Site icon Vistara News

Karnataka Budget 2024: ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ ಮಂಡನೆ; ನಾಮನಿರ್ದೇಶನ ಸಂಖ್ಯೆ 3ಕ್ಕೆ ಹೆಚ್ಚಳ

Karnataka Budget 2024 Karnataka Co operative Societies Amendment Bill introduced

ಬೆಂಗಳೂರು: ಸುದೀರ್ಘ ಚರ್ಚೆಯ ಬಳಿಕ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ-2024 (Karnataka Co-operative Societies (Amendment) Bill 2024) ಅಂಗೀಕಾರವಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ (KN Rajanna) ಮಂಡಿಸಿದ್ದ ಬಿಲ್ ಇದಾಗಿತ್ತು. ಈ ವೇಳೆ ನಿಯಮಗಳನ್ನು ‌ಮಾಡುವಾಗ ಕೆಲವೊಂದು ತಿದ್ದುಪಡಿ ಮಾಡುವಂತೆ ಸದನದಲ್ಲಿ (Karnataka Budget 2024) ಸಲಹೆಗಳು ಕೇಳಿಬಂದವು. ಅದಕ್ಕೆ ಪ್ರತಿಕ್ರಿಯೆ ನೀಡಿದ ರಾಜಣ್ಣ, ಸಲಹೆಗಳೊಂದಿಗೆ ಪರಿಷ್ಕರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಧೇಯಕವನ್ನು ಅಂಗೀಕಾರ ಮಾಡಲಾಯಿತು.

ಸಹಕಾರಿ ಸಂಘಗಳಲ್ಲಿ ಸರ್ಕಾರ ಮಾಡುವ ನಾಮನಿರ್ದೇಶನಗಳ ಸಂಖ್ಯೆಯನ್ನು 3ಕ್ಕೆ ಹೆಚ್ಚಳ ಮಾಡಲು ತಿದ್ದುಪಡಿ ಮಾಡಲಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಪ್ರಾತಿನಿಧ್ಯ ಒದಗಿಸುವ ಉದ್ದೇಶವನ್ನು ಈ ವಿಧೇಯಕ ಹೊಂದಿದೆ. ಅಲ್ಲದೆ, ಅನಗತ್ಯ ವೆಚ್ಚ ಕಡಿತಕ್ಕಾಗಿ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಲು ನಿರ್ಧಾರ ಮಾಡಲಾಗಿದೆ.

ಏನು ಈ ಕರ್ನಾಟಕ ಸಹಕಾರ ಸಂಘಗಳ (ತಿದ್ದುಪಡಿ) ವಿಧೇಯಕ?

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 20ರ ಉಪ ಪ್ರಕರಣ (2)ರ (ಎ-iv) ಮತ್ತು (ಎ-v) ಖಂಡದ ಉಪಬಂಧಗಳನ್ನಜ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಸಂಖ್ಯಾತ ರಿಟ್ ಅರ್ಜಿಗಳು ದಾಖಲಾಗಿವೆ ಮತ್ತು ಉಚ್ಚ ನ್ಯಾಯಾಲಯವು ಎಲ್ಲ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸುತ್ತದೆ. ಆದ್ದರಿಂದ ಎಲ್ಲ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತ್ರಿ ಪಡಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28 ಎ (3)ರ ಉಪ ಪ್ರಕರಣ (3)ರಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಮಂಡಳಿಯಲ್ಲಿ ಅನುಸೂಚಿತ ಜಾತಿಗಳು/ಅನುಸೂಚಿತ ಬುಡಕಟ್ಟುಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ. ಅದಕ್ಕನುಸಾರವಾಗಿ, ಮಾಧ್ಯಮಿಕ ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 28-ಎ ರ (4 ಬಿ) ಉಪ ಪ್ರಕರಣವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಡಳಿಯನ್ನು ಹೊರತುಪಡಿಸಿ ಪ್ರತಿಯೊಂದು ನೆರವು ಪಡೆದ ಸಂಘದ ಮಂಡಳಿಯಲ್ಲಿನ ಪ್ರಾತಿನಿಧ್ಯಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುವುದಕ್ಕಾಗಿ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸರ್ಕಾರದ ನಾಮನಿರ್ದೇಶನವನ್ನು ವಿಸ್ತರಿಸಲು ಮತ್ತು ಸಹಕಾರ ಚಳುವಳಿಯಲ್ಲಿ ಸಮಾಜದ ವಂಚಿತ ಹಾಗೂ ಪ್ರಾತಿನಿಧ್ಯ ಇರದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಹಾಗೂ ಅವಕಾಶವನ್ನು ಕಲ್ಪಿಸುವ ಸದುದ್ದೇಶದಿಂದ ಸರ್ಕಾರದ ನಾಮ ನಿರ್ದೇಶನ ಸ್ಥಾನಗಳ ಸಂಖ್ಯೆಯನ್ನು ಮೂರಕ್ಕೆ (ಒಂದು ಸ್ಥಾನ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳ ಸದಸ್ಯರಿಗಾಗಿ ಒಂದು ಸ್ಥಾನವನ್ನು ಮಹಿಳೆಯರಿಗಾಗಿ ಹಾಗೂ ಇನ್ನೊಂದು ಸ್ಥಾನವನ್ನು ಇತರೆ ಪ್ರವರ್ಗ ಪ್ರವರ್ಗಗಳಿಗಾಗಿ ಮೀಸಲಿಸುವುದು) ಹೆಚ್ಚಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿತ್ತು.

