ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಗ್ಯಾರಂಟಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಸಿದ್ದರಾಮಯ್ಯ (Siddaramaiah) ಅವರು ಕೃಷಿಕರು, ಮಹಿಳೆಯರು, ಹಿಂದುಳಿದವರು ಸೇರಿ ಸರ್ವರ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಬಜೆಟ್‌ನ ಕ್ಷಣಕ್ಷಣದ ಮಾಹಿತಿ (Karnataka Budget 2024 Live Updates) ಇಲ್ಲಿ ಲಭ್ಯ ಇದೆ.
ಬಸವಣ್ಣನ ಜನ್ಮಸ್ಥಳ ಅಭಿವೃದ್ಧಿಗೆ ನಿರ್ಧಾರ
ಬಸವಣ್ಣನವರ ಜನ್ಮಸ್ಥಳದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಾಧಿಕಾರ ರಚನೆಯ ಘೋಷಣೆ ಮಾಡಿದ್ದಾರೆ. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಹಾಗೆಯೇ, ಕಲಬುರಗಿಯಲ್ಲಿ ವಚನ ಮಂಟಪ ನಿರ್ಮಿಸಲಾಗುವುದು ಎಂದು ಹೇಳಿದರು. ಹಾಗೆಯೇ, ನಾಮಫಲಕಗಳಲ್ಲಿ ಶೇ.65ರಷ್ಟು ಕನ್ನಡ ಕಡ್ಡಾಯ, ಜಾನಪದ ಕಲೆಗಳ ಪುನರುಜ್ಜೀವನಕ್ಕೆ ಅನುದಾನ, ನಾರಾಯಣಗುರು, ಜ್ಯೋತಿಬಾ ಫುಲೆ, ಪೆರಿಯಾರ್, ರಾಮಸ್ವಾಮಿ, ಲೋಹಿಯಾ ಬರಹ ಕನ್ನಡಕ್ಕೆ ಅನುವಾದಕ್ಕೆ ಕ್ರಮ. ಕೀರ್ತನೆಗಳ ಪ್ರಚಾರಕ್ಕೆ 1 ಕೋಟಿ ರೂ. ಮೀಸಲಿಡಲಾಗುವುದು. ಕಲಬುರಗಿ ವಿವಿಯಲ್ಲಿ ತತ್ವಪದ, ಸೂಫಿ ಅಧ್ಯಯನ ಪೀಠ ಸ್ಥಾಪನೆ. ಸರ್ವಜ್ಙನ ಸ್ಮಾರಕ ಅಭಿವೃದ್ಧಿಗೆ ಅನುದಾನ, ಕೋಲಾರದ ಅದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ವಿದ್ಯಾರ್ಥಿಗಳಿಗೆ ಏನು ಬಂಪರ್?
* ಕುರಿಗಾಹಿಗಳ ಮಕ್ಕಳಿಗೆ ವಿಶೇಷವಾಗಿ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಣೆ
* ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಡಿಪ್ಲೊಮಾ ಇನ್ ಲೆದರ್ And ಫ್ಯಾಷನ್ ಟೆಕ್ನಾಲಜಿ ಕೋರ್ಸ್ ಮಾಡಲು ಪ್ರೋತ್ಸಾಹ ಧನ
ನೀರಾವರಿಗೆ ಸಿದ್ದರಾಮಯ್ಯ ಕೊಡುಗೆ
ಮೇಕೆದಾಟು ಯೋಜನೆ ಶೀಘ್ರವೇ ಜಾರಿಗೆ ಕ್ರಮ
ಎತ್ತಿನಹೊಳೆ ಯೋಜನೆಯ ಎಲ್ಲ ಲಿಫ್ಟ್ ಕಾಮಗಾರಿ ಪೂರ್ಣಗೊಳಿಸಲು ತೀರ್ಮಾನ
ಕಳಸಾ-ಬಂಡೂರಿ ಯೋಜನೆ ಜಾರಿಯ ಅಡೆತಡೆ ನಿವಾರಣೆ
ಹಿಂದಿಗೆ ಸಿದ್ದು ಗುದ್ದು, ದ್ವಿಭಾಷಾ ನೀತಿ ಜಾರಿ
ರಾಜ್ಯದಲ್ಲಿ ತ್ರಿಭಾಷಾ ನೀತಿ ಅನ್ವಯ ಮೂರು ಭಾಷೆಗಳ ಬೋಧನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಕ್ ನೀಡಿದ್ದಾರೆ. ರಾಜ್ಯದ 2 ಸಾವಿರ ಶಾಲೆಗಳಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ದ್ವಿಭಾಷಾ ನೀತಿ ಜಾರಿಗೆ ಬರಲಿದ್ದು, ಹಿಂದಿಗೆ ಕೊಕ್ ನೀಡಲಾಗಿದೆ.
ಸುಸ್ಥಿ ಸಾಲದ ಬಡ್ಡಿ ಮನ್ನಾ
ಡಿಸಿಸಿ ಬ್ಯಾಂಕ್ ಹಾಗೂ ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಮಧ್ಯಮ ಹಾಗೂ ಸುದೀರ್ಘ ಅವಧಿಯ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಇದರಿಂದಾಗಿ 57 ಸಾವಿರ ರೈತರಿಗೆ ಅನುಕೂಲವಾಗಲಿದೆ.