Site icon Vistara News

Karnataka Bandh: ನಾಳೆ ಕರ್ನಾಟಕ ಬಂದ್‌, ಇಂದು ರಾತ್ರಿಯಿಂದಲೇ ಸೆಕ್ಷನ್ 144, ರ‍್ಯಾಲಿಗೆ ಅನುಮತಿ ನೀಡದ ಸರ್ಕಾರ

Sep 29 Bangalore Bandh

ಬೆಂಗಳೂರು: ಕಾವೇರಿ ನೀರಿನ ಅನ್ಯಾಯ ಖಂಡಿಸಿ (Cauvery protest) ಶುಕ್ರವಾರ (ಸೆ.29) ಘೋಷಿಸಲಾಗಿರುವ ಕರ್ನಾಟಕ ಬಂದ್‌ಗೆ (Karnataka Bandh) ಹಲವು ಸಂಘಟನೆಗಳ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ, ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು (ಗುರುವಾರ) ಮಧ್ಯರಾತ್ರಿಯಿಂದಲೇ ಸೆಕ್ಷನ್ 144 (Section 144) ಜಾರಿ ಮಾಡಲು ನಿರ್ಧರಿಸಲಾಗಿದೆ.

ಮಂಗಳವಾರದ ಬೆಂಗಳೂರು ಬಂದ್‌ (Bangalore bandh) ಬಹುತೇಕ ಯಶಸ್ವಿಯಾಗಿದ್ದರೂ, ಜನರ ಓಡಾಟಕ್ಕೆ ಧಕ್ಕೆಯಾಗಿರಲಿಲ್ಲ. ಆದರೆ ಸೆಕ್ಷನ್ 144 ಜಾರಿ ಮಾಡಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ, ರ‍್ಯಾಲಿ ನಡೆಸಲು ಸಾಧ್ಯವಾಗಿರಲಿಲ್ಲ. ನಾಳೆಯ ಬಂದ್ ವೇಳೆಯೂ ಪೊಲೀಸರು ಕಾನೂನು ಪ್ರಕಾರ ಹಲವು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಯಾವುದೇ ರೀತಿಯ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಬಹುತೇಕ ಅನುಮಾನವೆನಿಸಿದೆ. ನ್ಯಾಯಾಲಯದ ಅದೇಶ ಇರುವುದರಿಂದ ಪ್ರತಿಭಟನಾ ರ‍್ಯಾಲಿಗೆ ಅವಕಾಶ ಸಿಗುವುದು ಸಂದೇಹ. ಜೊತೆಗೆ ಸೆಕ್ಷನ್ 144 ಜಾರಿಯಾದರೆ 5ಕ್ಕಿಂತ ಹೆಚ್ಚು ಜನ‌ ಒಟ್ಟುಗೂಡಲು ಅವಕಾಶವಿಲ್ಲ.

ಇದಲ್ಲದೆ ಇಂದು ಮಧ್ಯರಾತ್ರಿಯಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. 2016ರ ಗಲಭೆಗಳಲ್ಲಿ ಭಾಗಿಯಾದವರನ್ನು ವಶಕ್ಕೆ ಪಡೆಯಲಿರುವ ಪೊಲೀಸರು, ಯಾವುದೇ ಗಲಭೆಗಳಾಗದಂತೆ ತಡೆಯಲು ಮುಂಜಾಗೃತೆ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಭದ್ರತೆಗಾಗಿ 15 ಸಾವಿರ ಪೊಲೀಸರ ನಿಯೋಜನೆಯಾಗಿದೆ. ಮಧ್ಯರಾತ್ರಿಯಿಂದಲೇ ಪೊಲೀಸ್ ಗಸ್ತು ಇರಲಿದೆ.

ಇದನ್ನೂ ಓದಿ: Karnataka Bandh : ಸೆ. 29ರ ಕರ್ನಾಟಕ ಬಂದ್‌ಗೆ ವಾಟಾಳ್‌ ಟೀಮ್‌ ರೆಡಿ; ಹಲವು ಸಂಘಟನೆ ಬಲ, ಏನಿರುತ್ತೆ? ಏನಿರಲ್ಲ?

ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಸುಮಾರು 1 ಸಾವಿರಕ್ಕೂ ಹೆಚ್ಚು ಸಂಘಟನೆಗಳು ಸಾಥ್ ನೀಡಲಿವೆ ಎಂದು ಹೇಳಲಾಗಿದ್ದು, ರಾಜ್ಯ- ರಾಜಧಾನಿಯಲ್ಲಿ ಕೆಲ ಸೇವೆಗಳು ವ್ಯತ್ಯಯವಾಗಲಿವೆ.
ಏನೆಲ್ಲ ಸೇವೆ ಇರುತ್ತದೆ?: ಆಸ್ಪತ್ರೆ, ಮೆಡಿಕಲ್, ಆಂಬುಲೆನ್ಸ್, ಬೆಂಬಲ ನೀಡದ ಒಕ್ಕೂಟದ ಆಟೋ, ಟ್ಯಾಕ್ಸಿ ಇರುತ್ತವೆ.
ಏನೆಲ್ಲ ಸೇವೆಗಳು ಇರುವುದಿಲ್ಲ?: ಹೋಟೆಲ್, ಸಿನಿಮಾ ಹಾಲ್, ಮಾಲ್, ಆಟೋ, ಕ್ಯಾಬ್, ಬೇಕರಿ, ಓಲಾ, ಊಬರ್ ಇರುವುದಿಲ್ಲ.

ಯಾವ ಕಾರಣಕ್ಕೂ ಸೆಪ್ಟೆಂಬರ್‌ 29ರ ಬಂದ್‌ ವೇಳೆ ಸೆಕ್ಷನ್‌ 144 ಜಾರಿ ಮೂಲಕ ಪ್ರತಿಭಟನೆ ಹತ್ತಿಕ್ಕಬಾರದು ಎಂದು ಆಗ್ರಹಿಸಿರುವ ವಾಟಾಳ್‌ ನಾಗರಾಜ್‌ ಅವರು ಶುಕ್ರವಾರ ಬೆಂಗಳೂರಿನ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ರ‍್ಯಾಲಿ ನಡೆಸಲು ಪ್ಲ್ಯಾನ್ ಮಾಡಿದ್ದಾರೆ. ರಾಜ್ಯದ ವಿವಿಧೆಡೆ ಟೋಲ್, ಏರ್ ಪೋರ್ಟ್ ಬಂದ್ ಮಾಡುವುದಕ್ಕೂ ಕರೆ ನೀಡಿದ್ದಾರೆ.‌

ಇದನ್ನೂ ಓದಿ: VISTARA TOP 10 NEWS : ಎಲ್ಲರ ಕಣ್ಣು ಶುಕ್ರವಾರದ ಕರ್ನಾಟಕ ಬಂದ್‌ನತ್ತ, ಇಸ್ರೋ ಚಿತ್ತ ಮಾತ್ರ ಶುಕ್ರನತ್ತ!

Exit mobile version