Site icon Vistara News

Karnataka Budget 2023:‌ ರಾಮನಗರದಲ್ಲಿ ರಾಮಮಂದಿರ, ಕೆಂಪೇಗೌಡ ಪ್ರವಾಸಿ ಸರ್ಕಿಟ್‌, ಮಂಚನಬೆಲೆಯಲ್ಲಿ ರೆಸಾರ್ಟ್: ಪ್ರವಾಸೋದ್ಯಮಕ್ಕೂ ಉಂಟು ಅನುದಾನ

Anjanadri-hill-1

ಬೆಂಗಳೂರು: ರಾಮನಗರದ ರಾಮದೇವರ ಬೆಟ್ಟದಲ್ಲಿ ಒಂದು ಭವ್ಯವಾದ ರಾಮಮಂದಿರ ನಿರ್ಮಾಣ, ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್ ಯೋಜನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೂತನ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ರಾಜ್ಯದ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುವುದಕ್ಕಾಗಿ ಹಲವು ನೂತನ ಉಪಕ್ರಮಗಳನ್ನು ಆಯವ್ಯಯದಲ್ಲಿ ಕೈಗೊಳ್ಳಲಾಗಿದೆ. ಅವುಗಳು ಈ ಕೆಳಗಿನಂತಿವೆ:

೧. ಆಂಜನೇಯ ಜನ್ಮಸ್ಥಳವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಒಳಗೊಂಡ ವಿಸ್ತೃತವಾದ ಯೋಜನೆಯನ್ನು ತಯಾರಿಸಿ, ಟೆಂಡರ್‌ ಕರೆಯಲಾಗಿದೆ.

೨. ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ C.R.Z ಮಾನದಂಡಗಳನ್ನು ಸಡಿಲಗೊಳಿಸುವುದಕ್ಕೆ ಕೇಂದ್ರ ಸರ್ಕಾರವು ಒಪ್ಪಿರುವ ಹಿನ್ನೆಲೆಯಲ್ಲಿ ಕರಾವಳಿ ವಲಯ ನಿರ್ವಹಣೆ ಯೋಜನೆ ಜಾರಿಗೊಳಿಸುವ ಮೂಲಕ ಧಾರ್ಮಿಕ, ಸಾಹಸ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಉತ್ತೇಜನ.

೩. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ʻಪ್ರಸಾದ್ʼ ಯೋಜನೆಯಡಿ ಮೈಸೂರಿನ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ, ಸ್ವದೇಶ್ ದರ್ಶನ್ 2.0 ಅಡಿಯಲ್ಲಿ ಹಂಪಿಯ ಸ್ಮಾರಕ ಅಭಿವೃದ್ಧಿ, ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶಾಶ್ವತ ಸೌಲಭ್ಯ.

೪. ಸಂತ ಸೇವಾಲಾಲ್‌ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪ 5 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ.

೫. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್ ಸಮಾಧಿ ಸ್ಥಳ 5 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ.

೬. ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಲಾದ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನ ಅಭಿವೃದ್ಧಿ.

೭. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಪ್‌-ವೇ ನಿರ್ಮಾಣ ಕಾಮಗಾರಿ.

೮. 398 ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ 2,000 ರೂ.ನಿಂದ 5,000 ರೂ. ಗಳಿಗೆ ಹೆಚ್ಚಳ.

೯. ಕರ್ನಾಟಕದ ಇತಿಹಾಸ ಮತ್ತು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ಹಂಪಿಯ ವಿಜಯವಿಠಲ ದೇವಾಲಯ ಮತ್ತು ಪುರಂದರ ಮಂಟಪ, ವಿಜಯಪುರದ ಗೋಲ್ ಗುಂಬಜ್, ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್ ಕೋಟೆ ಅಭಿವೃದ್ಧಿ. ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3D projection mapping, ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕಾಗಿ 60 ಕೋಟಿ ರೂ. ಅನುದಾನ.

೧೦. Adopt a Monument ಯೋಜನೆಯಡಿ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ್‌ ಮಹಲ್‌ ಮತ್ತು ವಿಜಯಪುರ ನಗರದ ತಾಜ್‌ ಬಾವಡಿ ಸ್ಮಾರಕಗಳ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ.

೧೧. ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ.

೧೨. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಎರಡೂವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

೧೩. ರಾಣಿ ಚೆನ್ನಭೈರಾದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ʻಚೆನ್ನಭೈರಾದೇವಿ ಸ್ಮಾರಕ ಉದ್ಯಾನʼ ನಿರ್ಮಾಣ.

ಇದನ್ನೂ ಓದಿ: Karnataka Budget 2023: ಜೀವಸುಧೆಯಿಂದ ವಾತ್ಸಲ್ಯದವರೆಗೆ; ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳು ಏನೇನು?

೧೪. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ʻರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ʼನಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ಉತ್ತೇಜನ, ಮೂಲಭೂತ ಸೌಕರ್ಯಕ್ಕೆ ಕ್ರಮ.

೧೫. ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ 10 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಲಿ. ಮೂಲಕ ರೆಸಾರ್ಟ್ ನಿರ್ಮಾಣ.

೧೬. ಕಲಬುರಗಿ ಜಿಲ್ಲೆಯಲ್ಲಿರುವ ಸನ್ನತಿ-ಚಂದ್ರಲಾಂಬಾ ದೇವಾಲಯ, ಗಾಣಗಾಪುರ ದತ್ತಾತ್ರೇಯ ದೇವಾಲಯ, ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯ ಮಧುಕೇಶ್ವರ ದೇವಾಲಯ ಸಂಕೀರ್ಣಗಳ ಸಮಗ್ರ ಅಭಿವೃದ್ಧಿಗೆ ಅನುದಾನ.

೧೭. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿರುವ ಮಳಖೇಡ ಕೋಟೆ ಸಂರಕ್ಷಣೆ ಕಾಮಗಾರಿಗೆ 20 ಕೋಟಿ ರೂ. ಗಳ ವೆಚ್ಚದ ಅನುಮೋದನೆ.

೧೮. ರಕ್ಕಸಗಿ, ತಂಗಡಗಿ ಮತ್ತು ತಾಳಿಕೋಟೆ ಸುತ್ತಲಿನ ಐತಿಹಾಸಿಕ ಪ್ರಸಿದ್ಧ ತಾಣಗಳ ಅಭಿವೃದ್ಧಿ.

ಇದನ್ನೂ ಓದಿ: Karnataka Budget 2023: ಕನ್ನಡ ತಾಯಿ ಭುವನೇಶ್ವರಿಯ ಬೃಹತ್‌ ಮೂರ್ತಿ, ಥೀಮ್‌ ಪಾರ್ಕ್: ಸಿಎಂ ಘೋಷಣೆ

Exit mobile version