ಬೆಂಗಳೂರು: ನೂತನ ವಿಧಾನಸಭೆ ಕಲಾಪದ ಐದನೇ ದಿನವಾದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಜೆಟ್ ಮಂಡನೆಗೆ ಸಜ್ಜಾಗಿದ್ದಾರೆ. ಇದರೊಂದಿಗೆ ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಬಾರಿ ಬಜೆಟ್ (Karnataka Budget 2023) ಮಂಡಿಸಿದ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಪಾತ್ರವಾಗಲಿದ್ದಾರೆ. ಈಗಾಗಲೆ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಇದೀಗ 14ನೇ ಬಜೆಟ್ ಮಂಡಿಸಲಿದ್ದಾರೆ.
ದಾಖಲೆಯ ಬಜೆಟ್
ಹಿಂದಿನ ಬಾರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಾತ್ರ 3.09 ಲಕ್ಷ ಕೋಟಿ ರೂ. ಇತ್ತು. ಗ್ಯಾರಂಟಿ ಯೋಜನೆಗಳಿಗೆ ಅಂದಾಜು 59 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದು, ಅದಕ್ಕೆ ಹಣ ಹೊಂದಿಸಲು ಶೇ. 8ರಷ್ಟು ಬಜೆಟ್ ಗಾತ್ರ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಒಟ್ಟು ಬಜೆಟ್ ಗಾತ್ರ 3.4 ಲಕ್ಷ ಕೋಟಿ ರೂ. ಆಗಬಹುದು ಎನ್ನಲಾಗಿದೆ. ಈ ಹಣವನ್ನು ಹೊಂದಿಸಲು ಸುಮಾರು 30 ಸಾವಿರ ಕೋಟಿ ರೂ. ಸಾಲವನ್ನು ಸರ್ಕಾರ ಮಾಡುವ ಸಾಧ್ಯತೆಯಿದೆ. ಇನ್ನು 30 ಸಾವಿರ ಕೋಟಿ ರೂ. ಹೊಂದಿಸಲು ತೆರಿಗೆ ಇಲಾಖೆಗೆ ಗುರಿ ಹೆಚ್ಚಳ ಮಾಡಲಾಗುತ್ತದೆ. ಜತೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ, ಇಂಧನದ ಮೇಲಿನ ತೆರಿಗೆಗಳಲ್ಲಿ ಸರ್ಕಾರ ಹೆಚ್ಚಳ ಮಾಡುವುದೇ ಎಂಬ ಕುತೂಹಲವಿದೆ.
ಬಜೆಟ್ ಹೈಲೈಟ್ ಏನು?
ಕಾಂಗ್ರೆಸ್‌ನ ಐದು ಗ್ಯಾರೆಂಟಿಗಳೇ ಬಜೆಟ್ ಹೈಲೈಟ್ ಆಗಿವೆ.
ಶಕ್ತಿ ಯೋಜನೆಗೆ ಹಣಕಾಸು ಮೀಸಲು – ಸುಮಾರು 450 ಕೋಟಿ (ತಿಂಗಳಿಗೆ)
ಗೃಹ ಜ್ಯೋತಿಗೆ ಹಣ ಮೀಸಲು – 15 ಸಾವಿರ ಕೋಟಿ ( ತಿಂಗಳಿಗೆ)
ಗೃಹ ಲಕ್ಷ್ಮೀಗೆ ಹಣ ಮೀಸಲು – 24000 ( ತಿಂಗಳಿಗೆ)
ಅನ್ನಭಾಗ್ಯಕ್ಕೆ ಹಣ ಮೀಸಲು – 800 ಕೋಟಿ ( ತಿಂಗಳಿಗೆ)
ಯುವನಿಧಿ – 5000 ಕೋಟಿ ( ತಿಂಗಳಿಗೆ)
ಹೀಗೆ ಐದು ಯೋಜನೆಗಳಿಗೆ 59 ಸಾವಿರ ಕೋಟಿ ರೂಪಾಯಿ ಅಗತ್ಯವಾಗಿದ್ದು, ಇದಕ್ಕಾಗಿ ಸರ್ಕಾರ ಹಣ ಹೊಂದಿಸಬೇಕಾಗಿದೆ.
ಹಣ ಸಂಗ್ರಹ ಎಲ್ಲೆಲ್ಲಿಂದ?
ಹಲವು ತೆರಿಗೆಗಳ ಮೇಲೆ ಸಿದ್ದರಾಮಯ್ಯ ಕಣ್ಣು ಬಿದ್ದಿದ್ದು, ಅವುಗಳನ್ನು ಏರಿಸಲಿದ್ದಾರೆ. ಭೂಮಿ ನೋಂದಣಿ ಇನ್ನಷ್ಟು ತುಟ್ಟಿಯಾಗಲಿದೆ. ಹೀಗಾಗಿ ಜಮೀನು ದರವೂ ಹೆಚ್ಚಳ ಸಾಧ್ಯತೆ ಇದೆ. ಅಬಕಾರಿ ಸುಂಕ ಇನ್ನಷ್ಟು ಹೆಚ್ಚಳವಾಗಲಿದ್ದು, ವಾಹನಗಳ ಮೇಲಿನ ಸುಂಕವೂ ಏರಿಕೆಯಾಗಲಿದೆ. ಕರ್ಮಷಿಯಲ್ ಟ್ಯಾಕ್ಸ್ ದುಪ್ಪಟ್ಟು ಹಾಗೂ ಬಿಯರ್ ಬಾಟಲ್ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಆಲಂಕಾರಿಕ ವಸ್ತುಗಳ ಬೆಲೆ ಇನ್ನಷ್ಟು ತುಟ್ಟಿಯಾಗಲಿದೆ. ತೆರಿಗೆಯ ಮಾತೃ ಇಲಾಖೆಗಳ ಟಾರ್ಗೆಟ್ ಏರಿಕೆ ಮಾಡಲಿದ್ದಾರೆ.
