Site icon Vistara News

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

Congress Protest

Karnataka BJP Questions Karnataka Congress Over Protest In Delhi By Going On Flight

ಬೆಂಗಳೂರು/ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG) ಅಕ್ರಮ ನಡೆದಿರುವುದು ಹಾಗೂ ಸೇನೆಗೆ ಕಿರು ಅವಧಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಭಾರತೀಯ ಯುವ ಕಾಂಗ್ರೆಸ್‌ (IYC) ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಇನ್ನು, ಕರ್ನಾಟಕದಿಂದ (Karnataka) ಐಷಾರಾಮಿ ವಿಮಾನದಲ್ಲಿ ಯುವ ಕಾಂಗ್ರೆಸ್‌ (Congress) ನಾಯಕರು ದೆಹಲಿಗೆ ಹೋಗಿರುವುದನ್ನು ಬಿಜೆಪಿ (BJP) ಖಂಡಿಸಿದೆ. ಅಲ್ಲದೆ, ಹಣದ ಮೂಲಕ ಯಾವುದು ಎಂಬುದಾಗಿ ಪ್ರಶ್ನಿಸಿದೆ.

“ಐಷಾರಾಮಿ ಎಸಿ ಬಸ್‌ ಹಾಗೂ ಪ್ಲೈಟ್‌ ಮುಖಾಂತರ ಪ್ರಯಾಣ ಮಾಡಿ ಪ್ರತಿಭಟನೆ ಮಾಡುವ ಕರ್ನಾಟಕ ಕಾಂಗ್ರೆಸ್‌ನ ಯುವ ನಾಯಕರಿಗೆ ಹಣ ಎಲ್ಲಿಂದ ಬಂದಿದೆ? ಇದರ ಹಣದ ಮೂಲ ಎಲ್ಲಿ? ನಂದಿನಿ ಹಾಲಿನ ಹೆಚ್ಚುವರಿ 2 ರೂಪಾಯಿ, ಪೆಟ್ರೋಲ್‌ ಬೆಲೆಯ ಹೆಚ್ಚುವರಿ 4 ರೂಪಾಯಿಯನ್ನು ಸಿದ್ದರಾಮಯ್ಯ ಸರ್ಕಾರ ಸಂಗ್ರಹಿಸಿ ಕೊಟ್ಟಿದೆ ಎಂದು ದೆಹಲಿಗೆ ಹೋದ ನಲಪಾಡ್‌ ಗ್ಯಾಂಗ್‌ ಹೇಳುತ್ತಿದೆ. ಹೌದಾ ಸಿದ್ದರಾಮಯ್ಯನವರೇ?” ಎಂಬುದಾಗಿ ಬಿಜೆಪಿ ಪೋಸ್ಟ್‌ ಮಾಡಿದೆ. ಹಾಗೆಯೇ, ಯುವ ಕಾಂಗ್ರೆಸ್‌ ನಾಯಕರು ವಿಮಾನದಲ್ಲಿ ಹೊರಟ ವಿಡಿಯೊವನ್ನು ಕೂಡ ಹಂಚಿಕೊಂಡಿದೆ.

ರಾಜ್ಯದಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 3 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ತಿಳಿದುಬಂದಿದೆ. ಇದಾದ ಕೆಲವೇ ದಿನಗಳಲ್ಲಿ ನಂದಿನಿ ಹಾಲಿನ ಬೆಲೆಯನ್ನೂ 2 ರೂಪಾಯಿ ಏರಿಕೆ ಮಾಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿದ ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯ ಯುವ ಕಾಂಗ್ರೆಸ್‌ ನಾಯಕರು ವಿಮಾನದಲ್ಲಿ ತೆರಳಿ, ದೆಹಲಿಯಲ್ಲಿ ಎ.ಸಿ ಬಸ್‌ನಲ್ಲಿ ಜಂತರ್‌ ಮಂತರ್‌ಗೆ ಹೋಗಿ ಪ್ರತಿಭಟನೆ ನಡೆಸಿದ್ದನ್ನು ಬಿಜೆಪಿ ಪ್ರಶ್ನಿಸಿದೆ.

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದರಿಂದ ಒಂದು ಲೀಟರ್‌ ಡೀಸೆಲ್‌ಗೆ ರಾಜ್ಯದ ಜನ 89.20 ರೂ. ನೀಡಿದರೆ, ಲೀಟರ್‌ ಪೆಟ್ರೋಲ್‌ಗೆ 103 ಆಗಿದೆ. ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಇದುವರೆಗೆ ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ. ಇನ್ನು ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಶೇ.18.44ರಷ್ಟು ತೆರಿಗೆ ವಸೂಲಿ ಮಾಡುತ್ತಿದೆ.

ಇದನ್ನೂ ಓದಿ: Milk Price: ನಂದಿನಿ ಹಾಲಿನ ಹೊಸ ದರ ಹೇಗಿದೆ; ಯಾವುದಕ್ಕೆ ಎಷ್ಟು ಹೆಚ್ಚಳ?

Exit mobile version