ಬೆಂಗಳೂರು: ಮುಸ್ಲಿಂ ಸಮುದಾಯದ ಶೇ.4 ಮೀಸಲಾತಿಯನ್ನು ಬದಲಾಯಿಸುವುದರಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿಲ್ಲ, ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ನಮ್ಮ ಮುಖ್ಯಮಂತ್ರಿಯವರು ಲಿಂಗಾಯತಿಗೆ ಶೇ.7, ಒಕ್ಕಲಿಗರಿಗೆ ಶೇ.6 ಸೇರಿ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಮಾಡಿದ್ದಾರೆ. ನಾನು ಅಧಿಕಾರದಲ್ಲಿದ್ದ ಕಾಲದಲ್ಲಿ ಲಂಬಾಣಿ ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿದ್ದು, ಭೂರಹಿತ ದಲಿತ ಸಮುದಾಯಕ್ಕೆ ಭೂಮಿ ವಿತರಣೆ ಮಾಡಿದ್ದೆ. ನಾನು ಕೊಟ್ಟಂತಹ ಭಾಗ್ಯಲಕ್ಷ್ಮಿ ಯೋಜನೆ ಅತ್ಯಂತ ಸಂತಸ ತಂದಿತ್ತು. ಇನ್ನು ಏಳೆಂಟು ತಿಂಗಳಲ್ಲಿ ಈ ಯೋಜನೆಯಲ್ಲಿ ಹಣ ಲಭಿಸುವುದು ಆರಂಭವಾಗುತ್ತದೆ. ಉಚಿತ ಸೈಕಲ್ ವಿತರಣೆ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದ್ದೇವೆ.
ಮುಸ್ಲಿಂ ಬಾಂಧವರಿಗೆ ನಾವು ಅನ್ಯಾಯ ಮಾಡಿಲ್ಲ. ಅವರನ್ನು ಇಡಬ್ಲ್ಯುಎಸ್ ಅಡಿ ತರಲಾಗಿದೆ. ತಪ್ಪು ಭಾವನೆ ಬೇಡ. ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಸಾಧ್ಯವಿಲ್ಲವಾದ್ಧರಿಂದ ಈ ವಿಭಾಗದಲ್ಲಿ ತರಲಾಗಿದೆ. ಕೇಂದ್ರ ಸರ್ಕಾರ ಬಡವರ, ರೈತರ ಪರ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅಸಮಾಧಾನವಾಗಿದ್ದರೆ ಅವರ ಮನವೊಲಿಸುತ್ತೇವೆ ಎಂದರು.
ಈ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚನೆ ಮಾಡುವವರಿದ್ದೇವೆ. ಬಹುಶಃ ಬಿಜೆಪಿಗೆ ಮಾತ್ರವೇ ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ನಾಯಕರಿದ್ದಾರೆ. ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಆದ ಕಾರ್ಯಕ್ರಮಕ್ಕೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಜಯ ಸಂಕಲ್ಪ ಯಾತ್ರೆ ಮಾಡಿದಾಗ ಆ ರೋಡ್ ಶೋ ಸಾರ್ವಜನಿಕ ಸಭೆಗಳಲ್ಲಿ ಜನ ಸೇರಿರುವುದನ್ನು ನೋಡಿದಾಗ ಜನ ಮೋದಿ ಪರ ಇರುವುದು ಸ್ಪಷ್ಟವಾಗಿ ಕಾಣುತ್ತಿದೆ.
ನಮ್ಮೆಲ್ಲ ಸಂಸತ್ ಸದಸ್ಯರು, ರಾಜ್ಯಸಭಾ ಸದಸ್ಯರು ಚುನಾವಣೆ ಮುಗಿಯುವವರೆಗೂ ಅವರವರ ಜಿಲ್ಲೆಗಳಲ್ಲಿದ್ದು ಹೆಚ್ಚು ಸಂಖ್ಯೆಯಲ್ಲಿ ಬಿಜೆಪಿ ಗೆದ್ದು ಸ್ಪಷ್ಟ ಬಹುಮತ ಪಡೆಯಲು ಕೆಲಸ ಮಾಡಬೇಕಾಗುತ್ತದೆ. ಸಂಸತ್ ಸದಸ್ಯರ ಸಭೆಯನ್ನು ಅಮಿತ್ ಶಾ ಕರೆಯಲಿದ್ದಾರೆ. ಅವರೆಲ್ಲರನ್ನೂ ಚುನಾವಣೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತದೆ.