ಇಂದಿರಾ ಕ್ಯಾಂಟಿನ್‌ಗೆ ಮರುಜೀವ
ರಾಜ್ಯದ 224 ಕ್ಷೇತ್ರಗಳಲ್ಲೂ ನಡೆಯುತ್ತಿರುವ, ನಿಂತಿರುವ, ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಲು ಸರ್ಕಾರ ಸಂಕಲ್ಪಿಸಿದೆ. ಇಂದಿರಾ ಕ್ಯಾಂಟೀನ್‌ಗೂ ಹಣ ಮೀಸಲು ಇಡಬೇಕಿದೆ. ಇದು ಬಡ ಮತ್ತು ಕೆಳಮಧ್ಯಮ ವರ್ಗಕ್ಕೆ ರೀಚ್ ಆಗುತ್ತಿದ್ದು, ಈ ಯೋಜನೆಗೆ ಅದ್ಯತೆ ಕೊಡಲಾಗುತ್ತಿದೆ.
ಸಾಲದ ಮಿತಿ ಹೆಚ್ಚಳ
ಮಹಿಳೆಯರ ಸ್ತ್ರೀಶಕ್ತಿ ಸಂಘಗಳಿಗೆ ಸಾಲದ ಮಿತಿ ಹೆಚ್ಚಳ ಮಾಡುವ ಪ್ರಸ್ತಾವವಿದ್ದು, ಐದು ಲಕ್ಷದವರೆಗೂ ಏರಿಕೆ ಸಾಧ್ಯತೆ ಇದೆ. ಅಂಗಾನವಾಡಿ ಕಾರ್ಯಕರ್ತರ ಪ್ರೋತ್ಸಾಹ ಧನವನ್ನೂ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ.
ಯುವಜನ ಉದ್ಯೋಗ ಅವಕಾಶ ಸೃಷ್ಟಿ ಮಾಡಲು ಕೈಗಾರಿಕಾ ನೀತಿ ರೂಪಿಸಲಾಗುತ್ತಿದ್ದು, ಬಂಡವಾಳಶಾಹಿಗೆ ಕಿರಿಕಿರಿ ಇಲ್ಲದೇ ಕೈಗಾರಿಕೆ ನಡೆಸಲು ನೀತಿ ನಿರೂಪಿಸಲಾಗುತ್ತಿದೆ. ಉದ್ಯೋಗ ಸೃಷ್ಟಿ ಮಾಡಲು ಕೈಗಾರಿಕಾ ಸ್ನೇಹಿ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಬಡವರಿಗೆ ಆರೋಗ್ಯ ಹಸ್ತ ಯೋಜನೆ ಜಾರಿ ಸಂಭವ ಇದೆ.
ಬೆಂಗಳೂರಿಗೆ ಬಂಪರ್
ಬ್ರಾಂಡ್ ಬೆಂಗಳೂರು ನಿರ್ಮಿಸಲು ಅನುದಾನ ನೀಡಬೇಕಾಗಿದೆ. ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಅನುದಾನ ಮೀಸಲು ಇಡಲಾಗಿದ್ದು, ಬೆಂಗಳೂರಿನ ನಾಲ್ಕು ದಿಕ್ಕುಗಳಿಗೆ ಮೋನೋ ರೈಲಿಗೂ ಅನುದಾನ ನೀಡುವ ಸಾಧ್ಯತೆ ಇದೆ. ಜನದಟ್ಟಣೆ ಇರುವ ಕಡೆ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುದಾನ ಹಾಗೂ ನಗರದಲ್ಲಿ ಪಾರ್ಕ್ ಫ್ಲೈ ಓವರ್‌ಗೆ ಅನುದಾನ ಕೊಡುವ ಸಾಧ್ಯತೆ ಇದೆ.
ಬಿಜೆಪಿಯ ಕೆಲ ಯೋಜನೆಗಳಿಗೆ ಖೊಕ್?
ಬಿಜೆಪಿ ಸರ್ಕಾರ ತಂದಿದ್ದ ಹಲವು ಯೋಜನೆಗಳಿಗೆ ಖೊಕ್ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಎನ್‌ಇಪಿ ವಾಪಸು ಪಡೆಯುವ, ವಿವೇಕಶಾಲೆ ಯೋಜನೆ ರದ್ದು ಮಾಡುವ, ಪದವಿಯವರೆಗೂ ಉಚಿತ ಶಿಕ್ಷಣ ಹಾಗೂ ದುಡಿಯುವ ವರ್ಗಕ್ಕೆ ಸಾಲ ಕೊಡುವ ಕಾಯಕ ಯೋಜನೆಗಳನ್ನು ರದ್ದುಪಡಿಸುವ ಸಾಧ್ಯತೆ ಇದೆಯೆನ್ನಲಾಗಿದೆ.
ಇದನ್ನೂ ಓದಿ: Karnataka Live News: ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಕ್ಷಣಕ್ಷಣದ ಮಾಹಿತಿ: ಇಂದು ಬಜೆಟ್ ಮಂಡನೆ