ವಿಜಯಪುರ: ಈ ವರ್ಷದ ಬಜೆಟ್‌ನಲ್ಲಿ ಐದು ಗ್ಯಾರಂಟಿಗಳ ಕಡೆಗೆ ಗಮನಹರಿಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಮಠಮಾನ್ಯಗಳಿಗೆ ಅನುದಾನ ನೀಡಲಾಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಕೆಬಿಜೆಎನ್ಎಲ್ ಮುಳವಾಡ ಏತ ನೀರಾವರಿ ಹಂತ 3 ರಡಿಯ ಬಬಲೇಶ್ವರ ಶಾಖಾ ಕಾಲುವೆ 1 ಹಾಗೂ 2 ವಿತರಣಾ ಕಾಲುವೆ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜತೆಗೆ ಮಾತನಾಡಿದರು.
ಇದಕ್ಕೂ ಮುನ್ನ ಗದಗದಲ್ಲಿ ಮಾತನಾಡಿದ್ದ ಮಾಜಿ ಸಚಿವ ಸಿಸಿ ಪಾಟೀಲ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಠಗಳಿಗೆ ನೀಡಿದ್ದ ಅನುದಾನ ಹಿಂಪಡೆದುಕೊಂಡಿದೆ. ವೀರಶೈವ ಹಾಗೂ ಹಿಂದೂ ಪರಂಪರೆಯ ಮಠಗಳಿಗೆ ನಾವು ಅನುದಾನ ನೀಡಿದ್ದೆವು. ಆ ಮಠಗಳಿಗೆ ನೀಡಿದ್ದ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಶ್ರೀಶೈಲ ಪೀಠ, ಬಾಳೆಹೊನ್ನೂರು ರಂಭಾಪುರಿ ಪೀಠ ಸೇರಿದಂತೆ ಹಲವು ಮಠಗಳಿಗೆ ಅನುದಾನ ನೀಡಿದ್ದೆವು. ಒಂದು ಕೋಟಿ, ಎರಡು ಕೋಟಿ ರೂ…. ಹೀಗೆ ಐದು ಕೋಟಿ ತನಕ ಮಠಗಳಿಗೆ ಅನುದಾನ ಕೊಡಲಾಗಿತ್ತು.
ಆದರೆ ಅಧಿಕಾರಕ್ಕೆ ಬಂದ ತಕ್ಷಣ ಅವುಗಳೆಲ್ಲವನ್ನೂ ಹಿಂಪಡೆದಿದ್ದಾರೆ. ಆದರೆ ಇತ್ತ ಮದರಾಸಗಳಿಗೆ ಸಿಕ್ಕಾಪಟ್ಟೆ ಅನುದಾನ ನೀಡಿದ್ದಾರೆ. ಕ್ರಿಶ್ಚಿಯನ್ ಮಿಷಿನರಿಗಳಿಗೆ ಸಿಕ್ಕಾಪಟ್ಟೆ ಅನುದಾನ ನೀಡಿದ್ದಾರೆ. ಒಟ್ಟಾರೆ ಹಿಂದೂ ವಿರೋಧಿ ಸರ್ಕಾರ ಅನ್ನೋದನ್ನ ಈ ಬಜೆಟ್ ಸಾಬೀತುಪಡಿಸಿದೆ. ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಿಜೆಪಿ ಸರ್ಕಾರ ಐದು ಕೋಟಿ ರೂ. ಅನುದಾನ ನೀಡಿತ್ತು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಅನ್ನೋ ಸಂದೇಶ ಸಾರಿದ ಪೀಠ ಅದು. ಅಕ್ಬರ್, ಆಂಟನಿ ಫುಲ್ ಖುಷ್, ಅಮರ್ ಮಟ್ಯಾಶ್ ಎನ್ನುವುದು ಈ ಬಜೆಟ್ ಸಾರ ಎಂದಿದ್ದರು.
ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ನಮಗೆ ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಈ ವರ್ಷ ನಾವು ಗ್ಯಾರಂಟಿಗಳಿಗೆ ಆದ್ಯತೆ ನೀಡಿದ್ದೇವೆ. ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ. ಸಿ. ಸಿ. ಪಾಟೀಲರ ಮಠ ಇದ್ದರೂ ಹೇಳಲಿ. ನಾವು ಬೇದ-ಭಾವ ಮಾಡಲ್ಲ ಎಲ್ಲರಿಗೂ ಅನುದಾನ ಕೊಡ್ತೇವೆ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಹಣಕಾಸಿನ ಅನುದಾನ ಕೊಡುತ್ತೇವೆ. ಒಂದು ವರ್ಷ ಸಿ. ಸಿ. ಪಾಟೀಲರಿಗೆ ತಾಳ್ಮೆ ಇರಲಿ ಎಂದರು.
