Site icon Vistara News

Karnataka Budget 2023 : ಬಜೆಟ್‌ ಮಂಡನೆ ಟೈಮ್‌ ಬಂದ್ರೂ ಬಿಜೆಪಿಗೆ ಇನ್ನೂ ಸಿಕ್ಕಿಲ್ಲ ವಿಪಕ್ಷ ನಾಯಕ!

opposition leader

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Budget 2023) ನಡೆದು (ಮೇ 10) ಮತ ಎಣಿಕೆಯಲ್ಲಿ (ಮೇ 13) ಕಾಂಗ್ರೆಸ್‌ ಜಯಭೇರಿ ಬಾರಿಸಿ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು (ಮೇ 20), ಇದೀಗ 2023-24ನೇ ಸಾಲಿನ ಬಜೆಟ್‌ ಮಂಡನೆಗೆ ವೇದಿಕೆಗೆ ಸಿದ್ಧವಾಗಿದೆ (ಜುಲೈ 07). ಇಷ್ಟೆಲ್ಲ ಆದರೂ ಪ್ರಧಾನ ಪ್ರತಿಪಕ್ಷವಾಗಿರುವ ಬಿಜೆಪಿ ಇನ್ನೂ ವಿಪಕ್ಷ ನಾಯಕನ (Opposition Party leader) ಆಯ್ಕೆಯನ್ನೂ ಮಾಡಲಾಗದ ಸ್ಥಿತಿಯಲ್ಲಿದೆ.

ಸಿದ್ದರಾಮಯ್ಯ ಅವರು 2023-24ನೇ ಸಾಲಿನ ಬಜೆಟ್‌ ಮಂಡಿಸಿದ ಬಳಿಕ ಅದರ ಮೇಲೆ ವಿಸ್ತೃತವಾದ ಚರ್ಚೆ ನಡೆಯಬೇಗುತ್ತದೆ. ಬಜೆಟ್ ಮಂಡನೆ ನಂತರ ಬಜೆಟ್‌ನ ಸರಿ ತಪ್ಪುಗಳ ಕುರಿತು ಮಾತನಾಡಲು ಸದನದಲ್ಲಿ ಅಧಿಕೃತ ಪ್ರತಿಪಕ್ಷ ನಾಯಕನ ಆಯ್ಕೆ ಆಗಬೇಕಾಗಿದೆ. ಆದರೆ, ಈ ವಿಚಾರದಲ್ಲಿ ಬಿಜೆಪಿ ಇನ್ನೂ ಮೌನವಾಗಿದೆ.

ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ. ಈ ಕ್ಷಣದ ತನಕ ಹೈ ಕಮಾಂಡ್ ವಿಪಕ್ಷ ನಾಯಕ ಯಾರು ಅಂತ ಘೋಷಣೆ ಮಾಡದೆ ಇರುವುದು ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಈಗಾಗಲೇ ಉಭಯ ಸದನದಲ್ಲಿ ವಿಪಕ್ಷ ನಾಯಕ ಆಯ್ಕೆ ಆಗದ ವಿಚಾರವನ್ನು ಹಿಡಿದುಕೊಂಡು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಲೇವಡಿ ಮಾಡಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಯಾರು ಎನ್ನುವುದನ್ನು ನೇರವಾಗಿ ನಿರ್ಧಾರ ಮಾಡಲಾಗದ ಸ್ಥಿತಿಯಲ್ಲಿ ಬಿಜೆಪಿ ಇದೆ. ಯಾಕೆಂದರೆ ಇದರ ಜತೆ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯೂ ತಳುಕು ಹಾಕಿಕೊಂಡಿರುವುದು ಇದಕ್ಕೆ ಒಂದು ಕಾರಣ. ವಿಧಾನಸಭೆ ವಿರೋಧ ಪಕ್ಷದ ನಾಯಕತ್ವ ಮತ್ತು ಬಿಜೆಪಿ ರಾಜ್ಯಾಧ್ಯಕ್ಷತೆಯನ್ನು ಲಿಂಗಾಯತ ಮತ್ತು ಒಕ್ಕಲಿಗ ಇಲ್ಲವೇ ಇತರ ಹಿಂದುಳಿದ ವರ್ಗಗಳ ನಡುವೆ ಹಂಚಬೇಕಾದ ರಾಜಕೀಯ ಲೆಕ್ಕಾಚಾರವಿದೆ. ಒಂದೊಮ್ಮೆ ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಲಿಂಗಾಯತ ಸಮುದಾಯದ ಶಾಸಕರನ್ನು ಆಯ್ಕೆ ಮಾಡಿದರೆ, ರಾಜ್ಯಾಧ್ಯಕ್ಷತೆಯನ್ನು ಒಕ್ಕಲಿಗರಿಗೆ ನೀಡಬೇಕು ಎನ್ನುವ ಲೆಕ್ಕಾಚಾರವಿದೆ. ಅಂತೆಯೇ ವಿರೋಧ ಪಕ್ಷ ನಾಯಕನಾಗಿ ಒಕ್ಕಲಿಗರು ಇಲ್ಲವೇ ಒಬಿಸಿ ನಾಯಕನ ಆಯ್ಕೆ ನಡೆದರೆ ರಾಜ್ಯಾಧ್ಯಕ್ಷತೆ ಲಿಂಗಾಯತರಿಗೆ ಸಿಗಬೇಕು ಎನ್ನುವ ಅಲಿಖಿತ ನಿಯಮದ ಮಾತಾಗುತ್ತಿದೆ.

