ಬೆಂಗಳೂರು: ಒಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ, ಡಿಸಿಎಂ ಗೊಂದಲ ಮುಗಿದು ಇದೀಗ ಪ್ರಮಾಣವಚನ ಹಂತಕ್ಕೆ ಬಂದಿದ್ದರೆ ಇತ್ತ ಬಿಜೆಪಿಯಲ್ಲಿ ಬದಲಾವಣೆಯ ಮಾತುಗಳು ಜೋರಾಗಿವೆ. ಮುಖ್ಯವಾಗಿ ವಿಧಾನಸಭೆಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಬೇಕಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆಯೂ ನಡೆಯುತ್ತಿದೆ.
66 ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದೀಗ ವಿಧಾನಸಭೆಯಲ್ಲಿ ಹಾಗೂ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಬೇಕಾಗಿದೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಬಲ್ಲವರಾಗಿದ್ದ ಅನೇಕರು ಸೋತು ಹೋಗಿದ್ದಾರೆ. ಇದೀಗ ಇರುವವರ ನಡುವೆಯೇ ಯಾರನ್ನಾದರೂ ಆಯ್ಕೆ ಮಾಡಬೇಕಾಗಿದೆ.
ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇರುವುದರಿಂದ ಅವರನ್ನು ಎದುರಿಸಲು ಹಾಗೂ ಸೂಕ್ತ ಪ್ರಶ್ನೆ ಕೇಳಲು, ತರಾಟೆಗೆ ತೆಗೆದುಕೊಳ್ಳಲು ಅನುಭವಿಯ ಅಗತ್ಯವಿದೆ. ಈ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಬಿಜೆಪಿಯ ವಲಯದಲ್ಲೂ ಈ ಸ್ಥಾನಕ್ಕೆ ಹೆಚ್ಚಿನ ಸ್ಪರ್ಧೆ ಇರುವಂತೆ ಕಾಣುತ್ತಿಲ್ಲ. ಜತೆಗೆ ಇತ್ತೀಚೆಗೆ ಆರ್‌ಎಸ್‌ಎಸ್ ಮುಖಂಡರನ್ನೂ ಬೊಮ್ಮಾಯಿ ಭೇಟಿಯಾಗಿಬಂದಿದ್ದು, ಅಲ್ಲಿಂದಲೂ ಹಸಿರುನಿಶಾನೆ ಸಿಕ್ಕಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ರಾಜ್ಯ ಅಧ್ಯಕ್ಷರು ಯಾರು?
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವಧಿ ಈಗಾಗಲೆ ಮುಕ್ತಾಯವಾಗಿದೆ. ಎರಡನೇ ಅವಧಿಗೆ ಅವರನ್ನೇ ಮುಂದುವರಿಸಲು ತಾಂತ್ರಿಕವಾಗಿ ಅವಕಾಶ ಇದೆಯಾದರೂ, ಆಗಿರುವ ಸೋಲು ಹಾಗೂ ಅಸಾಮರ್ಥ್ಯವನ್ನು ಗಮನದಲ್ಲರಿಸಿಕೊಂಡು ಅವರ ರಾಜೀನಾಮೆ ಪಡೆಯುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ. ಅವರು ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ.
ಸಿ.ಟಿ. ರವಿ:
ಮಾಜಿ ಸಚಿವ, ಮಾಜಿ ಶಾಸಕ ಹಾಗೂ ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೆಸರು ಚಾಲ್ತಿಯಲ್ಲಿದೆ. ಈಗ ರಾಜ್ಯ ಬಿಜೆಪಿ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿದೆ. ಬಿಜೆಪಿ ನಾಯಕರು ಹಿಂದು ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರನ್ನು ಕಡೆಗಣಿಸಿದರು ಎಂಬ ಸಿಟ್ಟಿದೆ. ಪುತ್ತೂರಿನಲ್ಲಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಪರ ಕಾರ್ಯಕರ್ತರನ್ನು ಹಿಗ್ಗಾಮುಗ್ಗ ಪೊಲೀಸರು ಥಳಿಸಿರುವ ಘಟನೆ ಒಟ್ಟಾರೆ ಆಕ್ರೋಶಕ್ಕೆ ತುಪ್ಪ ಸುರಿದಿದೆ. ಈ ಹಿನ್ನೆಲೆಯಲ್ಲಿ, ಕಾರ್ಯಕರ್ತರ ಪರವಾಗಿ ಮಾತನಾಡುವ ಹಿಂದುತ್ವ ವ್ಯಕ್ತಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಯುವ ಮುಖ ಎನ್ನುವುದೂ ಸಿ.ಟಿ. ರವಿಗೆ ಪ್ಲಸ್ ಆಗಲಿದೆ.
