ಬೆಂಗಳೂರು: ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತವನ್ನು ತಡೆಗಟ್ಟಲು ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥವಾಗಿ ಹೊಸ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ತಮ್ಮ ಬಜೆಟ್ನಲ್ಲಿ (Karnataka Budget 2023) ಘೋಷಿಸಿದ್ದಾರೆ.
ಕರ್ನಾಟಕ ರತ್ನ ಡಾ|| ಪುನೀತ್ ರಾಜ್ಕುಮಾರ್ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಆರೋಗ್ಯ ಇಲಾಖೆ ಕುರಿತ ಇನ್ನಿತರೆ ಘೋಷಣೆಗಳು
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಏಕಬಳಕೆಯ ಡಯಾಲೈಸರ್ಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 173 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 92 ಕೋಟಿ ರೂ. ಗಳನ್ನು ಒದಗಿಸಲಾಗುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಈಗಾಗಲೇ 23 PHC ಗಳನ್ನು CHC ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ CHC ಗಳನ್ನು ಕಾರ್ಯಗತಗೊಳಿಸಲು ಬೇಕಿರುವ ಅಗತ್ಯ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಲು 70 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರವಾದ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 25 ಕೋಟಿ ರೂ. ಗಳನ್ನು ಒದಗಿಸಲಾಗುವುದು.
- ರಾಜ್ಯವು ಕಳೆದ ವರ್ಷ ನಿಮ್ಹಾನ್ಸ್ ಸಹಯೋಗದೊಂದಿಗೆ ಮೆದುಳಿನ ಆರೋಗ್ಯ ಆರೈಕೆ ಸೇವೆಗಳನ್ನು ಉತ್ತೇಜಿಸಲು ಮೂರು ಜಿಲ್ಲೆಗಳಲ್ಲಿ ʻಬ್ರೈನ್ ಹೆಲ್ತ್ ಇನಿಶಿಯೇಟಿವ್ʼ (Brain Health Initiative) ಎಂಬ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಯಶಸ್ವಿ ಪ್ರಾಯೋಗಿಕ ಅನುಷ್ಠಾನದ ನಂತರ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
- ʻಆಶಾಕಿರಣʼ ಎಂಬ ಕಾರ್ಯಕ್ರಮದಡಿಯಲ್ಲಿ ಅಭಿಯಾನ ರೂಪದಲ್ಲಿ ಕಣ್ಣಿನ ಶಿಬಿರಗಳು, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಚಟುವಟಿಕೆಗಳನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು. 2023-24ನೇ ಸಾಲಿನಲ್ಲಿ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
- ಸಮಾಜದ ದುರ್ಬಲ ವರ್ಗಗಳಲ್ಲಿ ಕ್ಷಯರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಮುದಾಯ ಆಧಾರಿತ ತಪಾಸಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ, ಪ್ರತಿ ಜಿಲ್ಲೆಗೆ ಎರಡರಂತೆ ಕೈಚಾಲಿತ-ಕ್ಷ-ಕಿರಣ (Hand Held X-ray) ಉಪಕರಣವನ್ನು ಒದಗಿಸಲಾಗುವುದು. ಪ್ರತಿ X-ray ಯಂತ್ರಕ್ಕೆ 20 ಲಕ್ಷ ರೂ. ದಂತೆ ಒಟ್ಟು ಮೂರು ಕೋಟಿ ರೂ. ಒದಗಿಸಲಾಗುವುದು.
- ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಔಷಧಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ವಿಭಾಗಗಳ ಎಂಟು ಜಿಲ್ಲೆಗಳಲ್ಲಿ ಸಮಗ್ರ ತಪಾಸಣೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು.
- ರಾಜ್ಯದಲ್ಲಿ 15 ಸಿ.ಟಿ ಸ್ಕ್ಯಾನಿಂಗ್ ಮತ್ತು ಆರು ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರಗಳನ್ನು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಈಗಾಗಲೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಉಚಿತ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು.
- ರಾಜ್ಯವು ಈಗಾಗಲೇ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಆರೋಗ್ಯ ತಂತ್ರಜ್ಞಾನದ ಆವಿಷ್ಕಾರಗಳ ಅಳವಡಿಕೆಯಲ್ಲಿಯೂ ಪ್ರಮುಖ ಕೇಂದ್ರವಾಗುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.
- ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಹಾಗೂ ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣ ಸೇರಿದಂತೆ ಇಲಾಖೆಯ ಇನ್ನಿತರ ಎಲ್ಲಾ ಅಂತರ್ಜಾಲ ಉಪಕ್ರಮಗಳನ್ನು ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು (Karnataka Digital Health Society) ಸ್ಥಾಪನೆ ಮಾಡಲಾಗುವುದು.
ಇದನ್ನೂ ಓದಿ: Karnataka Budget 2023: ಸರ್ವರಿಗೂ ಸಮಬಾಳು; ಸರ್ವರಿಗೂ ತೆರಿಗೆ ಗೋಳು; ಸಿದ್ದು ಬಜೆಟ್ನ ಲೈವ್ ಮಾಹಿತಿ ಇಲ್ಲಿದೆ