ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು 2018ರ ಚುನಾವಣೆಯಲ್ಲಿ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಟ್ಟಿಹಾಕಿದಂತೆಯೇ ಈ ಬಾರಿ ವರುಣಾದಲ್ಲಿ ದಿಗ್ಬಂಧನಕ್ಕೆ ಬಿಜೆಪಿ ಮುಂದಾಗಿದೆ. ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ವರುಣಾದಲ್ಲಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಗೆಲುವುದು ಅಷ್ಟು ಸುಲಭವಿಲ್ಲ. ಅವರು ನಿಂತ ನೆಲವೇ ಕುಸಿಯುತ್ತಿದೆ. ಈ ಬಾರಿ ಅವರ ವಿರುದ್ಧ ಸರಿಯಾದ ಅಭ್ಯರ್ಥಿ ಹಾಕುತ್ತೇವೆ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಭೀಷ್ಮ, ಸಿಎಂ ಬಸವರಾಜ ಬೊಮ್ಮಾಯಿ ಶಕುನಿ ಎಂಬ ಕಾಂಗ್ರೆಸ್ ಟೀಕೆಯ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಮ್ಮ ಪಕ್ಷದಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ, ಬೊಮ್ಮಾಯಿ ನಾಯಕತ್ವದಲ್ಲಿ ಒಳ್ಳೆಯ ಕೆಲಸ ಆಗುತ್ತಿದೆ. ಕಾಂಗ್ರೆಸ್‌ನವರದ್ದು ಬೇಜವಾಬ್ದಾರಿ ಮಾತು ಎಂದರು.
ಬಂಜಾರ ಸಮುದಾಯವು ಶಿಕಾರಿಪುರದಲ್ಲಿ ಪ್ರತಿಭಟನೆ ನಡೆಸಿದ್ದರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕೆಲವು ತಪ್ಪು ತಿಳುವಳಿಕೆಯಿಂದಾಗಿ ಕೆಲವೆಡೆ ಅಸಮಾಧಾನ ಆಗಿದೆ. ನಾವು ಅವರನ್ನು ಒಪ್ಪಿಸುತ್ತೇವೆ. ಕಾಂಗ್ರೆಸ್‌ನವರು ಮೀಸಲಾತಿ ವಾಪಸ್ ಪಡೆಯುತ್ತೇವೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ಶಿವಕುಮಾರ್, ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿ ಎಲ್ಲಿರಬೇಕು ಎಂದು ತೀರ್ಮಾನ ಮಾಡಲಿ ಎಂದರು.
ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಡಿ ಎಂಬ ಆರೋಪದ ಕುರಿತು ಆರೋಪ ಮಾಡುತ್ತಿದ್ದಾರೆ ಎಂಬ ಕುರಿತು, ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆಯಿರುವ ಪಕ್ಷಕ್ಕೆ ಈ ರೀತಿ ಬೇಡಿಕೆ ಇರುತ್ತದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸೀಟು ಸಿಗುವುದಿಲ್ಲ ಎಂದು ಸ್ಪಷ್ಟ ಆದವರು ಬೇರೆ ಪಕ್ಷಕ್ಕೆ ಹೋಗಿರಬಹುದು. ಉಳಿದಂತೆ ಯಾರೂ ಹೋಗುವುದಿಲ್ಲ. ಅವರಿಗೆ ಮುಂದೆಯೂ ಸ್ಥಾನಮಾನ ಸಿಗುವುದರಿಂದ ಯಾರೂ ಹೋಗುವುದಿಲ್ಲ ಎಂದರು.
ಇದನ್ನೂ ಓದಿ: Karnataka BJP: ಮುಸ್ಲಿಂ ಬಾಂಧವರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ: ಮನವೊಲಿಸುತ್ತೇವೆ ಎಂದ ಬಿ.ಎಸ್. ಯಡಿಯೂರಪ್ಪ
ಟಿಕೆಟ್ ವಿಚಾರದಲ್ಲಿ ನಾನು ಯಾವುದೇ ತೀರ್ಮಾನ ಮಾಡುವುದಿಲ್ಲ. ಕೇಂದ್ರದ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಅವರ ಮಾತಿಗೆ ನಾವು ಬದ್ಧವಾಗಿರುತ್ತೇವೆ. ಅಮಿತ್ ಶಾ ಅವರ ಜತೆಗೆ ಚರ್ಚೆ ಮಾಡುತ್ತೇವೆ. ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎನ್ನುವುದಕ್ಕೆ ಕೇಂದ್ರ ನಿರ್ಧಾರ ಮಾಡುತ್ತದೆ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಅವಮಾನ ಮಾಡಲಾಗಿದೆ ಎಂಬ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿದ ಯಡಿಯೂರಪ್ಪ, ವೀರಶೈವ ಬಂಧುಗಳಲ್ಲಿ ವಿನಂತಿ ಮಾಡುತ್ತೇನೆ. ಯಡಿಯೂರಪ್ಪಗೆ ಯಾವುದೇ ಅನ್ಯಾಯ ಆಗಿಲ್ಲ. ಸಿಎಂ, ಸಚಿವನನ್ನಾಗಿ ಮಾಡಿ ಈಗ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಸ್ಥಾನ ನೀಡಿದ್ದಾರೆ. ಯಾವುದೇ ಅನ್ಯಾಯ ಆಗಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ ಎಂದರು.