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ: ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ರ 20 ಬಿ ಪ್ರಕರಣದ ಉಪಪ್ರಕರಣ (1)ರ (ಸಿ)ಖಂಡದ ಉಪಪ್ರಕರಣ (1) ಮತ್ತು (2) ರ ಉಪಬಂಧಗಳನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಸಂಖ್ಯಾತ ರಿಟ್ ಅರ್ಜಿಗಳು ದಾಖಲಾಗಿವೆ. ಉಚ್ಚನ್ಯಾಯಾಲಯವು ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸಿರುತ್ತದೆ. ಆದ್ದರಿಂದ ಎಲ್ಲ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತರಿಪಡಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿತ್ತು.

ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸಿಗನುಸಾರವಾಗಿ ಮತ್ತು ಸಹಕಾರಿ ಚುನಾವಣೆ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಹಕಾರಿ ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸಿ, ರಿಜಿಸ್ಟ್ರಾರ್ ನಿಯಂತ್ರಣದಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ರಪ್ರಕರಣ 39 ಎಎ-ಗೆ ತಿದ್ದುಪಡಿ ತರುವ ತತ್ಪರಿಣಾಮವಾಗಿ 26 ಎ ಪ್ರಕರಣಕ್ಕೆ ತಿದ್ದುಪಡಿ ಮಾಡಲು ಪ್ರಸ್ರಾಪಿಸಲಾಗಿದೆ.

ಸದನದಲ್ಲಿ ಗಂಭೀರ ಚರ್ಚೆ

ಇದಕ್ಕೂ ಮೊದಲು ವಿಧಾನಸಭೆಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.‌ ರಾಜಣ್ಣ, ಸಹಕಾರಿ ಸಂಘಗಳಲ್ಲಿ ಕೆಲ ಲೋಪದೋಷಗಳಿವೆ. ಕೆಲವನ್ನು ನಾವು ಹೇಳಿದರೆ ಹಣ ಇಟ್ಟವರಿಗೆ ತೊಂದರೆ ಆಗುತ್ತದೆ. ಕೆಲವು ಕಡೆ ಬ್ಯಾಲೆನ್ಸ್ ಶೀಟ್ ಹೊಂದಾಣಿಕೆ ಆಗುತ್ತಿಲ್ಲ. ನಾನು ಎಲ್ಲವನ್ನೂ ಬಹಿರಂಗವಾಗಿ ಹೇಳುವುದಕ್ಕೆ ಆಗುವುದಿಲ್ಲ ಎಂದು ಸಹಕಾರ ಸಂಘಗಳ ಗೋಲ್ಮಲ್ ಬಗ್ಗೆ ಸೂಕ್ಷ್ಮವಾಗಿ ವಿವರಿಸಿದರು. ಬಳಿಕ ಸದನದಲ್ಲಿ ಕೆಲವು ತಿದ್ದುಪಡಿಗಳ ಸಲಹೆಗಳು ಕೇಳಿಬಂದವು. ಅವುಗಳಿಗೆ ರಾಜಣ್ಣ ಒಪ್ಪಿದ್ದರಿಂದ ಸದನದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕಕ್ಕೆ ಒಪ್ಪಿಗೆ ದೊರೆಯಿತು.

