Site icon Vistara News

Karnataka Budget 2023: ಸಾರಿಗೆ ಸಂಸ್ಥೆ ಸಿಬ್ಬಂದಿಗೆ ₹1 ಕೋಟಿ ಮೊತ್ತದ ಅಪಘಾತ ವಿಮೆ; ಸಾರಿಗೆ ಸುಧಾರಣೆಗೆ ಮತ್ತೇನು ಘೋಷಣೆ?

Karnataka Budget 2023 Accident insurance of Rs 1 crore for transport corporation staff What else is announced to improve transport

ಬೆಂಗಳೂರು: ದೇಶದ ರಸ್ತೆ ಸಾರಿಗೆ ಸಂಸ್ಥೆಗಳ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ೧ ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮಾ ಯೋಜನೆ ಸೌಲಭ್ಯವನ್ನು ಜಾರಿಗೆ ತರಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಬಜೆಟ್‌ನಲ್ಲಿ (Karnataka Budget 2023) ಘೋಷಣೆ ಮಾಡಿದ್ದಾರೆ.

ಇದಲ್ಲದೆ, ವಿದ್ಯುತ್‌ ಚಾಲಿತ ವಾಹನಗಳಿಗೆ ಉತ್ತೇಜನಕ್ಕಾಗಿ ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪನೆ, ಹೊಸ ಬಸ್‌ ಖರೀದಿಗೆ ಆರ್ಥಿಕ ನೆರವನ್ನೂ ಸಹ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ವಿದ್ಯುತ್‌ ಚಾಲಿತ ಬಸ್‌ ಸಂಖ್ಯೆ ಹೆಚ್ಚಳ

ವಾಯುಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಸಾರಿಗೆ ನಿಗಮಗಳಲ್ಲಿ ಈಗಾಗಲೇ ವಿದ್ಯುತ್ ಚಾಲಿತ ಬಸ್ಸುಗಳನ್ನು ಅಳವಡಿಸಲು ಆರಂಭಿಸಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 1311 ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 50 ಬಸ್ಸುಗಳ ಕಾರ್ಯಾಚರಣೆ ಪ್ರಾರಂಭಿಸಿದೆ. ಮುಂಬರುವ ವರ್ಷಗಳಲ್ಲಿ ವಿದ್ಯುತ್ ಚಾಲಿತ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: karnataka budget 2023 : ಯಾವ ನೀರಾವರಿ ಯೋಜನೆಗಳಿಗೆ ಆದ್ಯತೆ? ಎಷ್ಟು ಅನುದಾನ ಪ್ರಕಟ?

ವಿದ್ಯುತ್ ಚಾಲಿತ ವಾಹನಗಳ ಉಪಯೋಗವನ್ನು ಉತ್ತೇಜಿಸುವ ಮೂಲಕ ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ದೃಷ್ಟಿಯಿಂದ ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳು ಮತ್ತು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಡಿಪೋಗಳಲ್ಲಿ ಹಸಿರು ತೆರಿಗೆ ನಿಧಿಯ ಅನುದಾನದಡಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಸಾರಿಗೆಯಲ್ಲಿ ಸುಧಾರಣಾ ಕ್ರಮ

ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ನಿಗಮಗಳನ್ನು ಬಲಪಡಿಸುವ ಉದ್ದೇಶದಿಂದ ರಚಿಸಲಾಗಿದ್ದ ಎಂ.ಆರ್. ಶ್ರೀನಿವಾಸಮೂರ್ತಿ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದ್ದು, ಅದರಲ್ಲಿನ ಶಿಫಾರಸುಗಳ ಅನುಸಾರ ನಿಗಮಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಬಸ್ಸುಗಳ ಕಾರ್ಯಾಚರಣೆ ಸೇರಿದಂತೆ ವಿವಿಧ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ವಾಹನ ತೆರಿಗೆಯಿಂದ ವಿನಾಯಿತಿಗೆ ಕ್ರಮ

ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2022-23ನೇ ಸಾಲಿನಲ್ಲಿ 2,335 ಕೋಟಿ ರೂಪಾಯಿಗಳ ಮೊತ್ತದ ಆರ್ಥಿಕ ಸಹಾಯವನ್ನು ಒದಗಿಸಲಾಗಿದೆ. ಇದಲ್ಲದೇ 1,505 ಕೋಟಿ ರೂ. ಮೊತ್ತದಲ್ಲಿ ವಾಹನ ತೆರಿಗೆಯಿಂದ ವಿನಾಯಿತಿ ಹಾಗೂ ತೆರಿಗೆಯನ್ನು ಬಂಡವಾಳವಾಗಿ ಪರಿವರ್ತಿಸಿಕೊಳ್ಳಲು ಮತ್ತು ಉಳಿಸಿಕೊಳ್ಳಲು ವಿಶೇಷ ಅವಕಾಶವನ್ನು ಮಾಡಿಕೊಡಲಾಗಿರುತ್ತದೆ. ಒಟ್ಟಾರೆಯಾಗಿ 3,840 ಕೋಟಿ ರೂ. ಗಳ ಸಹಾಯವನ್ನು ಒದಗಿಸಲಾಗಿರುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಹೊಸ ಬಸ್‌ ಸೇರ್ಪಡೆಗೆ ಆರ್ಥಿಕ ನೆರವು

2022-23ನೇ ಸಾಲಿನಲ್ಲಿ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ ಒಟ್ಟು 3,526 ಹೊಸ ಬಸ್ಸುಗಳನ್ನು ಸೇರ್ಪಡೆ ಮಾಡಿಕೊಳ್ಳಲು ಕ್ರಮ ವಹಿಸಲಾಗಿರುತ್ತದೆ. 2023-24ನೇ ಸಾಲಿನಲ್ಲಿ 1,200 ಹೊಸ ಬಸ್ಸುಗಳನ್ನು ಸಂಸ್ಥೆಗಳಿಗೆ ಸೇರ್ಪಡೆ ಮಾಡಲು ರಾಜ್ಯ ಸರ್ಕಾರದಿಂದ ಕೋಟಿ ರೂ. ಆರ್ಥಿಕ ಸಹಾಯವನ್ನು ಒದಗಿಸಲಾಗುವುದು. ಪ್ರಪ್ರಥಮ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಸಾರಿಗೆ ಸಂಸ್ಥೆಗಳಿಗೆ ಹೊಸ ಬಸ್ ಖರೀದಿಗಾಗಿ ಸರ್ಕಾರದಿಂದ ನೆರವು ನೀಡಲಾಗುತ್ತಿದೆ ಎಂದು ಸಿಎಂ ಹೇಳಿಕೊಂಡಿದ್ದಾರೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ “ಮಕ್ಕಳ ಬಸ್ಸು’

ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ಸುಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಬಸ್‌ ಕಾರ್ಯಾಚರಣೆಗಳನ್ನು ಮಾಡಲು “ಮಕ್ಕಳ ಬಸ್ಸು’ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: Karnataka budget 2023: ಕೇಂದ್ರದಿಂದ 2.77 ಲಕ್ಷ ಕೋಟಿ ರೂ. ಬಿಡುಗಡೆ, ಆರ್ಥಿಕ ಪ್ರಗತಿಗೆ ರಾಜ್ಯದಿಂದ 61,234 ಕೋಟಿ ಹೂಡಿಕೆ

ರಾಜಿ ದಂಡ ಪಾವತಿ ವ್ಯವಸ್ಥೆ ಹಂತ ಹಂತವಾಗಿ ಜಾರಿ

ಸಾರಿಗೆ ಇಲಾಖೆಯಲ್ಲಿ ಇ-ಚಲನ್ ವ್ಯವಸ್ಥೆಯಡಿ ಪ್ರವರ್ತನ ಚಟುವಟಿಕೆಗಳಲ್ಲಿ ಸಂಗ್ರಹವಾದ ರಾಜಿ ದಂಡವನ್ನು ಪಾವತಿಸಿಕೊಳ್ಳುವ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ರಾಜಾಜಿನಗರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಹಂತ ಹಂತವಾಗಿ ರಾಜ್ಯಾದ್ಯಂತ ಜಾರಿಗೊಳಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

Exit mobile version