ಬೆಂಗಳೂರು: ಶಿವಮೊಗ್ಗ ವಿಧಾನಸಭೆ ಕ್ಷೇತ್ರದಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ಭಾವಿಸಿ ವಾಗ್ದಾಳಿ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ಬಿಜೆಪಿ ಘಟಕ ಆಗ್ರಹಿಸಿದ್ದು, ಈ ಬಗ್ಗೆ ಪತ್ರ ಬರೆದಿದೆ.
ಈ ಕುರಿತು ಜಿಲ್ಲಾ ಘಟಕಕ್ಕೆ ಶಿವಮೊಗ್ಗ ನಗರ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್ ಪತ್ರ ಬರೆದಿದ್ದಾರೆ. ಆಯನೂರು ಮಂಜುನಾಥ್ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ. ನಗರದ ಪ್ರಮುಖ ವೃತ್ತಗಳಲ್ಲಿ ಪಕ್ಷದ ನಾಯಕರ ವಿರುದ್ಧ ಫ್ಲೆಕ್ಸ್ ಹಾಕುತ್ತಿದ್ದಾರೆ. ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ಹೇಳಿಕೆ ನೀಡುತ್ತಿದ್ದಾರೆ ಹಾಗೂ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪಕ್ಷ ದ್ರೋಹಿಯಾಗಿದ್ದಾರೆ.
ನಗರದಲ್ಲಿ ನಡೆದ ಕೋಮುಗಲಭೆಗಳಿಗೆ ಹಾಗೂ ಸೆಕ್ಷನ್ ಹಾಕಲು ಬಿಜೆಪಿಯೇ ಕಾರಣ, ಬಿಜೆಪಿ ನಾಯಕರೇ ಕಾರಣವೆಂದು ಹೇಳುವ ಮೂಲಕ ಮುಸಲ್ಮಾನರಂತೆ ಹಾಗೂ ಸುನ್ನತ್ ಮಾಡಿಸಿಕೊಂಡವರಂತೆ ಮಾತನಾಡುತ್ತಿದ್ದಾರೆ. ಕೋರ್ ಕಮಿಟಿ ನಿರ್ಣಯದಂತೆ ಆಯನೂರು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಗರ ಘಟಕದ ಪತ್ರವವನ್ನು ಸೇರಿಸಿ ಜಿಲ್ಲಾ ಘಟಕವು ಪತ್ರ ಬರೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಪತ್ರ ಬರೆದಿರುವ ಶಿವಮೊಗ್ಗ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಆಯನೂರು ಮಂಜುನಾಥ್ ಜಿಲ್ಲಾ ಬಿಜೆಪಿಗೂ ಅವಮಾನ ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.