ಬೆಂಗಳೂರು: ಭಾರತೀಯ ಜನತಾ ಪಕ್ಷವು ಎಲ್ಲವನ್ನೂ ನೀಡಿದ್ದರೂ ಆ ಋಣವನ್ನು ತೀರಿಸದೆ ಇದೀಗ ಕಾಂಗ್ರೆಸ್‌ಗೆ ಹೊರಟಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್ ನಡೆ ಅಕ್ಷಮ್ಯ ಅಪರಾಧ ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಕಿಡಿಕಾರಿದ್ದಾರೆ. ಹಾಗೆಯೇ, ಈ ಹಿಂದೆ ಪಕ್ಷವನ್ನು ಬಿಟ್ಟು ಹೋಗಿದ್ದು ನನ್ನ ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ. ಹಳೆ ಬೇರು, ಹೊಸ ಚಿಗುರು ಸೇರಿ ಬೆಳೆಸಬೇಕಿದೆ. ಈ ಪಕ್ಷವು ನನಗೆ, ಶೆಟ್ಟರ್ ಅವರಿಗೆ, ಲಕ್ಷ್ಮಣ ಸವದಿ ಅವರಿಗೆ ಹಾಗೂ ಈಶ್ವರಪ್ಪ ಅವರಿಗೆ ಅನೇಕ ಅವಕಾಶ ನೀಡಿದೆ. ನನ್ನಂತಹ ಸಾಮಾನ್ಯ ಕಾರ್ಯಕರ್ತ ರಾಜ್ಯದ ಎಲ್ಲೇ ಹೋದರೂ ವಿಶ್ವಾಸ ಗಳಿಸಲು ಬಿಜೆಪಿಯೇ ಕಾರಣ ಎನ್ನುವುದನ್ನು ನಾನು ಮರೆತಿಲ್ಲ.
ಲಕ್ಷ್ಮಣ ಸವದಿ ಅವರನ್ನು ಬಿಜೆಪಿಗೆ ಕರೆತಂದು ಅವರು ಶಾಸಕರಾದರು, ಸಚಿವರಾದರು, ಚುನಾವಣೆಯಲ್ಲಿ ಸೋತ ನಂತರ ವಿಧಾನ ಪರಿಷತ್ ಸದಸ್ಯರಾಗಿಸಿ ಉಪಮುಖ್ಯಮಂತ್ರಿ ಮಾಡಿ, ಕೋರ್ ಕಮಿಟಿ ಸದಸ್ಯರಾಗಿಯೂ ಮಾಡಿದ್ದೇವೆ. ನಾವು ಅವರಿಗೆ ಏನು ಕಡಿಮೆ ಮಾಡಿದ್ದೆವು? ಇನ್ನೂ ಐದು ವರ್ಷ ಎರಡು ತಿಂಗಳು ಸವದಿ ಎಂಎಲ್‌ಸಿ ಆಗಿ ಮುಂದುವರಿಯಬಹುದಾಗಿತ್ತು. ಈ ಹಿಂದಿನಂತೆಯೇ ಅವರನ್ನು ಮತ್ತೆ ಸಚಿವರಾಗಿ ಮಾಡಲು ಅಡ್ಡಿ ಇರಲಿಲ್ಲ. ಏನು ಅನ್ಯಾಯ ಆಗಿತ್ತು ನಿಮಗೆ ಎಂದು ಸವದಿ ಹಾಗೂ ಬೆಂಬಲಿಗರು ಹೇಳಬೇಕು. ಇದು ನಂಬಿಕೆ ದ್ರೋಹ, ವಿಶ್ವಾಸ ದ್ರೋಹ. ಜನರು ಅವರನ್ನು ಕ್ಷಮಿಸುವುದಿಲ್ಲ. ಅವರನ್ನು ಗುರುತಿಸಿದ್ದು ಬಿಜೆಪಿ.
ಜಗದೀಶ ಶೆಟ್ಟರ್ ಜನಸಂಘದ ಕಾಲದಿಂದ ಜನಸಂಘದ ಕಾಲದಿಂದ ಬಿಜೆಪಿಯಲ್ಲಿರುವವರು. ವಿರೋಧ ಪಕ್ಷದ ನಾಯಕ, ಮಂತ್ರಿ ಜತೆಗೆ ಮುಖ್ಯಮಂತ್ರಿಯನ್ನಾಗಿಯೂ ಮಾಡಲಾಯಿತು. ಬಿಬಿ ಶಿವಪ್ಪ ಅವರನ್ನು ಎದುರು ಹಾಕಿಕೊಂಡು, ಒಬ್ಬ ಯುವಕ ಬೆಳೆಯಬೇಕು ಎಂಬ ಕಾರಣಕ್ಕೆ ಜಗದೀಶ ಶೆಟ್ಟರ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲಾಯಿತು.
ನಾನು ಹಾಗೂ ಅನಂತಕುಮಾರ್, ಅವರ ಬೆನ್ನಿಗೆ ನಿಂತಿದ್ದೆವು. ನಾವೇ ಅವರನ್ನು ಮುಖ್ಯಮಂತ್ರಿಯನ್ನಾಗಿಯೂ ಮಾಡಿದ್ದೆವು. ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಮುನ್ನಡೆಯುತ್ತಿರುವ ಸಮಯದಲ್ಲಿ ನಾವು ಅವರೊಂದಿಗೆ ಹೆಜ್ಜೆ ಹಾಕಬೇಕಾಗಿತ್ತು.
