ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 14ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಅಲ್ಲದೆ, ಅವರಿಗೆ ಈ ಬಾರಿ ಗ್ಯಾರಂಟಿ ಯೋಜನೆಯ ಅನುಷ್ಠಾನವೇ ದೊಡ್ಡ ಸವಾಲಾಗಿದ್ದರಿಂದ ಅದಕ್ಕೆ ಹಣ ಹೊಂದಿಸುವಲ್ಲಿ ಸಾಕಷ್ಟು ಕಸರತ್ತು ಮಾಡಿದ್ದಾರೆ. ಈ ನಡುವೆ ಬಜೆಟ್‌ನಲ್ಲಿ (Karnataka budget 2023) ಗ್ರಾಮೀಣಾಭಿವೃದ್ಧಿಯತ್ತ ಅವರು ಗಮನ ಹರಿಸಿದ್ದಾರೆ. ಇದರ ಜತೆಗೆ ಬಹು ಆಯಾಮದ ಬಡತನ ಸೂಚ್ಯಂಕದ ಬಗ್ಗೆ ವಿಶೇಷ ಗಮನವನ್ನು ಹರಿಸಿರುವ ರಾಜ್ಯ ಸರ್ಕಾರವು ಇದಕ್ಕಾಗಿ “ಆಕಾಂಕ್ಷೆ ತಾಲೂಕುಗಳಿಗೆ 3000 ಕೋಟಿ ರೂಪಾಯಿ ವೆಚ್ಚ ಮಾಡಲು ಮುಂದಾಗಲಾಗಿದ್ದು, ಬಡತನ ಮುಕ್ತ ರಾಜ್ಯವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ.
ಜಲ್ ಜೀವನ್ ಮಿಷನ್ ಯೋಜನೆಯಡಿ ಸುಸ್ಥಿರ ಜಲಮೂಲ ಆಧರಿಸಿ 118 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನದ ಮೂಲಕ 25 ಲಕ್ಷ ಮನೆಗಳಿಗೆ ನಳಸಂಪರ್ಕ ಒದಗಿಸುವ ಗುರಿಯನ್ನು ಈ ಬಾರಿ ರಾಜ್ಯ ಸರ್ಕಾರ ಹಾಕಿಕೊಂಡಿದೆ.
ಇದನ್ನೂ ಓದಿ: Karnataka budget 2023 : ಗೃಹಲಕ್ಷ್ಮಿ ಜತೆಗೆ ಸಮಾನತೆ, ಸ್ವಾವಲಂಬನೆ, ಸಬಲೀಕರಣ ಮಂತ್ರ!
4,000 ಗ್ರಾ.ಪಂ.ನಲ್ಲಿ ʻಕೂಸಿನ ಮನೆʼ
4,000 ಗ್ರಾಮ ಪಂಚಾಯಿತಿಗಳಲ್ಲಿ ʻಕೂಸಿನ ಮನೆʼ ಎಂಬ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಭ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಒತ್ತು
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 400 ಸಮುದಾಯ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಮೀಸಲಿರಿಸಿದ್ದಾರೆ. ಆ ಮೂಲಕ ಸ್ವಚ್ಛ ಭಾರತಕ್ಕೆ ಕೊಡುಗೆ ನೀಡಲು ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗೆ 5,000 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಮವಹಿಸಲಾಗಿದೆ. ಈ ಬಾರಿ ಚುನಾವಣೆಗೆ ಪೂರ್ವದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಅದರ ಹಿನ್ನೆಲೆಯಲ್ಲಿ ಈಗ 5,000 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಆದರೆ, ಯಾವ ಯಾವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂಬ ಬಗ್ಗೆ ಉಲ್ಲೇಖಿಸಲಾಗಿಲ್ಲ. ನಂತರದ ದಿನಗಳಲ್ಲಿ ಅಗತ್ಯತೆಗಳನ್ನು ನೋಡಿಕೊಂಡು ಕ್ರಮ ವಹಿಸಬಹುದು.