ಶೋಭಾ ಕರಂದ್ಲಾಜೆ:
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ಚಾಲ್ತಿಯಲ್ಲಿದೆ. ಆಡಳಿತಾತ್ಮಕವಾಗಿ ಹಾಗೂ ಸಂಘಟನಾತ್ಮಕವಾಗಿ ಶೋಭಾ ಅವರ ಹೆಸರು ಒಪ್ಪಿತವಾಗಬಹುದು ಎನ್ನಲಾಗಿದೆ. ಆದರೆ ಬಿಜೆಪಿಯಲ್ಲಿರುವ ಕೆಲವರು ಶೋಭಾ ಅವರ ಆಯ್ಕೆಯನ್ನು ವಿರೋಧಿಸುವ ಸಾಧ್ಯತೆಯಿದೆ. ಆದರೆ ಹಿಂದುತ್ವ ವಿಚಾರದಲ್ಲಿ ಮುನ್ನುಗ್ಗುತ್ತಾರೆ ಎನ್ನುವುದು ಪ್ಲಸ್ ಆಗಲಿದೆ.
ಬಸನಗೌಡ ಪಾಟೀಲ್ ಯತ್ನಾಳ್:
ಪ್ರಖರ ಹಿಂದುತ್ವಪ್ರತಿಪಾದಕ ಎಂದೇ ಖ್ಯಾತಿ ಪಡೆದ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಲ್ಲಿದೆ. ಅದರಲ್ಲೂ ಇತ್ತೀಚೆಗೆ ಪುತ್ತೂರಿನಲ್ಲಿ ಕಾರ್ಯಕರ್ತರಗೆ ಪೊಲೀಸರು ಹಿಗ್ಗಾಮುಗ್ಗ ಹೊಡೆದ ನಂತರ ಈ ಹೆಸರು ಹೆಚ್ಚು ಓಡಾಡುತ್ತಿದೆ. ಪುತ್ತೂರಿಗೆ ತೆರಳಿ ಗಾಯಾಳುಗಳನ್ನು ನೋಡಿ ಸಾಂತ್ವನ ಹೇಳಿ ಬಂದಿದ್ದಾರೆ ಯತ್ನಾಳ್. ಹಾಗೆಯೇ ಈ ವಿಚಾರದಲ್ಲಿ ಬಿಜೆಪಿ ನಾಯಕರ ತಪ್ಪಿದೆ ಎಂದು ಹೇಳಿರುವುದು ಅನೇಕರಿಗೆ ಮೆಚ್ಚುಗೆಯಾಗಿದೆ. ಇವರನ್ನು ನಿಯಂತ್ರಿಸುವುದು ಕಷ್ಟ ಎನ್ನುವ ಅಪಾದನೆ ಮಾತ್ರ ಇದೆ.
ವಿ. ಸುನಿಲ್ ಕುಮಾರ್:
ಬೊಮ್ಮಾಯಿ ಸರ್ಕಾರದಲ್ಲಿ ಪವರ್‌ಫುಲ್ ಇಂಧನ ಖಾತೆಯನ್ನು ನಿಭಾಯಿಸಿದ ವಿ. ಸುನಿಲ್ ಕುಮಾರ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಹಿಂದುತ್ವ ಕಾರ್ಯಕರ್ತ ಎಂದೇ ಗುರುತಿಸಿಕೊಂಡಿರುವ ಸುನಿಲ್ ಕುಮಾರ್, ಸಂಘ ಪರಿವಾರದ ಜತೆಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ ಇತ್ತೀಚೆಗೆ ತಮ್ಮ ಕ್ಷೇತ್ರದಲ್ಲಿ ಜನಪ್ರಿಯತೆ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಪ್ರಮೋದ್ ಮುತಾಲಿಕ್ ಎದುರು ಕೇವಲ 4 ಸಾವಿರ ಮತಗಳ ಅಂತರದಲ್ಲಿ ಗೆದ್ದುಬಂದಿದ್ದಾರೆ. ಈ ಹಿಂದೆ ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಣೆ ಮಾಡಿದ್ದಾರೆ.
