ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಬೆಳಗ್ಗೆ ೧೦.೧೫ಕ್ಕೆ ೨೦೨೩-೨೪ನೇ ಸಾಲಿನ ರಾಜ್ಯ ಬಜೆಟ್‌ನ್ನು ಮಂಡಿಸಲಿದ್ದಾರೆ. ೨೦೨೩ರ ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಮಂಡನೆಯಾಗಲಿರುವ ಈ ಲೇಖಾನುದಾನದ ಬಗ್ಗೆ ಭಾರಿ ಕುತೂಹಲವಿದೆ. ಸಿಎಂ ಬೊಮ್ಮಾಯಿ ಅವರು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಇದೆ. ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಈಗಾಗಲೇ ಘೋಷಿಸಿರುವ ಕೆಲವು ಯೋಜನೆಗಳಿವೆ ಸಂವಾದಿಯಾಗಿ ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ.
ಮುಂದಿನ ಬಜೆಟ್ ಜನಪರ ಮತ್ತು ಬಡವರ ಪರವಾಗಿ ಇರಲಿದೆ ಎಂಬ ಸೂಚನೆಯನ್ನು ಆಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಕೃಷಿ ಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿಯಿಂದ ಕೃಷಿ ಮತ್ತು ನೀರಾವರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಬೊಮ್ಮಾಯಿ ಅವರು ಮಹಿಳೆಯರು, ಯುವಜನರು, ರೈತರು, ನಾನಾ ಸಮುದಾಯಗಳು, ಮಠ ಮಾನ್ಯಗಳನ್ನು ಗುರಿಯಾಗಿಟ್ಟುಕೊಂಡು ಹೊಸ ಕಾರ್ಯಕ್ರಮಗಳನ್ನು ಹೆಚ್ಚು ಪ್ರಕಟಿಸುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ತೆರಿಗೆ ಸಂಗ್ರಹ ಚೆನ್ನಾಗಿರುವುದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೈಕಟ್ಟಿದ ಪರಿಸ್ಥಿತಿಯೇನೂ ಇಲ್ಲ. ಹೀಗಾಗಿ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಲು ಸಾಕಷ್ಟು ಅನುಕೂಲಗಳಿವೆ.
ಕಾಂಗ್ರೆಸ್‌ನ ಯೋಜನೆಗಳಿಗೆ ಪ್ರತಿಯಾಗಿ ಹೊಸ ಯೋಜನೆ?
ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ಎರಡು ಪ್ರಮುಖ ಘೋಷಣೆಗಳನ್ನು ಮಾಡಿದೆ. ಗೃಹಿಣಿಯರಿಗೆ ತಿಂಗಳಿಗೆ ೨,೦೦೦ ರೂ. ನೀಡುವುದು ಮತ್ತು ಪ್ರತಿ ಕುಟುಂಬಕ್ಕೆ ೨೦೦ ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು ಎರಡು ಪ್ರಮುಖ ಯೋಜನೆಗಳು. ಜತೆಗೆ ಶಾಲೆಗೆ ಹೋಗುವ ಮಕ್ಕಳಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಕುಟುಂಬಗಳಿಗೆ ತಿಂಗಳಿಗೆ ನಿಗದಿತ ಮೊತ್ತ ನೀಡುವ ಪ್ಲ್ಯಾನ್ ಕೂಡಾ ಕಾಂಗ್ರೆಸ್‌ಗಿದೆ.
ಕಾಂಗ್ರೆಸ್ ನೀಡಿರುವ ಭರವಸೆಗಳಿಗೆ ಪ್ರತಿಯಾಗಿ ಬಜೆಟ್‌ನಲ್ಲಿ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಕಾಂಗ್ರೆಸ್ ಕೇವಲ ಪ್ರಣಾಳಿಕೆಗಳಲ್ಲಿ ಹೇಳಿಕೊಳ್ಳುತ್ತಾರೆ, ನಾವು ಬಜೆಟ್‌ನಲ್ಲೇ ಪ್ರಕಟಿಸಿದ್ದೇವೆ ಎಂದು ಪ್ರಚಾರ ಮಾಡುವುದಕ್ಕಾಗಿ ಬಜೆಟ್‌ನಲ್ಲಿ ಹೊಸ ಯೋಜನೆ ಪ್ರಕಟಿಸಬಹುದು. ಉತ್ತರ ಪ್ರದೇಶದಲ್ಲಿ ಈಗಾಗಲೇ ಮಹಿಳೆಯರ ಸಬಲೀಕರಣಕ್ಕಾಗಿ ಕೆಲವೊಂದು ಯೋಜನೆಗಳನ್ನು ಹೊಂದಿದ್ದು, ಅವುಗಳನ್ನು ಇಲ್ಲಿ ಜಾರಿಗೆ ತರುವುದಾಗಿ ಪ್ರಕಟಿಸಿ ಪ್ರಚಾರಕ್ಕೆ ಬಳಸಿಕೊಳ್ಳುವ ಇರಾದೆ ಇದ್ದಂತಿದೆ.
ರೈತರಿಗೆ ಬಂಪರ್ ಯೋಜನೆಗಳ ನಿರೀಕ್ಷೆ
ಈ ಬಾರಿಯ ಚುನಾವಣೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದು ಬಿಜೆಪಿ ಈಗಾಗಲೇ ಪ್ರಕಟಿಸಿದೆ. ಹೀಗಾಗಿ ರೈತರಿಗೆ ಹೆಚ್ಚಿನ ಯೋಜನೆಗಳು ಪ್ರಕಟವಾಗುವ ನಿರೀಕ್ಷೆ ಜೋರಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವ ಸಾಲ ೩ ಲಕ್ಷದಿಂದ ಐದು ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಕಂಡುಬಂದಿದೆ. ಅದರ ಜತೆ ಕೃಷಿ ಪೂರಕವಾದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಹಣ ನೀಡುವ ನಿರೀಕ್ಷೆ ಇದೆ.