ಎಂಪಿಐ ತಾಲೂಕಿಗೆ ಭರ್ಜರಿ ಕೊಡುಗೆ
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಬೇಕು. ಯಾರೊಬ್ಬರೂ ಹಸಿವಿನಿಂದ ಬಳಲಬಾರದು. ಬಡತನವನ್ನು ಕೊನೆಗಾಣಿಸಬೇಕು ಎಂಬ ನಿಟ್ಟಿನಲ್ಲಿ ಇಡೀ ವಿಶ್ವವೇ ಹೋರಾಡುತ್ತಿದೆ. ಅಲ್ಲದೆ, ವಿಶ್ವಸಂಸ್ಥೆ ಸಹ ಈ ನಿಟ್ಟಿನಲ್ಲಿ ಹಲವು ದೇಶಗಳ ಜತೆ ಒಪ್ಪಂದವನ್ನೂ ಮಾಡಿಕೊಂಡಿದೆ. ಅದರ ಭಾಗವಾಗಿ ಈಗಾಗಲೇ ಸರ್ಕಾರಗಳು ಕೆಲಸವನ್ನೂ ಮಾಡುತ್ತಿವೆ. ಇನ್ನು ದೇಶದಲ್ಲಿ ಬಡತನಕ್ಕೆ ಸಂಬಂಧಪಟ್ಟಂತೆ ನೀತಿ ಆಯೋಗವು ಕೆಲವು ನೀತಿಗಳನ್ನು ರೂಪಿಸಿದೆ. ಹೀಗಾಗಿ ಬಡತನವನ್ನು ಬಹು ಆಯಾಮ ಸೂಚ್ಯಂಕದ (ಎಂಪಿಐ) ಆಧಾರದ ಮೇಲೆ ಅಳೆಯಲಾಗುತ್ತದೆ. ಅಂದರೆ, ಇಲ್ಲಿ ಆರೋಗ್ಯ, ಶಿಕ್ಷಣ ಮತ್ತು ಜೀವನ ಗುಣಮಟ್ಟದ ಆಧಾರದ ಮೇಲೆ ಬಡತನವನ್ನು ಅಳೆಯಲಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಲಾಗಿದ್ದು, ಇದರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಹು ಆಯಾಮ ಸೂಚ್ಯಂಕಗಳ ಸುಧಾರಣೆಗೆ 3,000 ಕೋಟಿ ರೂ. ವೆಚ್ಚ ಮಾಡುವುದಾಗಿ ಘೋಷಣೆ ಮಾಡಿದೆ.
ಇದನ್ನೂ ಓದಿ: Congress Guarantee: ಗೃಹಲಕ್ಷ್ಮೀ ಜಾರಿ ದಿನಾಂಕ ಘೋಷಿಸಿದ ಸಿದ್ದರಾಮಯ್ಯ: ಮನೆ ಯಜಮಾನಿ ಖಾತೆಗೆ ಬರಲಿದೆ ₹2,000
ಏನಿದು ಬಹು ಆಯಾಮದ ಬಡತನ?
ಆರೋಗ್ಯ, ಶಿಕ್ಷಣ ಮತ್ತು ಜೀವನ ಗುಣಮಟ್ಟದ ಆಧಾರದ ಮೇಲೆ ಬಡತನವನ್ನು ಎಂಪಿಐ ಮೂಲಕ ಅಳೆಯಲಾಗುತ್ತದೆ. ಅಂದರೆ, ಇಲ್ಲಿ ಆರೋಗ್ಯದಡಿ ಪೌಷ್ಟಿಕಾಂಶ, ಮಕ್ಕಳ ಮರಣ ಪ್ರಮಾಣ, ಶಿಕ್ಷಣಕ್ಕೆ ಸಂಬಂಧಿಸಿದಂತೆ ಕುಟುಂದವರ ಶಾಲಾ ದಾಖಲಾತಿಯನ್ನು ಪರಿಗಣಿಸಲಾಗುತ್ತದೆ. ಅಲ್ಲದೆ, ಜೀವನ ಗುಣಮಟ್ಟದಡಿ ಅಡುಗೆ ಇಂಧನ, ಸ್ವಚ್ಛತೆ, ಕುಡಿಯುವ ನೀರು, ವಸತಿ, ವಿದ್ಯುತ್ ಸಂಪರ್ಕ, ಸ್ವತ್ತುಗಳ ಆಧಾರದ ಮೇಲೆ ಜನರ ಬಡತನವನ್ನು ಅಳೆಯಲಾಗುತ್ತದೆ.