ಎನ್. ರವಿಕುಮಾರ್:
ಎಬಿವಿಪಿ ಹಿನ್ನೆಲೆ ಹೊಂದಿರುವ ಎನ್. ರವಿಕುಮಾರ್ ಬಿಜೆಪಿ ಸಂಘಟನೆಯಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯಾದ್ಯಂತ ಸಂಚಾರ ಮಾಡಿದ್ದಾರೆ. ವಿಧಾನ ಪರಿಷತ್‌ನಲ್ಲೂ ಪ್ರತಿಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ, ಪ್ರಶ್ನೆ ಕೇಳುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಡಾ. ಸಿ.ಎನ್. ಅಶ್ವತ್ಥನಾರಾಯಣ:
ಮಲ್ಲೇಶ್ವರ ಶಾಸಕರಾಗಿ, ಐಟಿಬಿಟಿ, ಉನ್ನತ ಶಿಕ್ಷಣ ಸಚಿವರಾಗಿ ಅನುಭವ ಹೊಂದಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವವರು. ಐಟಿಬಿಟಿ ಸಚಿವರಾಗಿ ಅನೇಕ ಶೃಂಗಸಭೆಗಳನ್ನು ಆಯೋಜಿಸಿ, ಉನ್ನತ ಶಿಕ್ಷಣ ಸಚಿವರಾಗಿ ದೇಶದಲ್ಲೆ ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಕಾರಣರಾದವರು ಎಂಬ ಮಾತಿದೆ. ಇದೆಲ್ಲದರ ನಡುವೆ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ, ರಾಮನಗರ-ಮಂಡ್ಯದಲ್ಲಿ ಡಿ.ಕೆ. ಸಹೋದರರು, ಎಚ್.ಡಿ. ಕುಮಾರಸ್ವಾಮಿ ಅವರನ್ನು ಎದುರು ಹಾಕಿಕೊಂಡು ಬಿಜೆಪಿಯ ಬೇರುಗಳನ್ನು ಬಲಪಡಿಸಲು ಪ್ರಯತ್ನಿಸಿದ್ದಾರೆ.
ಅರವಿಂದ ಬೆಲ್ಲದ್:
ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರವನ್ನು ಪ್ರತಿನಿಧೀಸುವ ಶಾಸಕ, ಯುವ ಉದ್ಯಮಿ. ಉತ್ತಮ ಆಡಳಿತಗಾರ ಎಂದೂ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅಚ್ಚರಿಯ ಅಭ್ಯರ್ಥಿಯಾಗಿ ಅರವಿಂದ ಬೆಲ್ಲದ್ ಸಿಎಂ ಆಗಬಹುದು ಎಂದು ಚರ್ಚೆ ನಡೆದಿತ್ತು. ಬೆಲ್ಲದ್ ಸಹ ನವದೆಹಲಿಯಲ್ಲಿ ಕಾಣಿಸಿಕೊಂಡು ಚರ್ಚೆಗೆ ಪುಷ್ಠಿ ನೀಡಿದ್ದರು.
ಬಿ.ವೈ. ವಿಜಯೇಂದ್ರ:
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಚ್ಚರಿಯೆಂಬಂತೆ ಚಾಲ್ತಿಯಲ್ಲಿರುವುದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಹಾಗೂ ನೂತನ ಶಾಸಕ ಬಿ.ವೈ. ವಿಜಯೇಂದ್ರ ಅವರದ್ದು. ಈ ಹಿಂದೆ ಯುವ ಮೋರ್ಚಾ ಉಪಾಧ್ಯಕ್ಷರಾಗಿ, ಈ ಚುನಾವಣೆಯಲ್ಲಿ ಮೋರ್ಚಾ ಸಮಾವೇಶಗಳ ಹೊಣೆಯನ್ನು ನಿರ್ವಹಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾರೆ ಕೆಲವು ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದ ಕ್ರೆಡಿಟ್ ಇದೆ. ಬಿ.ಎಸ್. ಯಡಿಯೂರಪ್ಪ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಕೊರಗು ವೀರಶೈವ ಲಿಂಗಾಯತ ವಲಯದಲ್ಲಿದ್ದು, ವಿಜಯೇಂದ್ರ ಅವರನ್ನು ಅಧ್ಯಕ್ಷ ಮಾಡಿದರೆ ಅದು ಶಮನವಾಗುತ್ತದೆ ಎಂಬ ಮಾತಿದೆ.
ಜಾತಿವಾರು ಲೆಕ್ಕ ಬಂದರೆ?