ಚುನಾವಣೆ ಘೋಷಣೆಯಾಗಿದ್ದು, ಸದ್ಯದಲ್ಲೆ ಅಭ್ಯರ್ಥಿಗಳನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಚುನಾವಣೆ ಮುಗಿಯುವವರೆಗೆ ನಾನು, ಸಂಸತ್ ಸದಸ್ಯರು ಪ್ರವಾಸ ಮಾಡುತ್ತೇವೆ. ಲೋಕಸಭೆಯಲ್ಲಿ 25 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಅದು ಸುಳ್ಳಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನ ನೀಡಿರುವ ಬೆಂಬಲ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜನರ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿದೆ. ವಿಜಯ ಸಂಕಲ್ಪ ಯಾತ್ರೆಯ ಮೂಲಕ ನಾಲ್ಕು ತಂಡಗಳಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಗಾಳಿ ಬೀಸುವಂತೆ ಜನ ಸೇರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಾಯಕರಾರು? ಪ್ರಧಾನಿ ನರೇಂದ್ರ ಮೋದಿ ಎದುರು ರಾಹುಲ್ ಗಾಂಧಿ ಸಮನಾಗಲು ಸಾಧ್ಯವೇ? ನಾವೇ ಸಿಎಂ ಎಂದು ಕಾಂಗ್ರೆಸ್‌ನವರು ತಿರುಕನ ಕನಸು ಕಾಣುತ್ತಿದ್ದಾರೆ. 60-70ಕ್ಕಿಂತ ಕಾಂಗ್ರೆಸ್ ಗೆಲ್ಲುವುದಿಲ್ಲ. ನಾವು ರಾಜ್ಯಾದ್ಯಂತ ಪ್ರವಾಸ ಮಾಡಲು ಆರಂಭಿಸಿದರೆ ಅದು ಎಲ್ಲರಿಗೂ ಮನವರಿಕೆ ಆಗುತ್ತದೆ. ಇನ್ನೂ ಅನೇಕ ಬಾರಿ ಅಮಿತ್ ಶಾ, ಮೋದಿ ಆಗಮಿಸಲಿದ್ದಾರೆ. ಎಲ್ಲ ಕಡೆ ಜನ ಬೆಂಬಲ ಸಿಗುತ್ತಿದೆ. ಅಭಿವೃದ್ಧಿ ಮಾಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ, ಇದನ್ನು ಜನರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಬೇಕಾಗಿದೆ.
ಕೆಲ ಮಾಧ್ಯಮಗಳಲ್ಲಿ ಸಮೀಕ್ಷೆ ನೋಡಿದ್ದೇನೆ. ನಾನು ಐವತ್ತು ವರ್ಷದಿಂಧ ರಾಜಕಾರಣದಲ್ಲಿದ್ದೇನೆ. ಜನರ ನಾಡಿ ಮಿಡಿತ ಏನು ಎಂದು ನನಗೆ ಗೊತ್ತಿದೆ. ಬಿಜೆಪಿಯು ಸ್ಪಷ್ಟ ಬಹುಮತದೊಂದಿಗೆ, ಮೋದಿ ಅವರ ನಾಯಕತ್ವದಲ್ಲಿ ಅಧಿಕಾರಕ್ಕೆ ಬರಲಿದೆ. ನಾವು ಮೂರು ಸರ್ವೇ ಮಾಡಿಸಿದ್ದೇವೆ, 130-140 ಸ್ಥಾನ ಗೆಲ್ಲುತ್ತೇವೆ ಎಂಬ ಮಾಹಿತಿ ಇದೆ. ನಾವು ಅಧಿಕಾರಕ್ಕೆ ಬರುತ್ತೇವೆ. ಶೋಭಾ ಕರಂದ್ಲಾಜೆ ಅವರು ಆಫೀಸ್‌ನಲ್ಲೇ ಇದ್ದು ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.