ಯಡಿಯೂರಪ್ಪ ಭೇಟಿಯ ನಂತರವೂ ಫೈನಲ್‌ ಆಗಲಿಲ್ಲ

ವಿರೋಧ ಪಕ್ಷದ ನಾಯಕ ಯಾರಾಗಬೇಕು ಎನ್ನುವುದನ್ನು ತೀರ್ಮಾನ ಮಾಡುವುದಕ್ಕಾಗಿ ಬಿಜೆಪಿ ವರಿಷ್ಠ ನಾಯಕರು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ದಿಲ್ಲಿಗೆ ಕರೆಸಿಕೊಂಡರೂ ಅಲ್ಲಿ ಯಾವುದೇ ತೀರ್ಮಾನ ಆಗಲಿಲ್ಲ. ಬಳಿಕ ಕೇಂದ್ರದ ಇಬ್ಬರು ವೀಕ್ಷಕರು ರಾಜ್ಯಕ್ಕೆ ಬಂದು ಎಲ್ಲ ಶಾಸಕರು ಮತ್ತು ನಾಯಕರ ಅಭಿಪ್ರಾಯವನ್ನು ಆಲಿಸಿ ಹೋಗಿದ್ದಾರೆ.

ಹೀಗೆ ಅಭಿಪ್ರಾಯ ಆಲಿಸಿದ ಬಳಿಕವಾದರೂ ವಿರೋಧ ಪಕ್ಷದ ನಾಯಕನ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕೇಂದ್ರದಿಂದ ಯಾವುದೇ ಸೂಚನೆ ಇದುವರೆಗೂ ಬಂದಿಲ್ಲ.

ಈಗಿನ ಲೆಕ್ಕಾಚಾರದ ಪ್ರಕಾರ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನೇ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಈ ಹುದ್ದೆಗೆ ಪ್ರಮುಖವಾಗಿ ಬಸನ ಗೌಡ ಪಾಟೀಲ್‌ ಯತ್ನಾಳ್‌, ಸುನಿಲ್‌ ಕುಮಾರ್‌, ಅಶೋಕ್‌ ಸೇರಿದಂತೆ ಹಲವರ ಹೆಸರೂ ಕೇಳಿಬರುತ್ತಿದೆ.

ಶುಕ್ರವಾರ (ಜುಲೈ 7) ಬಜೆಟ್‌ ಮಂಡನೆಯಾದರೂ ಚರ್ಚೆಗಳು ಆರಂಭಗೊಳ್ಳುವುದು ಸೋಮವಾರದಿಂದ. ಆಗಲಾದರೂ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಘೋಷಣೆ ಮಾಡುತ್ತದಾ ಎಂದು ಕಾದು ನೋಡಬೇಕಾಗಿದೆ.

ಇದನ್ನೂ ಓದಿ: Karnataka Budget 2023 : ಟೆಂಪಲ್‌ ರನ್‌ ಇಲ್ಲದೆ ನೇರ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ, ಶಾಸಕಾಂಗ ಪಕ್ಷ ಸಭೆ ಶುರು

Exit mobile version