Site icon Vistara News

Karnataka Budget 2023: 8 ಲಕ್ಷ ಪಿಯು, ಡಿಗ್ರಿ ವಿದ್ಯಾರ್ಥಿಗಳಿಗೆ ಶುಲ್ಕರಹಿತ ಶಿಕ್ಷಣ, 1000 ‘ಮಕ್ಕಳ ಬಸ್ಸು’

Karnataka Budget 2023

ಬೆಂಗಳೂರು: 2023-24ನೇ ಸಾಲಿನ ಆಯವ್ಯಯದಲ್ಲಿ ʼಮುಖ್ಯಮಂತ್ರಿ ವಿದ್ಯಾಶಕ್ತಿʼ ಯೋಜನೆಯನ್ನು ಆರಂಭಿಸಲಾಗಿದೆ. ಇದರಡಿಯಲ್ಲಿ, ಸರ್ಕಾರಿ ಪದವಿಪೂರ್ವ ಹಾಗೂ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ ಸುಮಾರು 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ತೆರಳುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಿಂದ ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ 1000 ಹೊಸ ಕಾರ್ಯಾಚರಣೆಗಳನ್ನು ʼಮಕ್ಕಳ ಬಸ್ಸುʼ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಗುತ್ತದೆ. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ರಾಜ್ಯದ 10.32 ಲಕ್ಷ ಮಕ್ಕಳಿಗೆ ರೈತ ವಿದ್ಯಾನಿಧಿ ಯೋಜನೆಯಡಿ 725 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. 2022-23ನೇ ಸಾಲಿನಲ್ಲಿ ಈ ಸೌಲಭ್ಯವನ್ನು ಭೂರಹಿತ ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಯೆಲ್ಲೋ ಬೋರ್ಡ್‌ ಟ್ಯಾಕ್ಸಿ ಚಾಲಕರು ಹಾಗೂ ಆಟೋರಿಕ್ಷಾ ಚಾಲಕರ ಮಕ್ಕಳಿಗೆ ವಿಸ್ತರಿಸಲಾಗಿದ್ದು, ಹೆಚ್ಚುವರಿಯಾಗಿ 3 ಲಕ್ಷ ವಿದ್ಯಾರ್ಥಿಗಳಿಗೆ 141 ಕೋಟಿ ರೂ. ಮೊತ್ತವನ್ನು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಈ ಯೋಜನೆಯನ್ನು ರಾಜ್ಯದ ಸಿಂಪಿಗರ ಮಕ್ಕಳಿಗೂ ವಿಸ್ತರಿಸಲಾಗುವುದು.

ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ವಿವೇಕ ಯೋಜನೆಯಡಿಯಲ್ಲಿ 7,601 ಶಾಲಾ ಮತ್ತು ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು 1194 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಇಲಾಖೆಯ ಇತರೆ ಯೋಜನೆಗಳಡಿ ಹೆಚ್ಚುವರಿಯಾಗಿ 1,955 ಕೊಠಡಿಗಳನ್ನು 382 ಕೋಟಿ ರೂ. ವೆಚ್ಚದಲ್ಲಿ ಅನುಮೋದಿಸಲಾಗಿದೆ. ಒಟ್ಟಾರೆಯಾಗಿ ಹಿ೦ದಿನ ವರ್ಷದಲ್ಲಿ 1,576 ಕೋಟಿ ರೂ. ಗಳ ವೆಚ್ಚದಲ್ಲಿ 9,556 ಶಾಲಾ ಕಾಲೇಜುಗಳ ಕೊಠಡಿಗಳ ನಿರ್ಮಾಣಕ್ಕೆ ಕ್ರಮ.‌

ಇದನ್ನೂ ಓದಿ: Karnataka Budget 2023 : ಕಿವಿಗೆ ಹೂವಿಟ್ಟುಕೊಂಡು ಸದನಕ್ಕೆ ಬಂದ ಸಿದ್ದರಾಮಯ್ಯ, ಬಜೆಟ್‌ ಮಂಡನೆಗೆ ಅಡ್ಡಿ

ನರೇಗಾ ಸಂಯೋಜನೆಯೊಂದಿಗೆ 250 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7,750 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಶಾಲಾ. ಕಾಲೇಜುಗಳಲ್ಲಿ ಶೌಚಾಲಯಗಳ ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಮಾರ್ಚ್‌ 2023ರ ಅಂತ್ಯದಲ್ಲಿ 2,169 ಶೌಚಾಲಯಗಳು ಪೂರ್ಣಗೊಳ್ಳಲಿವೆ. ಉಳಿದ 5.581 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿದೆ.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಆವಿಷ್ಕಾರಾತ್ಮಕ ಮನೋಭಾವ ಬೆಳೆಸಲು 73 ಕರ್ನಾಟಕ ಪಬ್ಲಿಕ್‌ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ “ಸೃಷ್ಟಿ: ಟಿಂಕರಿಂಗ್‌ ಪ್ರಯೋಗಾಲಯʼಗಳ ಸ್ಥಾಪನೆ. ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಹೊಂದಿಲ್ಲದ 23 ತಾಲ್ಲೂಕುಗಳಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸುತ್ತಿರುವ 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ.

ಇದನ್ನೂ ಓದಿ: Karnataka Budget 2023 : ಬಡ್ಡಿ ರಹಿತ ಸಾಲ 3 ರಿಂದ 5 ಲಕ್ಷಕ್ಕೆ ಹೆಚ್ಚಳ; ಬಜೆಟ್‌ನಲ್ಲಿ ಘೋಷಣೆ

Exit mobile version