ಕುಲಕಸುಬು ಆಧಾರಿತ ಯೋಜನೆಗಳಿಗೆ ಸಹಾಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಲಕಸುಬು ಆಧರಿತ ಸಾಂಪ್ರದಾಯಿಕ ವೃತ್ತಿಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಆಗಾಗ ಮಾತನಾಡುತ್ತಿದ್ದಾರೆ. ಹೀಗಾಗಿ ಕಮ್ಮಾರ, ಚಮ್ಮಾರ, ನೇಕಾರಿಕೆ ಸೇರಿದಂತೆ ಇತರ ವೃತ್ತಿಪರರಿಗೆ ಕನಿಷ್ಠ ೫೦ ಸಾವಿರ ರೂ. ಪ್ರೋತ್ಸಾಹಧನ ನೀಡುವ ಸಾಧ್ಯತೆ ಇದೆ. ಇದರೆ ಜತೆಗೆ ಗಾಣಿಗ, ಮಡಿವಾಳ, ಮೇದಾರ, ನೇಕಾರ, ಕುಂಬಾರ, ಅಕ್ಕಸಾಲಿಗ ಸಮುದಾಯಗಳಿಗೆ ಪ್ರತ್ಯೇಕ ನಿಗಮ ಸ್ಥಾಪಿಸುವ ಸಾಧ್ಯತೆಗಳಿವೆ.
ಹೋಬಳಿ ಮಟ್ಟದಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ, ಅಂಗನವಾಡಿ ಮತ್ತು ಆಶಾ ಕಾರ್ಯರ್ತೆಯರ ವೇತನ ಹೆಚ್ಚಳ ಮಾಡುವ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.
ಮಹಿಳಾ ಸ್ವಸಹಾಯ ಸಂಘಗಳಿಗೆ ಸ್ತ್ರೀ ಶಕ್ತಿ ಯೋಜನೆಯಡಿ ಬಡ್ಡಿ ರಹಿತ ಸಾಲವನ್ನು ಹೆಚ್ಚಿಸುವ ಘೋಷಣೆಯನ್ನು ಕಾಂಗ್ರೆಸ್ ಈಗಾಗಲೇ ಮಾಡಿದೆ. ಬಿಜೆಪಿ ಕೂಡಾ ಇದನ್ನೇ ಒಂದು ಅಸ್ತ್ರ ಮಾಡಿಕೊಳ್ಳಬಹುದು.
ಏಳನೇ ವೇತನ ಆಯೋಗದ ಶಿಫಾರಸು ಜಾರಿ?
ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಸುಧಾರಣೆಗಳ ಘೋಷಣೆ, ಶಿಕ್ಷಕರ ನೇಮಕದ ಘೋಷಣೆ ನಡೆಯುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ವಲಯದಲ್ಲಿ ಭಾರಿ ನಿರೀಕ್ಷೆ ಇರುವುದು ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಯ ಮೇಲೆ. ರಾಜ್ಯ ಸರ್ಕಾರ ಇದನ್ನು ಅನುಷ್ಠಾನಗೊಳಿಸಲು ಎಷ್ಟು ಹಣ ಮೀಸಲಿಡಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು.
ಜಿಲ್ಲಾವಾರು ಯೋಜನೆಗಳ ನಿರೀಕ್ಷೆ
ಈ ಬಜೆಟ್ ಬಗ್ಗೆ ಎಲ್ಲ ಜಿಲ್ಲೆಗಳಿಗೆ ಸಂಬಂಧಿಸಿ ಕನಿಷ್ಠ ಕೆಲವು ಯೋಜನೆಗಳನ್ನಾದರೂ ಪ್ರಕಟಿಸುವ ನಿರೀಕ್ಷೆ ಇದೆ. ಯಾಕೆಂದರೆ ಯಾವುದಾದರೂ ಜಿಲ್ಲೆ ಬಿಟ್ಟು ಹೋದರೆ ಅದು ಚುನಾವಣೆಯಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಬಹುದು. ಹೀಗಾಗಿ ಜಿಲ್ಲೆಗಳ ಪ್ರಮುಖ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ಘೋಷಣೆಯಾಗಲಿದೆ.
ಈ ಬಾರಿ ಜಾತಿ, ಧರ್ಮ, ಮಠ ಮಾನ್ಯಗಳ ಮೇಲೆಯೇ ಚುನಾವಣೆ ಬಹುತೇಕ ಕೇಂದ್ರೀಕೃತವಾಗುವ ಸಾಧ್ಯತೆ ಇದೆ. ಹೀಗಾಗಿ ಮಠಗಳಿಗೆ ಭರಪೂರ ಅನುದಾನ ಘೋಷಣೆ ನಿರೀಕ್ಷೆ ಇದೆ. ಒಟ್ಟಿನಲ್ಲಿ ಜನಪ್ರಿಯ ಯೋಜನೆಗಳು, ಹೆಚ್ಚು ಜನರನ್ನು ತಲುಪುವ ಯೋಜನೆಗಳು ಪ್ರಕಟವಾಗಲಿರುವುದಂತೂ ನಿಜ.
ಇದನ್ನೂ ಓದಿ : 7th Pay Commission : ವೇತನ ಆಯೋಗದ ಶಿಫಾರಸು ಜಾರಿ ಕುರಿತು ಬಜೆಟ್‌ನಲ್ಲಿ ಘೋಷಣೆ; ಕಾಯ್ದಿರಿಸುವ ಹಣವೆಷ್ಟು?