Site icon Vistara News

Karnataka Bandh : ಬಂದ್‌ಗೆ ಹೋಟೆಲ್‌ಗಳ ಬೆಂಬಲ; ಎಲ್ಲೂ ಊಟ, ತಿಂಡಿ ಸಿಗಲ್ಲ; ಆನ್‌ಲೈನಲ್ಲಿ ಸಿಗುತ್ತಾ?

Hotel Bandh during Karnataka bandh

ಬೆಂಗಳೂರು: ವಾಟಾಳ್‌ ನಾಗರಾಜ್‌ (Vatal Nagaraj) ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ (Kannada Organizations) ಒಕ್ಕೂಟ ಕರೆ ನೀಡಿರುವ ಸೆ. 29ರ ಕರ್ನಾಟಕ ಬಂದ್‌ಗೆ (Karnataka Bandh) ಕರ್ನಾಟಕ ರಾಜ್ಯ ಹೋಟೆಲ್‌ಗಳ ಸಂಘ (Hotel Owners Association) ಬೆಂಬಲ ನೀಡಿದೆ. ಗುರುವಾರ ನಡೆದ ಸಂಘದ ಸಭೆಯಲ್ಲಿ ಕಾವೇರಿಗಾಗಿ ಬಂದ್‌ಗೆ ಬೆಂಬಲ ನೀಡಲು ನಿರ್ಧರಿಸಲಾಯಿತು ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ (Hotel owners Association president PC Rao) ತಿಳಿಸಿದರು.

ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೂ ಹೋಟೆಲ್ ಗಳು ಬಂದ್ ಆಗಿರುತ್ತವೆ. ಯಾವುದೇ ತಿಂಡಿ, ತಿನಿಸು, ಪಾನೀಯ, ಊಟಗಳು ಸಿಗುವುದಿಲ್ಲ ಎಂದು ಅವರು ತಿಳಿಸಿದರು. ನಾಳೆ ಹೋಟೆಲ್ ಬಂದ್ ಆಗುವುದರಿಂದ ಸ್ವಲ್ಪ ಜನರಿಗೆ ತೊಂದರೆ ಆಗುತ್ತದೆ. ಆದರೆ, ಕಾವೇರಿ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.

ಹಾಗಿದ್ದರೆ ಆನ್‌ಲೈನ್‌ ಮೂಲಕ ಫುಡ್‌ ಡೆಲಿವರಿ ಮಾಡಲಾಗುತ್ತದಾ ಎಂದು ಕೇಳಿದಾಗ, ಆನ್ ಲೈನ್‌ನಲ್ಲಿ ಫುಡ್ ಡೆಲಿವರಿ ಮಾಡುವುದು ಆಯಾ ಹೋಟೆಲ್ ಮಾಲೀಕರಿಗೆ ಬಿಟ್ಟ ವಿಚಾರ ಎಂದು ಅವರು ಸ್ಪಷ್ಟಪಡಿಸಿದರು. ಹೋಟೆಲ್‌ಗಳ ಸಂಘಟನೆಯ ಮೂಲಕ ಬಂದ್‌ಗೆ ಬೆಂಬಲ ನೀಡಲಾಗಿದೆ. ಹೀಗಾಗಿ ಯಾರೂ ಹೋಟೆಲ್‌ಗಳ ಮೇಲೆ ದಾಳಿ ಮಾಡಬಾರದು ಎಂದು ಮನವಿ ಮಾಡಿದರು.

ಕೋರ್ಟ್‌ ಕಲಾಪ ಬಹಿಷ್ಕರಿಸಿ ವಕೀಲರ ಬೆಂಬಲ

ರಾಜ್ಯ ವಕೀಲರ ಸಂಘ ಬಂದ್‌ಗೆ ಬೆಂಬಲ ನೀಡಿದೆ. ಶುಕ್ರವಾರ ಕೋರ್ಟ್ ಕಲಾಪ ಬಹಿಷ್ಕರಿಸಿ ಬಂದ್‌ನಲ್ಲಿ ಭಾಗಿ ಆಗಲು ನಿರ್ಧಾರ ಮಾಡಿರುವ ವಕೀಲರ ಸಂಘ, ನಾಳೆ ಕೋರ್ಟ್‌ಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಕೀಲರ ಗೈರು ಹಾಜರಿ ಎಂಬ ಕಾರಣವಾಗಿ ಕೇಸ್ ಗಳಲ್ಳಿ ವ್ಯತಿರಿಕ್ತ ಆದೇಶ ನೀಡದಂತೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲರ ಸಂಘ ಪತ್ರ ಬರೆದಿದೆ.

Karnataka bandh Auto

ನೈತಿಕ ಬೆಂಬಲ ನೀಡಿದ ರುಪ್ಸಾ ಸಂಘಟನೆ

ಖಾಸಗಿ ಶಾಲೆಗಳ ಒಕ್ಕೂಟವಾಗಿರುವ ರುಪ್ಸಾ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದೆ ಎಂದು ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಹೇಳಿದರು. ಆದರೆ, ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿ ರಜೆ ನಿರ್ಧಾರ ಮಾಡಲು ಸೂಚಿಸಲಾಗಿದೆ ಎಂದರು.