ಜಗದೀಶ ಶೆಟ್ಟರ್ ಅವರ ಹೇಳಿಕೆ ಹಾಗೂ ಅವರ ನಿರ್ಧಾರ, ಅವರು ನಂಬಿಕೊಂಡಿರುವ ವಿಚಾರಕ್ಕೆ ತದ್ವಿರುದ್ಧವಾಗಿದೆ. ಸ್ಥಾನಮಾನ ಸಿಗಲಿ, ಸಿಗದೇ ಇರಲಿ ದೇಶಕ್ಕಾಗಿ ಕೆಲಸ ಮಾಡುವಂತಹದ್ದು ನಾವು ನಡೆದುಕೊಂಡುಬಂದಿರುವ ದಾರಿ. ಜಗದೀಶ್ ಶೆಟ್ಟರ್ ಅವರನ್ನು ರಾಜ್ಯದ ಜನತೆ ಗುರುತು ಮಾಡಿದ್ದು ಭಾರತೀಯ ಜನತಾ ಪಾರ್ಟಿ ಮೂಲಕ. ಪಕ್ಷವಿಲ್ಲದೆ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ.
ಧರ್ಮೇಂಧ್ರ ಪ್ರಧಾನ್, ಪ್ರಲ್ಹಾದ್ ಜೋಶಿ ಸ್ವತಃ ಜಗದೀಶ ಶೆಟ್ಟರ್ ಅವರ ಮನೆಗೆ ಹೋಗಿ, ರಾಜ್ಯಸಭಾ ಸದಸ್ಯರನ್ನು ಮಾಡಿ ಮಂತ್ರಿ ಮಾಡೋಣ ಎಂದು ಮಾತನಾಡಿ ಬಂದಿದ್ದಾರೆ. ಆ ಭಾಗದ ಜನರಿಗೆ ಕೈಜೋಡಿಸಿ ಪ್ರಾರ್ಥನೆ ಮಡುತ್ತೇನೆ, ಇಷ್ಟೆಲ್ಲದರ ನಂತರವೂ ಹಠ ಮಾಡಿ ಕಾಂಗ್ರೆಸ್ ಜತೆ ಕೈಜೋಡಿಸಲು ಹೊರಟಿರುವುದು ಅಕ್ಷಮ್ಯ ಅಪರಾಧ.
ಅವರಿಗೆ ಏನೂ ಕಡಿಮೆ ಮಾಡಿಲ್ಲ. ಆದರೂ ಈ ನಿರ್ಧಾರವು ಪಕ್ಷಕ್ಕೆ ಮಾಡಿರುವ ದ್ರೋಹ. ಇದನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ. ನಾನು 80 ವರ್ಷವಾದರೂ ಓಡಾಟ ಮಾಡುತ್ತಿರುವುದು ಇಲ್ಲಿನ ವಿಚಾರಕ್ಕಾಗಿ, ಬಲಿಷ್ಠ ಸರ್ಕಾರಕ್ಕಾಗಿ. ಅದಕ್ಕಾಗಿ ನನ್ನ ಸಂಪೂರ್ಣ ಸಮಯವನ್ನು ತೆಗೆದಿಟ್ಟಿದ್ದೇನೆ.
ಜಗತ್ತಿನ ಯಾವುದೇ ಶಕ್ತಿಯೂ, ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ. ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಎಲ್ಲ ಜಾತಿ, ಸಮುದಾಯಗಳಿಗೆ ಅವಕಾಶ ನೀಡಲಾಗಿದೆ. ಬಿಜೆಪಿಯಲ್ಲಿ ಹೊಸತನ, ಹೊಸ ಹುರುಪು, ಹೊಸ ರಕ್ತ ಬರಲು ನಾವು ದಾರಿ ಮಾಡಬೇಕು. ಬಿಜೆಪಿ ನಿಮಗೆ ಎಲ್ಲವನ್ನೂ ಕೊಟ್ಟಿದೆ, ಆ ಋಣವನ್ನು ತೀರುಸವ ಕೆಲಸ ಮಾಡಬೇಕು ಎಂದರು.
ಕೆ.ಎಸ್. ಈಶ್ವರಪ್ಪ, ರಘುಪತಿ ಭಟ್ ಹಾಗೂ ಎಸ್. ಅಂಗಾರ ಅವರು ಪಕ್ಷದ ತೀರ್ಮಾನವನ್ನು ಗೌರವಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದರು. ಪಕ್ಷ ಎಲ್ಲವನ್ನೂ ಕೊಟಿದ್ದರೂ ಯಡಿಯೂರಪ್ಪ ಅವರೇ ಪಕ್ಷ ಬಿಟ್ಟಿದ್ದರು ಎಂಬ ಶೆಟ್ಟರ್ ಮಾತಿಗೆ ಪ್ರತಿಕ್ರಿಯಿಸಿ, ಅದು ನಾನು ಮಾಡಿದ ಅಕ್ಷಮ್ಯ ಅಪರಾಧ. ಇದಕ್ಕೆ ಈಗಾಗಲೆ ರಾಜ್ಯದ ಜನರ ಕ್ಷಮೆ ಕೇಳಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: Priyank Kharge: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಆಧರಿಸಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ 40% ಟೀಕೆ