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಾಗ ಕೇವಲ ಕಾರ್ಯಕರ್ತ, ನಾಯಕತ್ವ ಗುಣವಷ್ಟೆ ಮುಖ್ಯ ಆಗುವುದಿಲ್ಲ. ಜಾತಿ ಲೆಕ್ಕಾಚಾರವೂ ನಡೆಯಲಿದೆ. ವಿಧಾನಸಭೆ ಪ್ರತಿಪಕ್ಷ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆಯಾದರೆ, ಲಿಂಗಾಯತ ಸಮುದಾಯದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಬಿಜೆಪಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಸದ್ಯಕ್ಕೆ ಬೊಮ್ಮಾಯಿ ಅವರನ್ನು ಹೊರತುಪಡಿಸಿ ವಿಧಾನಸಭೆಯಲ್ಲಿ ಬೇರಾರೂ ಹಿರಿಯರು ಕಾಣದ ಕಾರಣ ಯತ್ನಾಳ್ ಮತ್ತು ಬೆಲ್ಲದ್ ಹೆಸರು ಬಹುತೇಕ ಹೊರಗೆ ಎನ್ನಲಾಗುತ್ತಿದೆ. ಹಾಗೊಂದು ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಿದರೆ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆದಿವೆ.
ಒಕ್ಕಲಿಗ ಸಮುದಾಯದವರಿಗೆ ರಾಜ್ಯ ಅಧ್ಯಕ್ಷ ಸ್ಥಾನ ನೀಡುವುದರಿಂದ ಸಾಧಕ ಬಾಧಕಗಳ ಲೆಕ್ಕಾಚಾರ ನಡೆಯುತ್ತಿದೆ. ಈಗ ಡಿಸಿಎಂ ಆಗಿ ಒಕ್ಕಲಿಗ ಸಮುದಾಯದ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿ 50:50 ಫಾರ್ಮುಲ ಅನ್ವಯವಾದರೆ ಎರಡನೇ ಅವಧಿಗೆ ಸಿಎಂ ಆಗಲಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆದರೆ ಇಡೀ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕಡೆಗೆ ವಾಲಲಿದೆ. ಆಗ ಜೆಡಿಎಸ್ ಪಕ್ಷವೇ ಒಕ್ಕಲಿಗ ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿರುವಾಗ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಒಕ್ಕಲಿಗ ಸಮುದಾಯದವರನ್ನು ಆಯ್ಕೆ ಮಾಡಿದರೆ ಹೆಚ್ಚಿನ ಉಪಯೋಗ ಆಗಲಾರದು ಎಂಬ ಮಾತೂ ಇದೆ.
ಉಳಿದಂತೆ ವಿ. ಸುನಿಲ್ ಕುಮಾರ್ ಹಾಗೂ ಎನ್. ರವಿಕುಮಾರ್ ಒಬಿಸಿ ವರ್ಗಕ್ಕೆ ಸೇರಿದವರು. ವಿಧಾನಸಭೆಯಲ್ಲಿ ಯಾರನ್ನೇ ನಾಯಕರನ್ನಾಗಿಸಿದರೂ ಇವರಿಬ್ಬರಲ್ಲಿ ಯಾರನ್ನೂ ರಾಜ್ಯ ಅಧ್ಯಕ್ಷ ಮಾಡಲು ಅಡ್ಡಿ ಆಗುವುದಿಲ್ಲ. ಪ್ರಮುಖವಾಗಿ ಕುರುಬ, ಕೋಲಿ, ಬಲಿಜ, ಈಡಿಗ(ಬಿಲ್ಲವ), ಮರಾಠ, ಯಾದವ(ಗೊಲ್ಲ), ವಿಶ್ವಕರ್ಮ ಸೇರಿ ಅನೇಕ ಸಮುದಾಯಗಳು ಒಬಿಸಿಯಲ್ಲಿದ್ದು, ಬೃಹತ್ ಜನಸಂಖ್ಯೆ ಹೊಂದಿವೆ. ಈ ಮಾನದಂಡದಲ್ಲಿ ಸುನಿಲ್ ಕುಮಾರ್ ಅಥವಾ ರವಿ ಕುಮಾರ್ ಆಯ್ಕೆಯಾಗುವ ಅಂದಾಜಿದೆ.
ಒಟ್ಟಾರೆ ಎರಡೂ ಸ್ಥಾನಗಳನ್ನು ಆಯ್ಕೆ ಮಾಡುವ ಸಲುವಾಗಿ ಕಾಂಬಿನೇಷನ್ ಚರ್ಚೆ ಬಿಜೆಪಿಯಲ್ಲಿ ನಡೆದಿದೆ. ಮೇ 23ರ ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಇಲ್ಲಿ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ ಎನ್ನುವುದರ ಆಧಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Karnataka BJP: ಹೊಸಕೋಟೆಯಲ್ಲಿ ತಾಲಿಬಾನ್ ಪಡೆ ಎದ್ದುನಿಂತಿದೆ: ನಳಿನ್ ಕುಮಾರ್ ಕಟೀಲ್ ಆಕ್ರೋಶ