮೇಶ್ವರ್‌ ಅವರು ಶಾಂತಿಯುತ ಬಂದ್‌ಗೆ ಎಲ್ಲರೂ ಹಕ್ಕಿದೆ. ಆದರೆ ಜನರಿಗೆ ತೊಂದರೆ ಮಾಡಿದರೆ, ಬಲವಂತ ಮಾಡಿದರೆ, ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಸಹಿಸಲಾಗದು ಎಂದು ಹೇಳಿದ್ದಾರೆ.

Exit mobile version