ಬಂದ್ ಗೆ ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ಕೊಟ್ಟಿದೆ. ಶಾಲೆಗೆ ರಜೆ ಕೊಡುವುದರ ಬಗ್ಗೆ ಅಯಾ ಜಿಲ್ಲೆಯ ಮುಖಂಡರು ಹಾಗೂ ಶಾಲಾ ಆಡಳಿತ ‌ಮಂಡಳಿ ನಿರ್ಧಾರ ಕೈಗೊಳ್ಳಲಿದೆ. ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಲೋಕೇಶ್‌ ತಾಳಿಕಟ್ಟೆ ಹೇಳಿದರು.

ಬಂದ್‌ಗೆ ಕ್ಯಾಮ್ಸ್‌ ಬೆಂಬಲ, ಸಾಲು ಸಾಲು ರಜೆಗೆ ಕಳವಳ

ಕರ್ನಾಟಕ ಬಂದ್‌ಗೆ ಖಾಸಗಿ ಶಿಕ್ಷಣ ‌ಸಂಸ್ಥೆಗಳ ಒಕ್ಕೂಟ -ಕಾಮ್ಸ್‌ ನೈತಿಕ‌ ಬೆಂಬಲ ನೀಡಿದೆ. ಮಕ್ಕಳ‌ ಹಿತದೃಷ್ಟಿಯಿಂದ ಶಾಲೆ‌ಗಳಿಗೆ ರಜೆ ಕೊಡಲು ಸರ್ಕಾರಕ್ಕೆ ಮನವಿ ಮಾಡಿರುವ ಕಾಮ್ಸ್ ಅಧ್ಯಕ್ಷ ಶಶಿಕುಮಾರ್ ಅವರು ಸ್ಥಳೀಯ ಪರಿಸ್ಥಿತಿಯನ್ನು ಅವಲೋಕಿಸಿ ರಜೆ ಘೋಷಣೆ ಮಾಡಲು ಮನವಿ ಮಾಡಿದ್ದಾರೆ.

ಒಂದೆಡೆ ಬಂದ್‌ಗೆ ನೈತಿಕ ಬೆಂಬಲ ಘೋಷಿಸುತ್ತಲೇ ಇನ್ನೊಂದೆಡೆ ಸಾಲು ಸಾಲು ರಜೆ ಬಗ್ಗೆ ಸಂಘಟನೆ ಕಳವಳ ವ್ಯಕ್ತಪಡಿಸಿದೆ. ಪರೀಕ್ಷಾ ಸಮಯದಲ್ಲೇ ಈ ರೀತಿಯ ಸಾಲು ಸಾಲು ರಜೆಯಿಂದ ಸಮಸ್ಯೆಯಾಗುತ್ತಿದೆ ಎಂದು ಅದು ಹೇಳಿದೆ.

ನಾಳೆ ಸಿಲಿಕಾನ್ ಸಿಟಿಯಲ್ಲಿ ಇರಲ್ಲ ಓಲಾ-ಊಬರ್ ಓಡಾಟ

Karnataka bandh Auto

ಕರ್ನಾಟಕ ಬಂದ್ ಗೆ ಓಲಾ-ಊಬರ್ ಯೂನಿಯನ್ ಬೆಂಬಲ ಘೋಷಿಸಿದೆ. ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಓಲಾ, ಊಬರ್ ಆಟೋಗಳಿದ್ದು, ಅವು ಕಾರ್ಯಾಚರಿಸುವುದಿಲ್ಲ ಎಂದು ಓಲಾ, ಊಬರ್ ಯೂನಿಯನ್‌ ಅಧ್ಯಕ್ಷ ತನ್ವೀರ್ ಪಾಷಾ ಹೇಳಿದ್ದಾರೆ.

ಓಲಾ, ಊಬರ್‌ ಆಪ್‌ಗಳು ಕಾರ್ಯಾಚರಿಸುತ್ತವೆ. ಅವುಗಳನ್ನು ಬಂದ್‌ ಮಾಡಲು ಆಗುವುದಿಲ್ಲ. ನಮ್ಮ ಚಾಲಕರು ಲಾಗ್‌ ಇನ್‌ ಆಗುವುದಿಲ್ಲ. ನಾಡು, ನುಡಿಯನ್ನು ಗೌರವಿಸುವವರು ಯಾರೂ ಲಾಗಿನ್‌ ಆಗುವುದಿಲ್ಲ ಎಂದು ತನ್ವೀರ್‌ ಪಾಷಾ ಹೇಳಿದರು. ಶುಕ್ರವಾರ ಒಂದು ದಿನ ಎಲ್ಲರೂ ಸಹಕರಿಸಿ ಎಂದು ತನ್ವೀರ್ ಪಾಷಾ ಮನವಿ ಮಾಡಿದರು.

Exit mobile version