ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಕನ್ನಡ ಸಂಘಟನೆಗಳು ನೀಡಿರುವ ಬಂದ್‌ಗೆ (Karnataka Bandh) ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕನ್ನಡ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ರಸ್ತೆ ತಡೆ ನಡೆಸಿ, ರಾಜಕೀಯ ನಾಯಕರ ಪ್ರತಿಕೃತಿ ದಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಸ್ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಜನ ಪರದಾಡುವಂತಾಗಿದೆ. ಆದರೆ, ಚಾಮರಾಜನಗರ ಹಾಗೂ ಧಾರವಾಡದಲ್ಲಿ ವೃದ್ಧರು, ರೋಗಿಗಳು ಆಸ್ಪತ್ರೆಗೆ ತೆರಳಲು ಅವಕಾಶ ಮಾಡಿಕೊಡುವ ಮೂಲಕ ಪ್ರತಿಭಟನಕಾರಾರರು ಮಾನವೀಯೆ ಮೆರೆದಿದ್ದಾರೆ.
ರೋಗಿ ಇದ್ದಾರೆ ಎಂದ ತಕ್ಷಣ ಬಸ್ ಬಿಟ್ಟ ಹೋರಾಟಗಾರ
ಧಾರವಾಡದ ಜುಬಲಿ ವೃತ್ತದಲ್ಲಿ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದ ಹೋರಾಗಾರರೊಬ್ಬರು, ಬಸ್‌ನಲ್ಲಿ ರೋಗಿ ಇದ್ದಾರೆ ಎಂಬುದನ್ನು ತಿಳಿದ ತಕ್ಷಣ ಬಸ್ ಬಿಟ್ಟಿದ್ದಾರೆ. ಕರ್ನಾಟಕ ಬಂದ್‌ಗೆ ಕರೆ ನೀಡಿದರೂ ಬಸ್ ಓಡಾಟ ಇರುವುದನ್ನು ಕಂಡ ಹೋರಾಟಗಾರ, ಅದನ್ನು ತಡೆದರು. ಬಸ್ ಹೋಗಲು ಬಿಡುವುದಿಲ್ಲ, ಹೋರಾಟಗಾರರನ್ನು ಕರೆಯುತ್ತೇನೆ ಎಂದು ಪಟ್ಟು ಹಿಡಿದರು. ಪೊಲೀಸರು ಎಷ್ಟು ಮನವೊಲಿಸಿದರೂ ಹೋರಾಟಗಾರ ಕೇಳಲಿಲ್ಲ. ಆದರೆ, ಬಸ್‌ನಲ್ಲಿದ್ದ ವೃದ್ಧೆಯೊಬ್ಬರು ಕೆಳಗಿಳಿದು, ಬಸ್‌ನಲ್ಲಿ ರೋಗಿ ಇದ್ದಾರೆ. ಅವರಿಗೆ ಚಿಕಿತ್ಸೆ ಕೊಡಿಸಬೇಕು ಎಂದು ಹೇಳಿದರು. ಇದಾದ ಬಳಿಕ ಬಸ್ ತೆರಳಲು ಪ್ರತಿಭಟನಾಕಾರ ಬಿಟ್ಟರು.
ಆಟೋ ಚಾರ್ಜ್ ಕೊಡಲು ಮುಂದಾದ ಪ್ರತಿಭಟನಾಕಾರರು
ಚಾಮರಾಜನಗರದಲ್ಲಿ ವೃದ್ಧರೊಬ್ಬರು ಮೆಡಿಕಲ್ ಶಾಪ್‌ಗೆ ತೆರಳಿ, ಔಷಧ ಖರೀದಿಸಿ ವಾಪಸ್ ಸಿಮ್ಸ್ ಆಸ್ಪತ್ರೆಗೆ ತೆರಳಲು ಪ್ರತಿಭಟನಾಕಾರರು ಅನುಕೂಲ ಮಾಡಿಕೊಟ್ಟಿದ್ದಾರೆ. ಸಿಮ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ಆಗಿರುವ ಪೇಷಂಟ್ ಇದ್ದಾರೆ. ಅವರಿಗೆ ಔಷಧ ಕೊಡಬೇಕು, ಬಸ್ ಬಿಡಿ ಎಂದು ಹನೂರು ತಾಲೂಕಿನ ಮಾದೇಗೌಡ ಎಂಬುವರು ಮನವಿ ಮಾಡಿದ್ದಾರೆ. ಆಗ, ಬಸ್ ಇಲ್ಲ, ಆಟೋದಲ್ಲಿ ತೆರಳಿ ಎಂದು ಕನ್ನಡ ಹೋರಾಟಗಾರರು ಸೂಚಿಸಿದ್ದಾರೆ. ಅಲ್ಲದೆ, 100 ರೂ. ಕೊಡಲು ಕೂಡ ಮುಂದಾಗಿದ್ದಾರೆ. ಆಗ, ಮಾದೇಗೌಡರು, ನನಗೆ ಹಣ ಬೇಡ, ಹೋಗಲು ಬಿಟ್ಟರೆ ಸಾಕು ಎಂದಿದ್ದಾರೆ. ಬಳಿಕ ಅವರು ಆಟೋದಲ್ಲಿ ಹೋಗಲು ಹೋರಾಟಗಾರರು ಬಿಟ್ಟಿದ್ದಾರೆ.
ಇದನ್ನೂ ಓದಿ: Karnataka Bandh: ಸಿಎಂ ಪ್ರತಿಕೃತಿ ದಹನ, ಬಿಸ್ಲೇರಿ ನೀರಲ್ಲೇ ಸ್ನಾನ, ಸಂಸದರ ಫೋಟೊಗಳಿಗೆ ಪಿಂಡ ಪ್ರದಾನ!
ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಹಲವೆಡೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಪ್ರತಿಕೃತಿ ದಹನ ಮಾಡಲಾಗಿದೆ. ಹಾಗೆಯೇ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರವೇ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಮತ್ತೊಂದೆಡೆ, ಯಾದಗಿರಿಯಲ್ಲಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಯತ್ನವೂ ನಡೆದಿದೆ. ಪ್ರಾಣ ಕೊಟ್ಟೇವು, ಕಾವೇರಿ ನದಿ ನೀರು ಬಿಡೆವು ಎಂಬ ಘೋಷಣೆಗಳೊಂದಿಗೆ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಪ್ರತಿಭಟನಾನಿರತರ ಮೇಲೆ ಖಾಕಿ ಪ್ರಹಾರ ಕೂಡ ಹೆಚ್ಚಾಗಿದ್ದು, ಧರಣಿನಿರತರನ್ನು ಬಂಧಿಸುತ್ತಿದ್ದಾರೆ.