ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿ ಬಜೆಟ್ (Karnataka Budget 2024) ಮಂಡಿಸಿದ್ದಾರೆ. ಗ್ಯಾರಂಟಿ ಸರ್ಕಾರದ ಎರಡನೇ ಬಜೆಟ್ ಇದಾಗಿದ್ದು, ಸಿದ್ದರಾಮಯ್ಯ (Siddaramaiah) ಅವರು ಕೃಷಿಕರು, ಮಹಿಳೆಯರು, ಹಿಂದುಳಿದವರು ಸೇರಿ ಸರ್ವರ ಏಳಿಗೆಗೆ ಆದ್ಯತೆ ನೀಡಿದ್ದಾರೆ. ಕರ್ನಾಟಕ ಬಜೆಟ್‌ನ ಕ್ಷಣಕ್ಷಣದ ಮಾಹಿತಿ (Karnataka Budget 2024 Live Updates) ಇಲ್ಲಿ ಲಭ್ಯ ಇದೆ.
ಕಲ್ಯಾಣ ಕರ್ನಾಟಕಕ್ಕೆ ಸರ್ಕಾರಿ ಶಾಲೆಗಳ ಕೊಡುಗೆ
ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದ ಉತ್ತೇಜನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಿದ್ದಾರೆ. ಕೆಕೆಆರ್‌ಡಿಬಿ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಪ್ರಗತಿ ಪಥ ಯೋಜನೆ
ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರು ಪ್ರಗತಿ ಪಥ ಯೋಜನೆ ಘೊಷಿಸಿದರು. ಸುಮಾರು 520 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 9,540 ಕಿ.ಮೀ ರಸ್ತೆ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಹಿರಿಯರಿಗೆ ಪಡಿತರ ವಿತರಿಸಲು ಹೊಸ ಯೋಜನೆ
ಹಿರಿಯ ನಾಗರಿಕರ ಮನೆಗಳಿಗೆ ಪಡಿತರವನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನ ಸುವಿಧಾ ಯೋಜನೆ ಘೋಷಿಸಿದರು. ಅನ್ನ ಸುವಿಧಾ ಯೋಜನೆ ಅಡಿಯಲ್ಲಿ 80 ವರ್ಷ ದಾಟಿದ ಹಿರಿಯ ನಾಗರಿಕರ ಮನೆಗಳಿಗೆ ಪಡಿತರ ವಿತರಿಸಲಾಗುತ್ತದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಭಾರಿ ಕೊಡುಗೆ
* ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ಫೋನ್ ನೀಡಲು ಸಿದ್ದು ತೀರ್ಮಾನ
* ಅಂಗನವಾಡಿ ಕಾರ್ಯಕರ್ತೆಯರಿಗೂ ಗ್ರಾಚ್ಯುಟಿ ಸೌಲಭ್ಯ ವಿಸ್ತರಣೆ
* ಲಿಂಗತ್ವ ಅಲ್ಪಸಂಖ್ಯಾತರ ಮಾಸಾಶನ 800 ರೂ.ನಿಂದ 1,200 ರೂ.ಗೆ ಏರಿಕೆ
ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ಸ್ಥಾಪನೆ
ಆಹಾರ ಸಂಸ್ಕರಣೆಗೆ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್ ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು. ವಿಜಯಪುರ ಜಿಲ್ಲೆಯ ಇಟ್ಟಂಗಿಹಾಳ, ಶಿವಮೊಗ್ಗ ಜಿಲ್ಲೆಯ ಸೋಗಾನೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಗೇನಹಳ್ಳಿ ಬಳಿ ಆಹಾರ ಪಾರ್ಕ್ ನಿರ್ಮಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.