ಸಿದ್ದು ಸವದಿ ವರ್ಸಸ್ ಮಳವಳ್ಳಿ ನರೇಂದ್ರ ಸ್ವಾಮಿ

ಸಹಕಾರ ಸಂಘಗಳ ತಿದ್ದುಪಡಿ ಕಾಯಿದೆ ಮೇಲೆ ಚರ್ಚೆ ನಡೆಯುವಾಗ ಸಿದ್ದು ಸವದಿ ಹಾಗೂ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ನಡುವೆ ವಾಕ್ಸಮರ ನಡೆಯಿತು. ಈ ವಿಧೇಯಕಕ್ಕೆ ತಿದ್ದುಪಡಿ ತರುವ ಮೂಲಕ ಇದನ್ನು ಗಂಜಿ ಕೇಂದ್ರ ಮಾಡಲಾಗುತ್ತಿದೆ ಎಂದ ಸಿದ್ದು ಸವದಿ ಪ್ರಸ್ತಾಪ ಮಾಡಿದರು. ಸದಸ್ಯರ ನೇರ ನೇಮಕಾತಿಗೆ ಆಕ್ಷೇಪವನ್ನು ವ್ಯಕ್ತಪಡಿಸಿ, ಇದೊಂದು ಗಂಜಿ ಕೇಂದ್ರವಾದಂತೆ ಆಗಿದೆ. ಒಂದು ಸಮುದಾಯಕ್ಕೆ ಅವಕಾಶ ಕೊಡಲು ಇದನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದು ಸವದಿ ಅವರ ಈ ಮಾತಿಗೆ ನರೇಂದ್ರ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ದಲಿತರನ್ನು ನೀವು ಏನೆಂದು ಅಂದುಕೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದ ನರೇಂದ್ರ ಸ್ವಾಮಿ, ಅದು ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು. ಈ ವೇಳೆ ಗಂಜಿ ಕೇಂದ್ರ ಎಂಬ ಪದ ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಕೆ.ಎನ್ ರಾಜಣ್ಣ ಅವರು ಕಡತದಿಂದ ತೆಗೆಯುವಂತೆ ಹೇಳಿದರು.

ಈ ವೇಳೆ ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ನಾವು ಮೀಸಲಾತಿ ಇದ್ದಿದ್ದರಿಂದ ಇಲ್ಲಿಗೆ ಬಂದೆ. ಕೆಲವರು ಮೀಸಲಾತಿ ವಿರುದ್ಧ ಇದ್ದಾರೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ನಾವು ಯಾರೂ ಸಹ ಮೀಸಲಾತಿಗೆ ವಿರೋಧ ಮಾಡಿಲ್ಲ. ನಿಮಗೆ ದಲಿತರ ಮೇಲೆ ಪ್ರೀತಿ ಇದ್ದರೆ ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಿ. ಒಬ್ಬ ಸ್ವಚ್ಚಾರಿತ್ರವುಳ್ಳ ಪರಮೇಶ್ವರ್ ಸಿಎಂ ಆಗಲಿ. ಮೀಸಲಾತಿಯನ್ನು ಹೆಚ್ಚು ಮಾಡಿದ್ದು ಅಟಲ್‌ ಬಿಹಾರಿ ವಾಜಪೇಯಿ. ಇಲ್ಲಿ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರು ಹೆಚ್ಚಿಗೆ ಮಾಡಿದ್ದರು. ನಿಮಗೆ ದಮ್ಮು ತಾಕತ್ತು ಇದ್ದರೆ ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ: Residential Schools: ಜ್ಞಾನ ದೇಗುಲ ವಿವಾದ; ಘೋಷವಾಕ್ಯ ಬದಲಿಸಲು ಆದೇಶವನ್ನೇ ಹೊರಡಿಸಿಲ್ಲ; ಸಚಿವ ಮಹದೇವಪ್ಪ

ಈ ವೇಳೆ ಎದ್ದು ನಿಂತ ಶಾಸಕ ಲಕ್ಷ್ಮಣ ಸವದಿ, ನಾವು ನೀವು ಸೇರಿ ಸಿದ್ದರಾಮಯ್ಯ ಅವರ ಮನವೊಲಿಸಿ ಪರಮೇಶ್ವರ್‌ ಅವರನ್ನು ಸಿಎಂ ಮಾಡೋಣ. ಆದರೆ, ದೇಶಕ್ಕೆ ಪ್ರಧಾನಿಯನ್ನಾಗಿ ದಲಿತರನ್ನು ಮಾಡೋಣ ಎಂದು ಸಲಹೆ ನೀಡಿದರು. ನಿಮಗೆ ದಮ್ಮು ತಾಕತ್ತು ಇದ್ದರೆ ಪಿಎಂ ಆಗಿ ದಲಿತರನ್ನು ಮಾಡುತ್ತೇವೆ ಅಂತ ಘೋಷಣೆ ಮಾಡಿ ಎಂದು ಪ್ರತಿ ಸವಾಲು ಹಾಕಿದರು.

Exit mobile version