ಸಿ. ಸಿ. ಪಾಟೀಲರು ತಮ್ಮ ಬಜೆಟ್‌ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಪಾಟೀಲ್‌ರು ಯಾಕೆ ಹೆಚ್ಚು ಖರ್ಚು ಮಾಡಿದರು? ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್‌ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ? ಜನರನ್ನ ಯಾಕೆ ಮರಳು ಮಾಡಿದ್ದೀರಿ? ಇದರ ಹಿಂದಿನ ಉದ್ದೇಶ ಏನು ಹಾಗಿದ್ರೆ? ಬಿಬಿಎಂಪಿಯಲ್ಲು ಭ್ರಷ್ಟಾಚಾರ ಮಾಡಿದ್ದಾರೆ. ಲೂಟಿ ಹೊಡೆಯಲು ಬಜೆಟ್‌ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದೀರಿ. ಬಜೆಟ್ ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು..? ನೀವು ಮಾಡಿದ ಅಕ್ರಮಗಳನ್ನ, ಅಶಿಸ್ತನ್ನ ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೆ ಹೇಳಿ ಬಿಟ್ಟಿದ್ದಾರೆ. ಇವರ ಮುಖ ಏನೂ ಉಳಿದಿಲ್ಲ, ಇವರನ್ನ ಸಿಎಂ ಎಕ್ಸಪೋಸ್ ಮಾಡಿದ್ದಾರೆ ಎಂದರು.
2013ರಲ್ಲಿ ಜಲ ಸಂಪನ್ಮೂಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗ ಜನರ ನಿರೀಕ್ಷೆ ಮೀರಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೇರಣೆಯಿಂದ ಕೆಲಸ ಮಾಡಿದ್ದೇನೆ. ಈಗಾ ಚುನಾವಣೆ ಮುಗಿದಿದೆ. ಎಬಿಜೆಎನ್ಎಲ್ ಹಂತ 3 ರಡಿಯಲ್ಲಿ ಹೆಡ್ ವರ್ಕ್ ಸ್ಥಾವರ ಮಾಡಿ 1000 ಕಿಮೀ ಕಾಲುವೆ ಮಾಡಿದ್ದೇನೆ. ಹಳ್ಳ ಕೆರೆಗಳಿಗೆ ನೀರು ಕೊಟ್ಟಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮತ್ತೊಂದು ‘ಹೊಲಸು’ ಕೃತ್ಯ; ಇಬ್ಬರು ದಲಿತರಿಗೆ ಮಲ ತಿನ್ನುವಂತೆ ಒತ್ತಾಯಿಸಿದ ಮುಸ್ಲಿಮರು
ಕುಮಾರಸ್ವಾಮಿ ಪೆನ್‌ಡ್ರೈವ್ ಹೊಂದಿರುವ ಕುರಿತು ಪ್ರತಿಕ್ರಿಯಿಸಿ, ಪೆನ್‌ಡ್ರೈವ್ ಒಳಗೆ ಸತ್ಯವಾದದ್ದು ಇದ್ದರೆ ತನಿಖೆ ಮಾಡಬೇಕಾಗತ್ತೆ. ಎಚ್‌ಡಿಕೆ ಬಿಡುಗಡೆ ಮಾಡುವ ಪೆನ್‌ಡ್ರೈವ್ ಬಗ್ಗೆ ತನಿಖೆ ಮಾಡಬೇಕಾಗುತ್ತೆ. ಪೆನ್‌ಡ್ರೈವ್‌ನಲ್ಲಿರುವ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ. ವಾಯ್ಸ್ ಡಿಟೆಕ್ಷನ್ ಸರಿಯಾಗಿದೆಯಾ ಎನ್ನೊದನ್ನ ಕೇಳ್ಬೇಕಾಗುತ್ತೆ. ಈಗೆಲ್ಲ ಮಿಮಿಕ್ರಿ ಬೇರೆ ಮಾಡ್ತಾರೆ. ಯಾರು ಮಾತನಾಡಿದ್ದಾರೆ, ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಲ್ಲವು ಕೂಡ ತನಿಖೆಯಾಗಬೇಕಾಗತ್ತೆ. ಅವರು ಬಿಡುಗಡೆ ಮಾಡಿದಾಗ ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.