ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಂತೆ ರಾಜ್ಯದ ದೇವಸ್ಥಾನಗಳು ಹಾಗೂ ಮಠ ಮಾನ್ಯಗಳಿಗೆ ಭರ್ಜರಿ ಕೊಡುಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕುರಿತು ಆಯವ್ಯಯದಲ್ಲಿ (Karnataka Budget 2023) ಸಿಎಂ ಬಸವರಾಜ ಬೊಮ್ಮಾಯಿ ಘೊಷಣೆ ಮಾಡಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ 2022-23ನೇ ಸಾಲಿಗೆ ದೇವಸ್ಥಾನಗಳ ಮತ್ತು ಮಠಗಳ ಜೀರ್ಣೋದ್ದಾರ ಕಾಮಗಾರಿಗಳಿಗೆ ಒಟ್ಟು 425 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು. ಮುಂದಿನ 2 ವರ್ಷಗಳಲ್ಲಿ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ ನಮ್ಮ ಸರ್ಕಾರ 1,000 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು.
ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ಪರಿಚಯಿಸಿದ ಬಸವಾದಿ ಶರಣರು ಸ್ಥಾಪಿಸಿದ ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳ ಇನಾಂ ಜಮೀನುಗಳ ವರ್ಷಾಶನವನ್ನು 48,000 ರೂ. ಗಳಿಂದ 60,000 ರೂ. ಗಳಿಗೆ ಹೆಚ್ಚಿಸಲಾಗುವುದು. ಈ ಸೌಲಭ್ಯದಿಂದ 3,721 ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದರು.