ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ೩,೦೯,೧೮೨ ಕೋಟಿ ರೂ. ಗಾತ್ರದ ಬಜೆಟ್‌ನ್ನು (Karnataka Budget 2023) ಮಂಡಿಸಿದ್ದಾರೆ. ಬಹುತೇಕ ಎಲ್ಲ ವಲಯಗಳನ್ನು ಸ್ಪರ್ಶಿಸಿದ ಬಜೆಟ್ ಇದೆಂದು ಅಭಿಪ್ರಾಯಪಡಲಾಗುತ್ತಿದೆ. ಹಾಗಿದ್ದರೆ ಯಾವ ಇಲಾಖೆಗೆ ಎಷ್ಟೆಷ್ಟು ಅನುದಾನ ಸಿಕ್ಕಿದೆ? ಕೃಷಿ, ಕೈಗಾರಿಕೆ, ಶಿಕ್ಷಣ, ಮಹಿಳಾ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿಯೂ ಸೇರಿದಂತೆ ಪ್ರಮುಖ ವಲಯಗಳಿಗೆ ಸಿಕ್ಕಿದ ಅನುದಾನ ಎಷ್ಟು ಎಂಬ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕಿಂತಲೂ ಹೆಚ್ಚಾಗಿ ಈ ರೀತಿ ಅನುದಾನ ನೀಡಲು ಹಣ ಎಲ್ಲಿಂದ ಬರುತ್ತದೆ, ಅದರ ಮೂಲ ಯಾವುದು ಎನ್ನುವ ಕುತೂಹಲ ಇನ್ನೂ ಹೆಚ್ಚು. ಅದೆಲ್ಲ ಮಾಹಿತಿಗಳನ್ನು ಒಳಗೊಂಡ ಇಂಟರೆಸ್ಟಿಂಗ್ ವಿನ್ಯಾಸಗಳು ಇಲ್ಲಿವೆ.
ಯಾವ ಇಲಾಖೆಗೆ ಎಷ್ಟು ಹಣ ಹಂಚಿಕೆ?
ಅನುದಾನ ಹಂಚಿಕೆಯಲ್ಲಿ ಗರಿಷ್ಠ ಅನುದಾನ ಸಂದಿರುವುದು ಶಿಕ್ಷಣ ಇಲಾಖೆಗೆ. ಒಟ್ಟು ಬಜೆಟ್‌ನ ಶೇ. ೧೨ ಅಂದರೆ ೩೭,೯೬೦ ಕೋಟಿ ರೂ.ವನ್ನು ನಿಗದಿ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿರುವುದು ಜಲ ಸಂಪನ್ಮೂಲ. ನೀರಾವರಿಗೆ ಒಟ್ಟು ೨೨,೮೫೪ ಕೋಟಿ ರೂ. (ಶೇ. ೭) ನೀಡಲಾಗಿದೆ. ಮೂರನೇ ಸ್ಥಾನದಲ್ಲಿರುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆ. ಇದಕ್ಕೆ ೨೦,೪೯೪ ಕೋಟಿ ರೂ. ಅಂದರೆ ಸುಮಾರು ಶೇ. ೬ರಷ್ಟು ಹಣ ನಿಗದಿ ಮಾಡಲಾಗಿದೆ.
1 ರೂಪಾಯಿಯಲ್ಲಿ ಯಾವುದಕ್ಕೆ ಎಷ್ಟು ಪೈಸೆ?: ಸಾಲ ತೀರಿಸಲಿಕ್ಕೇ ದೊಡ್ಡ ಮೊತ್ತ!
ಸರ್ಕಾರ ಖರ್ಚು ಮಾಡುವ ಹಣದಲ್ಲಿ ದೊಡ್ಡ ಮೊತ್ತ ಹೋಗುವುದು ಸಾಲ ತೀರುವಳಿಗೆ ಅಂದರೆ ನೀವು ನಂಬಬೇಕು. ಒಟ್ಟಾರೆ ಖರ್ಚು ೧೦೦ ರೂ. ಎಂದರೆ ೧೯ ರೂ. ಸಾಲ ತೀರುವಳಿಗೆ ಹೋಗುತ್ತದೆ. ಸಾಮಾನ್ಯ ಸೇವೆಗಳಿಗೆ ಶೇ. ೧೮, ಕೃಷಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೆ ಶೇಕಡಾ ೧೭, ಶಿಕ್ಷಣಕ್ಕೆ ಶೇ. ೧೧ರಷ್ಟು ಖರ್ಚಾಗುತ್ತದೆ. ಒಟ್ಟಾರೆ ಲೆಕ್ಕಾಚಾರ ಮುಂದಿನ ಚಿತ್ರದಲ್ಲಿವೆ.
ರಾಜ್ಯದ ಬೊಕ್ಕಸಕ್ಕೆ ಅತಿ ಹೆಚ್ಚಿನ ಪ್ರಮಾಣದ ಹಣ ಬರುವುದು ತೆರಿಗೆಯಿಂದ!
ಬಜೆಟ್‌ನಲ್ಲಿ ಎಲ್ಲ ಯೋಜನೆಗಳಿಗೆ ಹಣ ಇಡಬೇಕು, ಹೊಸ ಯೋಜನೆ ಮಾಡಬೇಕು. ಹಾಗಿದ್ದರೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತದೆ ಎನ್ನುವುದು ಎಲ್ಲರನ್ನೂ ಕಾಡುವ ಪ್ರಶ್ನೆ. ರಾಜ್ಯ ಸರ್ಕಾರ ಸಂಗ್ರಹಿಸುವ ತೆರಿಗೆಗಳಿಂದ ಶೇ. ೫೪ ಪಾಲು ಬಂದರೆ, ಕೇಂದ್ರದಿಂದ ೧೨% ಬರುತ್ತದೆ. ಸಾಲದಿಂದ ಬರುವ ಪ್ರಮಾಣ ಶೇ. ೨೬.
ರಾಜ್ಯಕ್ಕೆ ಬರುವ ತೆರಿಗೆಯ ಲೆಕ್ಕಾಚಾರ ಹೇಗೆ? ಎಲ್ಲೆಲ್ಲಿಂದ ಬರುತ್ತದೆ?
ರಾಜ್ಯದ ತೆರಿಗೆಗಳ ಪೈಕಿ ಅತಿ ಹೆಚ್ಚು ಹಣ ಹುಟ್ಟುವುದು ವಾಣಿಜ್ಯ ತೆರಿಗೆ ವಲಯದಿಂದ. ಅಂದರೆ ಸುಮಾರು ೯೭,೦೦೦ ಕೋಟಿ ರೂ. ದೊರೆಯುತ್ತದೆ. ಅಬಕಾರಿ ಇಲಾಖೆಯಿಂದ ೩೫,೦೦೦ ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ ಶುಲ್ಕದಿಂದ ೧೯,೦೦೦ ಕೋಟಿ ರೂ. ಬರಲಿದೆ.