ಬೆಂಗಳೂರು: ರಾಜ್ಯದ ಇತಿಹಾಸದಲ್ಲೆ ಅತಿ ಹೆಚ್ಚು ಬಾರಿ ಬಜೆಟ್ (Karnataka Budget 2023) ಮಂಡಿಸಿದ ಖ್ಯಾತಿಗೆ ಸಿಎಂ ಸಿದ್ದರಾಮಯ್ಯ ಶುಕ್ರವಾರ ಪಾತ್ರವಾಗಲಿದ್ದಾರೆ. ಈಗಾಗಲೆ 13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ರಾಮಕೃಷ್ಣ ಹೆಗಡೆ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಇದೀಗ 14ನೇ ಬಜೆಟ್ ಮಂಡಿಸಲಿದ್ದಾರೆ.
ಈ ವರ್ಷ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಒಂದು ಬಜೆಟ್ ಮಂಡಿಸಿದ್ದಾರೆ. ಹಾಗಾಗಿ ಇದು ಈ ಹಣಕಾಸು ವರ್ಷದಲ್ಲಿ ಎರಡನೇ ಬಜೆಟ್ ಆಗಲಿದೆ. ಮುಂದಿನ ಎಂಟು ತಿಂಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. ಮುಖ್ಯವಾಗಿ ಕಾಂಗ್ರೆಸ್ ಪಕ್ಷವು ಚುನಾವಣೆಗೆ ಮುನ್ನ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವಿಕೆ ಕುರಿತು ಕುತೂಹಲವಿದೆ.
ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಗಾತ್ರ 3.09 ಲಕ್ಷ ಕೋಟಿ ರೂ. ಇತ್ತು. ಗ್ಯಾರಂಟಿ ಯೋಜನೆಗಳಿಗೆ ಅಂದಾಜು 59 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಸಿದ್ದರಾಮಯ್ಯ ಹೇಳಿದ್ದು, ಅದಕ್ಕೆ ಹಣ ಹೊಂದಿಸಲು ಶೇ. 8ಬಜೆಟ್ ಗಾತ್ರ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಅಂದರೆ ಒಟ್ಟು ಬಜೆಟ್ ಗಾತ್ರ 3.4 ಲಕ್ಷ ಕೋಟಿ ರೂ. ಆಗಬಹುದು ಎನ್ನಲಾಗಿದೆ. ಈ ಹಣವನ್ನು ಹೊಂದಿಸಲು ಸುಮಾರು 30 ಸಾವಿರ ಕೋಟಿ ರೂ. ಸಾಲವನ್ನು ಸರ್ಕಾರ ಮಾಡುವ ಸಾಧ್ಯತೆಯಿದೆ. ಇನ್ನು 30 ಸಾವಿರ ಕೋಟಿ ರೂ. ಹೊಂದಿಸಲು ತೆರಿಗೆ ಇಲಾಕೆಗೆ ಗುರಿ ಹೆಚ್ಚಳ ಮಾಡಲಾಗುತ್ತದೆ. ಜತೆಗೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ, ಇಂಧನದ ಮೇಲಿನ ತೆರಿಗೆಗಳಲ್ಲಿ ಸರ್ಕಾರ ಹೆಚ್ಚಳ ಮಾಡುವುದೇ ಎಂಬ ಕುತೂಹಲವಿದೆ.
ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ಜನರ ಮೇಲೆ ಹೆಚ್ಚಿನ ತೆರಿಗೆ ಹಾಕದೆ, ಹೆಚ್ಚಿನ ಸಾಲ ಮಾಡದೇ ಐದೂ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಬೇಕು. ಇದರ ಹೊರತಾಗಿ ತೆರಿಗೆ ಹಾಕಿದರೆ ಜನ ವಿರೋಧಿ ಗ್ಯಾರಂಟಿಗಳಾಗುತ್ತವೆ.
ಇದನ್ನೂ ಓದಿ: 7th Pay Commission : ಬಜೆಟ್‌ನಲ್ಲಿ 7ನೇ ವೇತನ ಆಯೋಗ ಜಾರಿಗೆ ಅನುದಾನ; ನೌಕರರ ಸಂಘದಿಂದ ಸಿಎಂಗೆ ಮನವಿ
ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಾಗಿದೆ. ಇತರ ಟ್ಯಾಕ್ಸ್ ಸಂಗ್ರಹ ಕೂಡ ಹೆಚ್ಚಾಗಿದೆ. ಈ ಸರ್ಕಾರ ಹೆಚ್ಚಿನ ಸಾಲ ತೆಗೆದುಕೊಳ್ಳುವ ಅಗತ್ಯವಿಲ್ಲ. ನಾನು ಉಳಿತಾಯ ಬಜೆಟ್ ಮಂಡನೆ ಮಾಡಿದ್ದೇನೆ. 78 ಸಾವಿರ ಕೋಟಿ ರೂ. ಸಾಲ ತೆಗೆದುಕೊಳ್ಳಲು ಅವಕಾಶ ಇದೆ, ಅಷ್ಟು ಮಾತ್ರ ತೆಗೆದುಕೊಂಡರೆ ಸಾಕು. ಮೂಲ ಸೌಕರ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಮೀಸಲಿಟ್ಟ ಹಣವನ್ನು ಬಳಕೆ ಮಾಡಬಹುದು. ಎಲ್ಲ ನೀರಾವರಿ ಯೋಜನೆ, ಶಿಕ್ಷಣ ಇಲಾಖೆ ಯೋಜನೆ, ಕೃಷಿ ಹಾಗೂ ಸೇವಾ ವಲಯಕ್ಕೆ ಆದ್ಯತೆ ನೀಡಬೇಕು. ಅದನ್ನು ಬಿಟ್ಟು ಜನರ ದುಡ್ಡನ್ನು ಕಸಿದುಕೊಂಡು ಇನ್ನೊಂದು ಕಡೆ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.